ನ್ಯೂಸ್

ಸರ್ಕಾರದ ನಿರ್ದೇಶನದಂತೆ ಕೃಷಿ ಗಣತಿ ಕೈಗೊಳ್ಳಿ; ಡಾ.ನಂಜುಂಡೇಗೌಡ

ಮಡಿಕೇರಿ: ೫ ವರ್ಷಕ್ಕೊಮ್ಮೆ ಕೃಷಿ ಗಣತಿ ಕಾರ್ಯ ನಡೆಸಲಾಗುತ್ತಿದ್ದು, ಸರ್ಕಾರದ ನಿರ್ದೇಶನದಂತೆ ಕೃಷಿ ಗಣತಿ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡರವರು ಸೂಚಿಸಿದರು.


ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೃಷಿ ಗಣತಿ ಕೈಗೊಳ್ಳುವ ಸಂಬಂಧ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಡೇಟಾ ಸಂಗ್ರಹಣೆ ಅವಧಿ ಆ೨೨ ರಿಂದ ಡಿ೨೨ ರವರೆಗೆ ನಡೆಯಲಿದೆ. ಕೃಷಿ ಗಣತಿಯನ್ನು ಸರ್ಕಾರದ ನಿರ್ದೇಶನದಂತೆ ಕೈಗೊಳ್ಳಬೇಕು. ಕೃಷಿ ಗಣತಿ ಸಂಬಂಧ ವಿವಿಧ ಇಲಾಖೆಗಳ ಸಹಕಾರ ಪಡೆಯುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡರವರು ನಿರ್ದೇಶನ ನೀಡಿದರು.


ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಡಿ.ನಾರಾಯಣ ಮಾತನಾಡಿ, ಈಗಾಗಲೇ ಜಿಲ್ಲಾ ಮಟ್ಟದಲ್ಲಿ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ. ತಾಲೂಕು ಮಟ್ಟದಲ್ಲಿ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ. ಕೃಷಿ ಗಣತಿಯನ್ನು ಗ್ರಾಮ ಲೆಕ್ಕಿಗರು ಕೈಗೊಳ್ಳಲಿದ್ದು, ಕಂದಾಯ ನಿರೀಕ್ಷಕರು ಮೇಲ್ವಿಚಾರಣೆ ನಡೆಸಲಿದ್ದಾರೆ. ಸಾಗುವಳಿ ಹಿಡುವಳಿಯ ಸಂಖ್ಯೆ ಮತ್ತು ವಿಸ್ತೀರ್ಣ, ಭೂ ಬಳಕೆ, ಬೆಳೆ ವಿಧಾನ, ಇನ್‌ಫುಟ್ ಬಳಕೆಯ ವಿಧಾನ ಮತ್ತಿತರ ಆಧಾರದ ಮೇಲೆ ಕೃಷಿ ಕ್ಷೇತ್ರದ ರಚನೆ ಮತ್ತು ಗುಣಲಕ್ಷಣ ವಿವರಿಸುವುದು ಕೃಷಿ ಗಣತಿಯ ಉದ್ದೇಶವಾಗಿದೆ ಎಂದರು.


ಹೊಸ ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲು ಮತ್ತು ಅವುಗಳ ಪ್ರಗತಿಯನ್ನು ಮೌಲ್ಯಮಾಪನ ಮಾಡಲು ಅಗತ್ಯವಿರುವ ತಾಲೂಕು, ಗ್ರಾಮ ಮಟ್ಟದ ದತ್ತಾಂಶ ಒದಗಿಸಲಾಗುತ್ತದೆ. ಭವಿಷ್ಯದ ಕೃಷಿ ಸಮೀಕ್ಷೆಯನ್ನು ಕೈಗೊಳ್ಳಲು ಸಾಗುವಳಿ ಹಿಡುವಳಿಯ ಅಂಕಿ ಅಂಶಗಳ ಚೌಕಟ್ಟನ್ನು ಒದಗಿಸುವುದು ಕೃಷಿ ಗಣತಿಯ ಉದ್ದೇಶವಾಗಿದೆ ಎಂದು ವಿವರಿಸಿದರು.


ಕೃಷಿ ಗಣತಿ ಮತ್ತು ಸಮೀಕ್ಷೆಯನ್ನು ಗ್ರಾಮಗಳ ಅಪ್ಲಿಕೇಶನ್ ಸಾಫ್ಟ್‌ವೇರ್‌ನಲ್ಲಿ ಈ ಮೊದಲೇ ಭರ್ತಿಯಾದ ಗಣಕೀಕೃತ ಭೂ ದಾಖಲೆಗಳ ದತ್ತಾಂಶ ಬಳಕೆ ಮೂಲಕ ಕೃಷಿ ಗಣತಿ ಪ್ರಕ್ರಿಯೆ ಮಾಡಲಾಗುತ್ತದೆ. ದತ್ತಾಂಶ ಸಂಗ್ರಹಣೆಯಲ್ಲಿ ಅಂತರ್ ನಿರ್ಮಿತ ಮೌಲೀಕರಣ ಪರಿಶೀಲನೆಯೊಂದಿಗೆ ಟ್ಯಾಬ್‌ಗಳು, ಸ್ಮಾರ್ಟ್ ಪೋನ್‌ಗಳ ಬಳಕೆ, ವೆಬ್ ಪೋರ್ಟಲ್ ಮತ್ತು ಡ್ಯಾಶ್ ಬೋರ್ಡ್ ಮೂಲಕ ಮೇಲ್ವಿಚಾರಣೆ, ಮಾಲೀಕರು ಮತ್ತು ಹಿಡುವಳಿದಾರರ ಘಟಕವಾರು ಮಾಹಿತಿಯನ್ನು ಡಿಜಿಟಲೈಸ್ ಮಾಡಲಾಗುತ್ತದೆ. ಗ್ರಾಮ ಮಟ್ಟದಲ್ಲಿ ಡೇಟಾದ ಸಂಸ್ಕರಣೆ ಅಂದಾಜು ಮಾಡುವುದು, ಬಳಕೆದಾರರು ವ್ಯಾಖ್ಯಾನಿಸಿದ ಡೇಟಾ ಪ್ರಸರಣ ಕೋಷ್ಟಕ ರಚನೆ ಮತ್ತು ಪ್ರಸರಣ ಡ್ಯಾಶ್ ಬೋರ್ಡ್ ಮತ್ತಿತರ ಅಂಶಗಳನ್ನು ಕೃಷಿ ಗಣತಿ ಪ್ರಕ್ರಿಯೆಯಲ್ಲಿ ಮಾಡಲಾಗುತ್ತದೆ ಎಂದು ಹೇಳಿದರು.


ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.