ಬೆಂಗಳೂರು: ನಗರ್ತಪೇಟೆಯ ಒಟಿಸಿ ರಸ್ತೆಯಲ್ಲಿರುವ ಶ್ರೀ ಜಲಕಂಠೇಶ್ವರ ದೇವಸ್ಥಾನದ ಗೋಡೆ ಕೆಡವಿದ ಬಿಬಿಎಂಪಿ ಅಧಿಕಾರಿ, ನೌಕರರ ವಿರುದ್ಧ ಹಲಸೂರುಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಉದಯ್ ಬಿ. ಗರುಡಾಚಾರ್, ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಬಿಬಿಎಂಪಿ ಅಧಿಕಾರಿ, ನೌಕರರ ವಿರುದ್ಧ ಎ್ಐಆರ್ ದಾಖಲಿಸಿ ಕಾನೂನು ಕ್ರಮ ತೆಗೆದುಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆ.1ರ ಬೆಳಗ್ಗೆ 9.30ರಲ್ಲಿ ಸ್ಥಳೀಯರಾದ ಪರಪ್ಪ, ಶಿವಶಂಕರ್, ಬಾಬು ಮತ್ತು ಸುರೇಶ್ ಕರೆ ಮಾಡಿ ಶ್ರೀಜಲಕಂಠೇಶ್ವರದೇವಸ್ಥಾನದ ಗೋಡೆಯನ್ನು ಬಿಬಿಎಂಪಿ ಅಧಿಕಾರಿಗಳು ಮುಂದಾಳತ್ವದಲ್ಲಿ ನೌಕರರು ಧ್ವಂಸ ಮಾಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ದೇವಸ್ಥಾನದ ಪಕ್ಕದಲ್ಲಿದ್ದ ಶೆಡ್‌ನ್ನು ತೆರವು ಮಾಡುವಾಗ ಬಿಬಿಎಂಪಿ ಅಧಿಕಾರಿಗಳು ಸಾವಿರಾರು ವರ್ಷದ ಹಳೆಯದಾದ ಶ್ರೀ ಜಲಕಂಠೇಶ್ವರ ದೇವಸ್ಥಾನದ ಗೋಡೆಯನ್ನು ಕೆಡವಿದ್ದಾರೆ. ಇದರ ಮೂಲಕ ಸಾರ್ವಜನಿಕ ಆಸ್ತಿಗೆ ನಷ್ಟ ಉಂಟು ಮಾಡಿರುತ್ತಾರೆ.
ಆದರಿಂದ ಸಂಬಂಧಪಟ್ಟ ಆರೋಪಿತರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಕೋರ್ಟ್‌ಗೆ ಖಾಸಗಿ ದೂರು ಸಲ್ಲಿಸಿದ್ದರು. 1ನೇ ಎಸಿಎಂಎಂ ನ್ಯಾಯಾಲಯ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಅನುಮತಿ ನೀಡಿದೆ. ಇದರ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.