ನ್ಯೂಸ್

ಕರೊನಾ ನಿಯಂತ್ರಿಸಲು ನಿಷೇಧಾಜ್ಞೆ ಜಾರಿ ; ಬುಧವಾರ 1199 ಜನರಿಗೆ ಸೋಂಕು ; ಚಿಕಿತ್ಸೆ ಸಿಗದೆ ನರಳಾಟ

Tumakuru

ತುಮಕೂರು : ಜಿಲ್ಲೆಯಲ್ಲಿ ಕರೊನಾ ಸೋಂಕು ಎಲ್ಲೆಮೀರಿದೆ. ಬುಧವಾರ 1199 ಜನರಿಗೆ ಸೋಂಕು ದೃಢವಾಗಿದ್ದು 69 ಜನರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಧುಗಿರಿ ತಾಲೂಕು ಜಕ್ಕೇನಹಳ್ಳಿಯ 38 ವರ್ಷದ ವ್ಯಕ್ತಿ ಹಾಗೂ ಗುಬ್ಬಿ ಮಾರುತಿನಗರದ 64 ವರ್ಷದ ವೃದ್ಧನನ್ನು ಕರೊನಾ ಬಲಿ ತೆಗೆದುಕೊಂಡಿದೆ. ತುಮಕೂರಿನ ಸ್ಮಶಾನದಲ್ಲಿ ಸರತಿಯಲ್ಲಿ ಮೃತದೇಹಗಳ ಅಂತ್ಯ ಸಂಸ್ಕಾರ ನಡೆಯುತ್ತಿದ್ದು ಆರೋಗ್ಯ ಇಲಾಖೆ ಎರಡು ಸಾವು ಎಂದು ವರದಿ ನೀಡಿದೆ.

ತುಮಕೂರು ನಗರದಲ್ಲಿ ಜನರು ಉಸಿರಾಡಲು ಅಂಜುವ ಸ್ಥಿತಿ ನಿರ್ಮಾಣವಾಗಿದ್ದು, ಬುಧವಾರ 637 ಜನರಿಗೆ ಕರೊನಾ ಬಂದಿದೆ. ಬಹುತೇಕರಿಗೆ ಚಿಕಿತ್ಸೆ ನೀಡುವುದು ಸಾಧ್ಯವಾಗುತ್ತಿಲ್ಲ. ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಅನಿವಾರ್ಯವಾಗಿ ರಾಜಾರೋಷವಾಗಿ ಓಡಾಡುತ್ತಿರುವ ದೂರುಗಳಿವೆ.

ತುಮಕೂರು ನಗರದಲ್ಲಿ ಜನರು ಭಯದಲ್ಲಿಯೇ ಓಡಾಡುವ ಸ್ಥಿತಿಯಿದೆ, ತುಮಕೂರಿಗೆ ಹತ್ತಿರದ ಗುಬ್ಬಿ ಪಟ್ಟಣದಲ್ಲಿಯೂ ಸೋಂಕಿತರ ಸಂಖ್ಯೆ ಶತಕ ದಾಟಿದ್ದು 109 ದಾಖಲಾಗಿದೆ. ಉಳಿದಂತೆ ತಿಪಟೂರು. ಕುಣಿಗಲ್, ಶಿರಾ ತಾಲೂಕಿನಲ್ಲಿ ಸೋಂಕು ಉಲ್ಭಣವಾಗುತ್ತಿದೆ. ಬಹುತೇಕ ಎಲ್ಲ ತಾಲೂಕಿನ ಹಳ್ಳಿಗಳಿಗೂ ಸೋಂಕು ಹೋಗಿದ್ದು ಭವಿಷ್ಯದ ದಿನದಲ್ಲಿ ಜನರು ತುಂಬ ಎಚ್ಚರಿಕೆ ವಹಿಸಬೇಕಿದೆ.

ಸರ್ಕಾರದ ಮಾರ್ಗಸೂಚಿ ಪಾಲಿಸಲು ಅಗತ್ಯ ಕ್ರಮಕೈಗೊಂಡಿರುವ ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಆದೇಶ ಹೊರಡಿಸಿದ್ದು, ವ್ಯಾಪಾರಸ್ಥರಿಗೆ ನಿಯಮಗಳ ಬಗ್ಗೆ ತಿಳಿಸಿದ್ದಾರೆ. ಅಗತ್ಯ ವಸ್ತುಗಳ ವ್ಯಾಪಾರಕ್ಕೆ ಅವಕಾಶ ನೀಡಿದ್ದಾರೆಯಾದರೂ ಕರೊನಾ ಮಾರ್ಗಸೂಚಿ ಪಾಲನೆ ಕಡ್ಡಾಯ.

ಬೇಕರಿ, ಹೋಟೆಲ್‌ಗಳಲ್ಲಿ ಪಾರ್ಸಲ್‌ಗೆ ಅವಕಾಶವಿದೆ, ಉದ್ಯಾನವನ, ಜಿಮ್, ಈಜುಕೊಳ ಮತ್ತಿತರರ ಮನರಂಜನಾ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ನಿರ್ಬಂಧವಿದೆ. ಕರೊನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುವುದು ಕಷ್ಟವಾಗಿದ್ದು ಕನಿಷ್ಠ ಕ್ಯಾತಸಂದ್ರ ಟ್ರಕ್ ಟರ್ಮಿನಲ್‌ನಲ್ಲಿ ಕೋವಿಡ್ ಕೇರ್ ಸೆಂಟರ್ ಆದರೂ ಆರಂಭಿಸಬೇಕು ಎಂದು ನಾಗರೀಕರು ಆಗ್ರಹಿಸಿದ್ದಾರೆ.

ಮೇ 4ವರೆಗೆ ನಿಷೇಧಾಜ್ಞೆ ಜಾರಿ : ಕರೊನಾ ನಿಯಂತ್ರಿಸಲು ರಾಜ್ಯ ಸರ್ಕಾರ ರೂಪಿಸಿರುವ ಮಾರ್ಗಸೂಚಿ ಬುಧವಾರ ರಾತ್ರಿಯಿಂದಲೇ ಜಾರಿಯಾಗಿದ್ದು ಸಾರ್ವಜನಿಕರ ಆರೋಗ್ಯ ಹಾಗೂ ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಏ.21ರ ರಾತ್ರಿ 9ರಿಂದ ಮೇ 4 ಬೆಳಗ್ಗೆ 6ರ ವರೆಗೂ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಆದೇಶಿಸಿದ್ದಾರೆ. ಆದೇಶ ಉಲ್ಲಂಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 51ರಿಂದ 60ರ ಜತೆಗೆ ಐಪಿಸಿ ಕಲಂ 188ರ ರೀತಿ ಕಾನೂನುಕ್ರಮ ಜರುಗಿಸಲಾಗುತ್ತದೆ.