ನ್ಯೂಸ್

ಕಾರು ಬಾಡಿಗೆ ಪಡೆದು ಮಾರಾಟ; ಇಬ್ಬರ ಬಂಧನ, ಎಂಟು ಕಾರುಗಳು ವಶ

ಬೆಂಗಳೂರು: ಟ್ರಾವೆಲ್ಸ್ ಉದ್ಯಮಿಗಳ ಸೋಗಿನಲ್ಲಿ ಕಾರುಗಳನ್ನು ಬಾಡಿಗೆಗೆ ಪಡೆದು ಮಾರಾಟ ಮಾಡಿ ಮಾಲೀಕರಿಗೆ ವಂಚಿಸುತ್ತಿದ್ದ ಇಬ್ಬರನ್ನು ಯಲಹಂಕ ಉಪನಗರ ಪೊಲೀಸರು ಬಂಧಿಸಿದ್ದಾರೆ.

ವಿನಾಯಕನಗರದ ಖಲೀಲ್ ಉಲ್ಲಾ (34) ಕೆಂಚೇನಹಳ್ಳಿಯ ಅಕ್ಷಯ್ (24) ಬಂಧಿತರು. ಪ್ರಕರಣದ ಪ್ರಮುಖ ಆರೋಪಿಗಳಾದ ನಿರಂಜನ್, ಸೋಮಶೇಖರ್ ಮತ್ತು ಮಾದೇಶ್ ಎಂಬುವರು ತಲೆಮರೆಸಿಕೊಂಡಿದ್ದು ಬಂಧನಕ್ಕೆ ಬಲೆ ಬೀಸಲಾಗಿದೆ. 8 ಕಾರುಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಕಾರುಗಳನ್ನು ಬಾಡಿಗೆಗೆ ಕೊಡುವವರನ್ನು ಭೇಟಿ ಮಾಡಿ ಟ್ರಾವೆಲ್ಸ್ ಉದ್ಯಮಿಗಳೆಂದು ಪರಿಚಯಿಸಿಕೊಳ್ಳುತ್ತಿದ್ದರು. ಬಳಿಕ ಅವರಿಂದ ಕಾರು ಬಾಡಿಗೆಗೆ ಪಡೆದು, ಮೊದಲಿಗೆ ನಿಗದಿತ ದಿನದಂದು ಬಾಡಿಗೆ ಹಣ ಕೊಟ್ಟು ಮಾಲೀಕನ ವಿಶ್ವಾಸ ಗಿಟ್ಟಿಸಿಕೊಳ್ಳುತ್ತಿದ್ದರು. ನಂತರ ಕಾರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದು ಇಲ್ಲವೇ ಅಡಮಾನವಿಟ್ಟು ಹಣ ಪಡೆದು ಕಾರಿನ ಮಾಲೀಕನೊಂದಿಗೆ ಸಂಪರ್ಕ ಕಡಿದುಕೊಳ್ಳುತ್ತಿದ್ದರು.

ದಾಸನಪುರದ ವಿಜಯ್ ಗೌಡ ಎಂಬುವರನ್ನು ನಿರಂಜನ್ ಭೇಟಿ ಮಾಡಿ, ಟ್ರಾವೆಲ್ಸ್ ಉದ್ಯಮಿ ಎಂದು ಪರಿಚಯಿಸಿಕೊಂಡಿದ್ದ. ಉದ್ಯಮಕ್ಕೆ ಬಾಡಿಗೆ ಕಾರುಗಳು ಬೇಕಾಗಿವೆ ಎಂದು ನಂಬಿಸಿದ್ದ. ಬಳಿಕ ಅವರಿಂದ ಸ್ವಿಫ್ಟ್ ಡಿಸೈರ್ ಕಾರನ್ನು ಪಡೆದು, ತಿಂಗಳಿಗೆ 18 ಸಾವಿರ ರೂ. ಬಾಡಿಗೆ ಕೊಡುವುದಾಗಿ ಕರಾರು ಪತ್ರ ಬರೆದುಕೊಟ್ಟಿದ್ದ. ಮೊದಲ ಎರಡು ತಿಂಗಳ ಕಾರಿನ ಬಾಡಿಗೆ ಹಣ ಕೊಟ್ಟು ನಂಬಿಕೆ ಗಿಟ್ಟಿಸಿಕೊಂಡಿದ್ದ.

ಹೆಚ್ಚು ಬಾಡಿಗೆ ಆಸೆ: ಹೆಚ್ಚು ಬಾಡಿಗೆ ಸಿಗುತ್ತದೆ ಹಾಗೂ ಕಾರು ಕಂಡೀಷನ್ ಚೆನ್ನಾಗಿರುತ್ತದೆ ಎಂಬ ಆಸೆಯಿಂದ ವಿಜಯ್ ಗೌಡ ತನ್ನ ಸ್ನೇಹಿತರನ್ನು ನಿರಂಜನ್​ಗೆ ಪರಿಚಯಿಸಿದ್ದರು. ಬಳಿಕ ನಿರಂಜನ್ ತನ್ನ ಸ್ನೇಹಿತರಾದ ಖಲೀಲ್ ಉಲ್ಲಾ, ಅಕ್ಷಯ್, ಮಾದೇಶ್, ಸೋಮಶೇಖರ್​ನನ್ನು ಕರೆದೊಯ್ದು ವಿಜಯ್ ಗೌಡ ಅವರ ಸ್ನೇಹಿತರಿಗೆ ಭೇಟಿ ಮಾಡಿಸಿದ್ದ. ಅವರೆಲ್ಲರೂ ಕಾರು ಮಾಲೀಕರಿಗೆ ಒಂದಷ್ಟು ಮುಂಗಡ ಹಣ ಕೊಟ್ಟು 6 ಕಾರುಗಳನ್ನು ಬಾಡಿಗೆಗೆ ತೆಗೆದುಕೊಂಡು ಹೋಗಿದ್ದರು. ಇದಾದ ಕೆಲ ದಿನಗಳ ನಂತರ ಸಂಪರ್ಕ ಕಡಿದುಕೊಂಡಿದ್ದರು.

ಇವರೆಲ್ಲರೂ ಸೇರಿ ಕಾರುಗಳನ್ನು ಮಾರಾಟ ಮಾಡಿರುವ ಬಗ್ಗೆ ವಿಜಯ್ ಗೌಡ ಅವರಿಗೆ ಶಂಕೆ ಮೂಡಿತ್ತು. ನಿರಂಜನ್, ಮಾದೇಶ್ ಮತ್ತು ಸೋಮಶೇಖರ್ ವಿರುದ್ಧ ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಕಾರುಗಳ ಪತ್ತೆಗಾಗಿ ವಿವಿಧ ಠಾಣೆಗಳಿಗೆ ಮಾಹಿತಿ ರವಾನಿಸಲಾಗಿತ್ತು. ಮಂಡ್ಯದಲ್ಲಿ ಸ್ವಿಫ್ಟ್ ಡಿಸೈರ್ ಕಾರು ಪತ್ತೆಯಾಗಿತ್ತು. ಕಾರು ತೆಗೆದುಕೊಂಡಿದ್ದ ವ್ಯಕ್ತಿಯನ್ನು ವಿಚಾರಿಸಿದಾಗ ಆರೋಪಿಗಳು ಸಿಕ್ಕಿಬಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಎರಡು ಲಕ್ಷ ರೂ.ಗಳಿಗೆ ವಾಹನಗಳ ಅಡಮಾನ

ಆರೋಪಿ ನಿರಂಜನ್ ಬೇರೆಬೇರೆ ಊರುಗಳಿಗೆ ತೆರಳಿ ಜನರನ್ನು ಪರಿಚಯಿಸಿ ಕೊಳ್ಳುತ್ತಿದ್ದ. ತುರ್ತಾಗಿ ಹಣ ಬೇಕಿದ್ದು, ಕಾರು ಮಾರಾಟ ಮಾಡುತ್ತಿರುವುದಾಗಿ ನಂಬಿಸುತ್ತಿದ್ದ. ಅಲ್ಲದೆ, ಬಾಡಿಗೆ ಸಂದರ್ಭದಲ್ಲಿ ಮಾಲೀಕನಿಂದ ಪಡೆದುಕೊಂಡಿದ್ದ ಕಾರಿನ ದಾಖಲೆಗಳನ್ನು ತೋರಿಸಿ ತನ್ನ ಹೆಸರಿನಲ್ಲಿದೆ ಎಂದು ಮನವರಿಕೆ ಮಾಡಿಕೊಡುತ್ತಿದ್ದ. 3 ಲಕ್ಷ ರೂ.ಗೆ ಒತ್ತಾಯಿಸಿ ಕೊನೆಗೆ 2 ಲಕ್ಷ ರೂ.ಗಳಿಗೆ ವ್ಯವಹಾರ ಕುದುರಿಸಿಕೊಳ್ಳುತ್ತಿದ್ದ. ಕೆಲವರು ಕಡಿಮೆ ಬೆಲೆಗೆ ಒಳ್ಳೆಯ ಕಾರು ಸಿಗುತ್ತದೆ ಎಂದು ಹಣ ಕೊಡುತ್ತಿದ್ದರು. ಅಲ್ಲದೆ, ಕಾರುಗಳನ್ನು ಅಡಮಾನವಿಟ್ಟು ಕೆಲವರಿಂದ ಹಣ ಪಡೆದುಕೊಂಡಿದ್ದಾನೆ. ಹಣ ವಾಪಸ್ ತಂದುಕೊಟ್ಟು ಕಾರು ತೆಗೆದುಕೊಂಡು ಹೋಗುವುದಾಗಿ ನಂಬಿಸಿ ವಂಚಿಸಿದ್ದಾನೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಡಾ. ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.