ಬೆಂಗಳೂರು: ಅತಿ ವೇಗವಾಗಿ ಚಲಾಯಿಸುತ್ತಿದ್ದ ಕಾರು ಯಶವಂತಪುರ ಸರ್ಕಲ್ ಪ್ಲೈಓವರ್‌ನಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಎದುರಿಗೆ ಬಂದ ಬೈಕ್‌ಗೆ ಗುದ್ದಿ ಕೆಳಗೆ ಪಲ್ಟಿಯಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಓರ್ವ ಮೃತಪಟ್ಟಿದ್ದು, ಬೈಕ್ ಸವಾರ, ಯುವತಿ ಸೇರಿ ನಾಲ್ವರು ಗಾಯಗೊಂಡಿದ್ದಾರೆ.
ತಮಿಳುನಾಡಿನ ಸೇಲಂ ಮೂಲದ ಸ್‌ಟಾವೇರ್ ಇಂಜಿನಿಯರ್ ಶಬರೀಶ್ (29) ಮೃತ ಟೆಕ್ಕಿ. ಈತನ ಸ್ನೇಹಿತ ಕಾರು ಚಾಲಕ ಮಿಥುನ್ ಚಕ್ರವರ್ತಿ (28), ಪ್ರಯಾಣಿಕರಾದ ಶಂಕರ್ ರಾವ್, ಈತನ ಸಹೋದರಿ ಅನುಶ್ರೀ (23) ಹಾಗೂ ಕಾಚರಕನಹಳ್ಳಿ ನಿವಾಸಿ ಬೈಕ್ ಸವಾರ ಮಂಜುನಾಥ್ (38) ಗಾಯಗೊಂಡವರು. ಮಿಥುನ್ ಚಕ್ರವರ್ತಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಉಳಿದವರು ಪ್ರಾಣಾಪಾಯದಿಂದ ಪರಾಗಿದ್ದಾರೆ ಎಂದು ಉತ್ತರ ಸಂಚಾರ ವಿಭಾಗ ಡಿಸಿಪಿ ಸಿರಿಗೌರಿ ತಿಳಿಸಿದ್ದಾರೆ.
ಇಂಜಿನಿಯರ್‌ಗಳಾದ ಶಂಕರ್ ರಾವ್ ಮತ್ತು ಸಹೋದರಿ ಅನುಶ್ರೀ ಮಲ್ಲೇಶ್ವರದಲ್ಲಿ ನೆಲೆಸಿದ್ದರು. ತಮಿಳುನಾಡಿನಲ್ಲಿ ನೆಲೆಸಿದ್ದ ಶಬರೀಶ್ ಮತ್ತು ಮಿಥುನ್, ವೀಸಾ ಪಡೆಯುವ ಉದ್ದೇಶಕ್ಕೆ ಕಾರಿನಲ್ಲಿ ಸೋಮವಾರ ಬೆಂಗಳೂರಿಗೆ ಬಂದಿದ್ದರು. ಸ್ನೇಹಿತರಾದ ಶಂಕರ್ ಮತ್ತು ಅನುಶ್ರೀ ಭೇಟಿ ಮಾಡಿದ್ದರು. ಬಳಿಕ ಎಲ್ಲರೂ ಡಾ. ರಾಜ್‌ಕುಮಾರ್ ರಸ್ತೆಯಲ್ಲಿರುವ ಓರಾಯನ್ ಮಾಲ್‌ಗೆ ಭೇಟಿ ಕೊಟ್ಟು, ವಿದೇಶಕ್ಕೆ ಹೋಗಲು ಬೇಕಾದ ವಸ್ತುಗಳನ್ನು ಖರೀದಿಸಿದ್ದರು. ವಾಪಸ್ ಮಲ್ಲೇಶ್ವರದ ಮನೆಗೆ ಹೋಗಿ ಪಾರ್ಟಿ ಮಾಡಿದ್ದರು.
ಬೆಳಗಿನ ಜಾವ 3.50ರಲ್ಲಿ ಮತ್ತೆ ಏನಾದರೂ ತಿನ್ನುವ ಉದ್ದೇಶಕ್ಕೆ ಅಲ್ಲಿಂದ ಹೊರಟು ಮಲ್ಲೇಶ್ವರ ಮಾರ್ಗವಾಗಿ ಸದಾಶಿವನಗರ ಸ್ಯಾಂಕಿ ರಸ್ತೆಯಿಂದ ತುಮಕೂರು ರಸ್ತೆ ಕಡೆಗೆ ಸಾಗಲು ವೇಗವಾಗಿ ಕಾರನ್ನು ಮಿಥುನ್ ಚಲಾಯಿಸಿಕೊಂಡು ಬಂದಿದ್ದಾನೆ. ಸ್ನೇಹಿತರ ಜತೆ ಹರಟೆ ಹೊಡೆಯುತ್ತ ಯಶವಂತಪುರ ಸರ್ಕಲ್ ಫ್ಲೈಓವರ್ ಮೇಲೆ ಸಾಗುತ್ತಿದ್ದಾಗ ತಿರುವಿನಲ್ಲಿ ಕಾರು ನಿಯಂತ್ರಣ ತಪ್ಪಿ ಫ್ಲೈಓವರ್‌ನಲ್ಲಿ ಡಿವೈಡರ್‌ಗೆ ಅಪ್ಪಳಿಸಿ ಪಕ್ಕದ ರಸ್ತೆಗೆ ತಲುಪಿ ಎದುರಿಗೆ ಬರುತ್ತಿದ್ದ ಬೈಕ್‌ಗೆ ಗುದ್ದಿದೆ. ಪಲ್ಟಿಯಾಗಿ ಫ್ಲೈಓವರ್‌ನಿಂದ 40 ಅಡಿ ಕೆಳಗೆ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ಅನುಶ್ರೀ ಪ್ಲೈಓವರ್ ಮೇಲೆಯೇ ಬಿದ್ದಿದ್ದು, ಉಳಿದ ನಾಲ್ವರು ಕಾರುಸಮೇತ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಎಲೆಕ್ಟ್ರಿಷಿಯನ್ ಮಂಜುನಾಥ್, ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ಕಾರು ಗುದ್ದಿದೆ. ಕಾರು ಬಿದ್ದ ಶಬ್ದ ಕೇಳಿ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ ಎಲ್ಲರನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಿದರು.
ಗಂಭೀರ ಗಾಯಗೊಂಡಿದ್ದ ಶಬರೀಶ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಸಂಚಾರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.