ಗುವಾಹಟಿ: ಈ ಬಾರಿಯ ಶೌರ್ಯ ಪ್ರಶಸ್ತಿ ಪುರಸ್ಕೃತ 11 ವರ್ಷದ ಬಾಲಕಿ, ಮಿಜೋರಾಂನ ಕ್ಯಾರೋಲಿನ್ ಮಲ್ಸಾವ್ಮುಟ್ಲ್ವಾಂಗಿ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಕಳೆದ ವರ್ಷ ಜೂನ್ನಲ್ಲಿ ಕ್ಯಾರೋಲಿನ್ ಅಕ್ಕಪಕ್ಕದ ಮನೆಯ ಮಕ್ಕಳ ಜತೆ ಆಟವಾಡುತ್ತಿದ್ದಳು. ಅದೇ ಸಮಯದಲ್ಲಿ ಅಲ್ಲೊಂದು ಪರಿಚಯವೇ ಇಲ್ಲದ ಏಳುವರ್ಷದ ಮಗು ಆಟವಾಡಲು ಬಂತು. ಆದರೆ ಆ ಬಗ್ಗೆ ಕ್ಯಾರೋಲಿನ್ ಜಾಸ್ತಿ ಗಮನ ಕೊಟ್ಟಿರಲಿಲ್ಲ. ಆದರೆ ಮರುದಿನ ಪೊಲೀಸರು ಕ್ಯಾರೋಲಿನ್ ಮನೆಯಿದ್ದ ಏರಿಯಾಕ್ಕೆ ಬಂದು, ಲುಂಗ್ಲೆ ಜಿಲ್ಲೆಯ ಹೆಣ್ಣು ಮಗುವೊಂದು ಕಾಣೆಯಾಗಿರುವ ಬಗ್ಗೆ ಸ್ಥಳೀಯರಿಗೂ ಮಾಹಿತಿ ನೀಡುತ್ತಿದ್ದರು. ಅಲ್ಲದೆ ಬಾಲಕಿಯ ಫೋಟೋ ತೋರಿಸಿ, ಈಕೆ ಕಂಡು ಬಂದರೆ ನಮಗೆ ತಿಳಿಸಿ ಎಂದು ಹೇಳಿದರು.
ಕೂಡಲೇ ಕಾರ್ಯಪ್ರವೃತ್ತಳಾದ ಕ್ಯಾರೋಲಿನ್ ಬಾಲಕಿಯನ್ನು ಹುಡುಕಲು ಪ್ರಾರಂಭಿಸಿದರು. ಅತಿ ಶೀಘ್ರದಲ್ಲೇ ಆ ಬಾಲಕಿ ಪಕ್ಕದ ಮನೆಯಲ್ಲಿ ಇದ್ದುದನ್ನು ಪತ್ತೆಹಚ್ಚಿದಳು. ಆದರೆ ಬಾಲಕಿಯನ್ನು ಅಪಹರಿಸಿಕೊಂಡು ಬಂದಿದ್ದವ ಕ್ಯಾರೋಲಿನ್ಳನ್ನು ನೋಡಿ, ಆಕೆಗೆ ಅನುಮಾನ ಬರಬಾರದು ಎಂದು ಆಕೆಯನ್ನು ಕಳುಹಿಸಲು ಪ್ರಯತ್ನಿಸಿದನು. ಆದರೂ ಕಾದ ಕ್ಯಾರೋಲಿನ್, ಸಮಯ ನೋಡಿಕೊಂಡು ಆ ಬಾಲಕಿಯನ್ನು ಎತ್ತಿಕೊಂಡು ಓಡಲು ತೊಡಗಿದಳು. ಅಪಹರಣಕಾರ ಕ್ಯಾರೋಲಿನ್ಳತ್ತ ಕಲ್ಲು ಎಸೆದು ಆಕೆಯನ್ನು ತಡೆಯಲು ಪ್ರಯತ್ನಿಸಿದರೂ ಕ್ಯಾರೆ ಎನ್ನದ ಧೈರ್ಯಶಾಲಿ ಬಾಲಕಿ, ತನಗಿಂತ ಪುಟ್ಟ ಹುಡುಗಿಯನ್ನು ಬೆನ್ನ ಮೇಲೆ ಹಾಕಿಕೊಂಡು ಒಂದೇ ಉಸಿರಲ್ಲಿ ಮನೆಗೆ ಬಂದು ತಲುಪಿದಳು. ನಂತರ ತನ್ನ ತಂದೆ-ತಾಯಿಗೆ ಎಲ್ಲವನ್ನೂ ತಿಳಿಸಿದಳು.
ಕ್ಯಾರೋಲಿನ್ಳ ಸಾಹಸ ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಬಾರಿಯ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೂ ಆಕೆ ಭಾಜನಳಾದಳು. ತನ್ನ ಶೌರ್ಯವನ್ನು ಈಗಾಗಲೇ ತೋರಿದ್ದ ಕ್ಯಾರೋಲಿನ್ ಇದೀಗ ತನ್ನ ಮನಸು ನಿಷ್ಕಲ್ಮಶ ಎಂಬುದನ್ನು ಸಾಬೀತುಮಾಡಿದ್ದಾರೆ. ತನಗೆ ಬಂದ ರಾಷ್ಟ್ರೀಯ ಶೌರ್ಯ ಪ್ರಶಸ್ತಿಯಲ್ಲಿ ಅರ್ಧದಷ್ಟನ್ನು (ಶೇ.50-10,000ರೂ) ತಾನು ರಕ್ಷಿಸಿದ ಬಾಲಕಿಗೆ ಕೊಟ್ಟಿದ್ದಾಳೆ. ಅಷ್ಟೇ ಅಲ್ಲ ದೆಹಲಿಯಿಂದ ತೆಗೆದುಕೊಂಡು ಹೋದ ಬೆಳ್ಳಿಯ ನೆಕ್ಲೇಸ್, ಬಟ್ಟೆಗಳನ್ನು ಉಡುಗೊರೆ ನೀಡಿದ್ದಾಳೆ.
ಈ ಬಗ್ಗೆ ಮಾತನಾಡಿದ ಕ್ಯಾರೋಲಿನ್ ತಾಯಿ, ನನ್ನ ಮಗಳಿಗೆ ಆಕೆ ರಕ್ಷಿಸಿದ ಬಾಲಕಿಯೊಂದಿಗೆ ಭಾವನಾತ್ಮಕವಾಗಿ ಸ್ನೇಹ ಬೆಳೆದಿದೆ. ಅದರಲ್ಲೂ ಆಕೆ ಬಡ ಕುಟುಂಬದವಳು ಎಂದು ಗೊತ್ತಾದಾಗಿನಿಂದ ಸಹಾಯ ಮಾಡಲು ಇಚ್ಛಿಸುತ್ತಿದ್ದಳು. ಹಾಗಾಗಿ ತಾನು ಗೆದ್ದ ಪ್ರಶಸ್ತಿಯಲ್ಲಿಯೇ ಅರ್ಧಭಾಗ ನೀಡಿದ್ದಾಳೆ. ಆ ಬಾಲಕಿಯ ಮನೆಗೇ ಹೋಗಿ ಕೊಟ್ಟು ಬಂದಿದ್ದಾಳೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)