ನ್ಯೂಸ್

ಗೈಡ್ ಮತ್ತು ಟ್ರಾವೆಲ್ಸ್ ಮಾಲಿಕರ ವಿರುದ್ಧ ಪ್ರಕರಣ

ವೀರೇಶ ಸೌದ್ರಿ

ಗೋಕರ್ಣ: ಕಳೆದ ಗುರುವಾರ ತಮಿಳುನಾಡಿನ ವಿದ್ಯಾರ್ಥಿನಿಯರಾದ ಕನ್ನಿಮೋಳಿ ಈಶ್ವರನ್ ಮತ್ತು ಹಿಂದುಜಾ ನಟರಾಜನ್ ಅವರ ಸಮುದ್ರದಲ್ಲಿ ಬಿದ್ದು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಟೂರ್ ಗೈಡ್ ಮತ್ತು ಅವರನ್ನು ಕರೆತಂದ ಟ್ರಾವೆಲ್ಸ್ ಮಾಲೀಕರ ವಿರುದ್ಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಮಿಳುನಾಡಿನ ಇರಮತ್ತೂರು ಗೈಡ್ ಗಾಂಧಿ ಶಿವಕುಮಾರ ಎಂಬಾತ ಯಾವುದೇ ಸುರಕ್ಷಾ ಕ್ರಮ ತೆಗೆದುಕೊಳ್ಳದೆ ನಿರ್ಲಕ್ಷ್ಯ ತೋರಿ ಸಮುದ್ರ ಬಳಿಯ ಜಟಾಯುತೀರ್ಥಕ್ಕೆ ಕರೆದೊಯ್ದಿದ್ದಾನೆ. ಚೆನ್ನೈನ ಟ್ರಾವೆಲ್ಸ್ ಮಾಲೀಕ ವೆಟ್ರಿ ಸೆಲ್ವನ್ ಎನ್ನುವವರು ಸರಿಯಾದ ಜ್ಞಾನವಿರದ ಬೇಜವಾಬ್ದಾರಿತನದ ಗೈಡ್‌ನನ್ನು ಪ್ರವಾಸಕ್ಕೆ ಬಂದ ವಿದ್ಯಾರ್ಥಿನಿಯರ ಜತೆ ಕಳಿಸಿಕೊಟ್ಟು ಇಬ್ಬರ ಸಾವಿಗೆ ಕಾರಣರಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ ಇರಿಸಲಾಗಿದ್ದ ವಿದ್ಯಾರ್ಥಿನಿಯರ ಶವವನ್ನು ಶುಕ್ರವಾರ ಪಾಲಕರಿಗೆ ಒಪ್ಪಿಸಲಾಗಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿದ ಎಸ್‌ಪಿ ಎಂ. ನಾರಾಯಣ ಪರಿಶೀಲನೆ ನಡೆಸಿ ತನಿಖಾಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆ ನೀಡಿದ್ದಾರೆ.