ಉತ್ತರಪ್ರದೇಶ: ಭಕ್ತರನ್ನು ದೇವಸ್ಥಾನಕ್ಕೆ ಕರೆದೊಯ್ಯುತ್ತಿದ್ದ ಬೊಲಾರೊ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ, ಸರಯು ಕಾಲುವೆಗೆ ಉರುಳಿ ಬಿದ್ದಿದೆ. ಈ ಅಪಘಾತದಲ್ಲಿ 11 ಜನರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇಂದು (ಜು.03) ಬೆಳಗ್ಗೆ ಗೊಂಡಾ ಜಿಲ್ಲೆಯ ಇಟಿಯಾ ಥೋಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಭೀಕರ ಅಪಘಾತ ನಡೆದಿದ್ದು, ನೀರಿನಲ್ಲಿ ಮುಳುಗುತ್ತಿದ್ದ ಭಕ್ತಾಧಿಗಳನ್ನು ಉಳಿಸುವಲ್ಲಿ ಸ್ಥಳೀಯರು ವಿಫಲರಾಗಿದ್ದಾರೆ. ಕಾರಿನಲ್ಲಿ ಒಟ್ಟು 15 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಇವರೆಲ್ಲರೂ ಸ್ಥಳೀಯ ಪೃಥ್ವಿನಾಥ ದೇವಸ್ಥಾನಕ್ಕೆ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಸ್ತುತ, 11 ಮಂದಿ ಸ್ಥಳದಲ್ಲೇ ದಾರುಣ ಅಂತ್ಯ ಕಂಡಿದ್ದು, ನಾಲ್ವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಈ ನಾಲ್ವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆ ಕೊಡಿಸಲಾಗಿದೆ. ಮೃತರನ್ನು ನಗರದ ಸಿಹಗಾಂವ್ ನಿವಾಸಿಗಳು ಎಂದು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಈ ದುರಂತದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿ. ಐದು ಲಕ್ಷ ರೂ. ಪರಿಹಾರ ಹಣ ಘೋಷಿಸಿದ್ದಾರೆ,(ಏಜೆನ್ಸೀಸ್).