ನ್ಯೂಸ್

ನಿರ್ಮಾಣ ಹಂತದ ಕಲ್ವರ್ಟ್​ಗೆ ಉರುಳಿದ ಕಾರು; ಮಗು ಸೇರಿದಂತೆ ನಾಲ್ಕು ಮಂದಿ ಸಾವು

ಗುವಾಹಟಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ನಿರ್ಮಾಣ ಹಂತದ ಕಲ್ವರ್ಟ್​ಗೆ (Culvert) ಉರುಳಿದ ಪರಿಣಾಮ ಮಗು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ಅಸ್ಸಾಂನ (Assam) ತಿನ್ಸುಕಿಯಾ-ದಿಬ್ರುಗಢ್ ಮಾರ್ಗದ ದಿಹಿಂಗಿಯಾ ಗಾಂವ್​ನ ಬೈಪಾಸ್​ನಲ್ಲಿ (Bypass) ನಡೆದಿದೆ.

ಮೃತರನ್ನು ಮೋಹನ್ ಶಾ, ರಾಜೇಶ್ ಗುಪ್ತಾ, ಮೊಂಟು ಶಾ ಮತ್ತು  ಅಥರ್ವ್​ ಗುಪ್ತಾ ಎಂದು ಗುರುತಿಸಲಾಗಿದ್ದು, ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ದಿಬ್ರುಗಢ್‌ನಲ್ಲಿರುವ ಅಸ್ಸಾಂ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಕುರಿತು ಮಾತನಾಡಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಬಿಹಾರದಿಂದ ಮದುವೆಗೆಂದು ತಿನ್ಸುಕಿಯಾಗೆ ತೆರಳುತ್ತಿದ್ದ ಅಪಘಾತ ಸಂಭವಿಸಿದ್ದು, ದಿಬ್ರುಗಢದಿಂದ ತಿನ್ಸುಕಿಯಾ ಕಡೆ ಹೋಗುತ್ತಿದ್ದ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ನಿರ್ಮಾಣ ಹಂತದ ಕಲ್ವರ್ಟ್​ಗೆ ಉರುಳಿದೆ.

ಅಪಘಾತದ ಸಂಭವಿಸಿದ ವೇಳೆ ಕಾರಿನಲ್ಲಿ ಮಗು ಸೇರಿದಂತೆ ಒಟ್ಟು ಆರು ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಮಗು ಸೇರಿದಂತೆ ನಾಲ್ಕು ಮಂದಿ ಮೃತಪಟ್ಟಿದ್ದು, ಗಾಯಾಳುಗಳನ್ನು ದಿಬ್ರುಗಢ್‌ನಲ್ಲಿರುವ ಅಸ್ಸಾಂ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ದಟ್ಟವಾದ ಮಂಜು ಮತ್ತು ಸರಿಯಾದ ಸೂಚನಾ ಫಲಕಗಳಿಲ್ಲದ ಕಾರಣ ಈ ಘಟನೆ ಸಂಭವಿಸಿರಬಹುದು. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.