ನ್ಯೂಸ್

ದುರ್ಗಾ ಪ್ರತಿಮೆಯ ವಿಸರ್ಜನೆಗೆ ತೆರಳುತ್ತಿದ್ದ ಭಕ್ತರ ಮೇಲೆ ಹರಿದ ಕಾರು

rashmirhebbur

ರಾಯಪುರ: ದಸರಾ ಕೊನೆಯ ದಿನವಾಗಿದ್ದ ಶುಕ್ರವಾರದಂದು ದುರ್ಗಾ ಮಾತೆಯ ಪ್ರತಿಮೆಯನ್ನು ವಿಸರ್ಜನೆಗಾಗಿ ತೆಗೆದುಕೊಂಡು ಹೋಗುತ್ತಿದ್ದ ಭಕ್ತರ ಮೇಲೆ ವೇಗವಾಗಿ ಚಲಿಸುತ್ತಿದ್ದ ಕಾರೊಂದು ಹರಿಹಾಯ್ದಿರುವ ಪ್ರಕರಣ ನಡೆದಿದೆ. ಛತ್ತೀಸಗಡದ ಜಶ್​ಪುರದಲ್ಲಿ ಸಂಭವಿಸಿರುವ ಈ ದುರ್ಘಟನೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದರೆ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ; 15 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಅತಿವೇಗವಾಗಿ ಕಾರನ್ನು ಚಲಿಸಿ ಸಾವುನೋವಿಗೆ ಕಾರಣರಾದ ಬಬ್ಲು ವಿಶ್ವಕರ್ಮ ಮತ್ತು ಶಿಶುಪಾಲ್ ಸಾಹು ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಈರ್ವರೂ ಆರೋಪಿಗಳು ಮಧ್ಯಪ್ರದೇಶದ ನಿವಾಸಿಗಳಾಗಿದ್ದು, ಛತ್ತೀಸಗಡದ ಮೂಲಕ ಹಾದುಹೋಗುತ್ತಿದ್ದರು. ಆಗ ಪಾಥಲ್​ಗಾವ್​ ಗ್ರಾಮದ ಮುಖ್ಯರಸ್ತೆಯಲ್ಲಿ ಈ ದುರಂತ ನಡೆದಿದೆ ಎನ್ನಲಾಗಿದೆ.

ಆರೋಪಿಗಳ ವಿರುದ್ಧ ಐಪಿಸಿ ಕಲಂ 302 ಮತ್ತು 304 ರಡಿ ಕೊಲೆ ಮತ್ತು ನಿರ್ಲಕ್ಷ್ಯದಿಂದ ಸಾವಿಗೆ ಕಾರಣರಾದ ಆರೋಪಗಳ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಶ್​ಪುರ್​ ಎಸ್ಪಿ ವಿಜಯ್​ ಅಗರ್ವಾಲ್ ಹೇಳಿದ್ದಾರೆ. ದುರ್ಘಟನೆಯ ಹಿನ್ನೆಲೆಯಲ್ಲಿ ಪಾಥಲ್​ಗಾವ್​ ಪೊಲೀಸ್​​ ಠಾಣಾಧಿಕಾರಿ ಮತ್ತು ಸಹಾಯಕ ಸಬ್​ಇನ್ಸ್​ಪೆಕ್ಟರನ್ನು ಅಮಾನತ್ತುಗೊಳಿಸಲಾಗಿದೆ ಎಂದಿದ್ದಾರೆ. (ಏಜೆನ್ಸೀಸ್)