ನ್ಯೂಸ್

ಹೇಮಾವತಿ ಎಡದಂಡೆ ನಾಲೆಯಲ್ಲಿ ಕಾರು ಪತ್ತೆ

ಹಾಸನ: ಹೊಳೆನರಸೀಪುರ ತಾಲೂಕು ಹಳೇಕೋಟೆ ಹೋಬಳಿ ಹರಳಹಳ್ಳಿ ಸಮೀಪದ ಹೇಮಾವತಿ ಎಡದಂಡೆ ನಾಲೆಯಲ್ಲಿ ಭಾನುವಾರ ಬೆಳಗ್ಗೆ ಕಾರೊಂದು ಪತ್ತೆಯಾಗಿದೆ.

ಹಾಸನ ತಾಲೂಕು ಕರಿಗೌಡನಕೊಪ್ಪಲು ಗ್ರಾಮದ ಪ್ರೇಮಕುಮಾರ್ (38) ಅವರಿಗೆ ಸೇರಿದ ಕಾರು ಎಂದು ತಿಳಿದು ಬಂದಿದೆ. ಪ್ರೇಮಕುಮಾರ್ ನಾಪತ್ತೆಯಾಗಿರುವುದಾಗಿ ತಂದೆ ತಿಮ್ಮೇಗೌಡ ಶನಿವಾರವಷ್ಟೇ ಮಗ ನಾಪತ್ತೆಯಾಗಿದ್ದಾನೆ ಎಂದು ರುವ ಕುರಿತು ಶಾಂತಿಗ್ರಾಮ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಆದರೆ ಆತ ಆ.17ರಿಂದ ನಾಪತ್ತೆಯಾಗಿದ್ದಾನೆ. ಪ್ರೇಮಕುಮಾರ್‌ನ ತಂದೆ ತಿಮ್ಮೇಗೌಡ ಶನಿವಾರವಷ್ಟೇ ಮಗ ನಾಪತ್ತೆಯಾಗಿರುವ ಕುರಿತು ಶಾಂತಿಗ್ರಾಮ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಾರನೇ ದಿನವೇ ನಾಲೆಯಲ್ಲಿ ಕಾರು ಪತ್ತೆಯಾಗಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.

ಆತಹತ್ಯೆ ಶಂಕೆ: ಕಾರು ಮಗುಚಿದ ರೀತಿಯಲ್ಲಿ ಪತ್ತೆಯಾಗಿದ್ದು, ಒಂದು ಭಾಗದ ಕಿಟಕಿ ಸಂಪೂರ್ಣ ಒಡೆದಿದೆ. ಪ್ರೇಮಕುಮಾರ್ ವಿಪರೀತ ಸಾಲ ಮಾಡಿಕೊಂಡಿದ್ದರು. ಸಾಲಗಾರರ ಕಿರುಕುಳ ತಾಳಲಾರದೆ ಕಾರು ಸಮೇತ ನಾಲೆಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಭಾನುವಾರ ಇಡೀ ದಿನ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶೋಧಕಾರ್ಯ ನಡೆಸಿದರೂ ಪ್ರೇಮ ಕುಮಾರ್ ಪತ್ತೆಯಾಗಿಲ್ಲ.

ಮತ್ತೊಂದು ವಾದದ ಪ್ರಕಾರ ಸಾಲಗಾರರ ಕಿರುಕುಳ ತಾಳಲಾರದೆ ಪ್ರೇಮಕುಮಾರ್‌ನೇ ನಾಲೆಗೆ ಕಾರು ಬಿಟ್ಟು ನಾಪತ್ತೆಯಾಗಿರಬಹುದು. ಆತಹತ್ಯೆ ಮಾಡಿಕೊಂಡಿರಬಹುದೆಂದು ನಂಬಿಸಲು ಹೀಗೆ ಮಾಡಿರಬಹುದು ಎನ್ನಲಾಗಿದೆ. ಅದಕ್ಕೆ ಪುಷ್ಟಿ ನೀಡಿದ್ದು ಪ್ರೇಮಕುಮಾರ್‌ನ ಮೊಬೈಲ್ ನಂಬರ್. ತನ್ನ ಆಧಾರ್ ಕಾರ್ಡ್ ಸಹಾಯದಿಂದ ಸಿಮ್ ಖರೀದಿಸಿದ್ದ ಆತ ಅದನ್ನು ಬಳಕೆಗಾಗಿ ತನ್ನ ಹೆಂಡತಿಗೆ ಕೊಟ್ಟಿದ್ದಾನೆ. ಭಾನುವಾರ ಬೆಳಗ್ಗೆ ಫೋನ್ ಮಾಡಿದಾಗ ರಿಂಗ್ ಆಯಿತಾದರೂ ಕರೆ ಸ್ವೀಕರಿಸಲಿಲ್ಲ. ಆ ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿದೆ. ಮೊಬೈಲ್ ನೀರಿನಲ್ಲಿ ಮುಳುಗಿದ್ದರೆ ರಿಂಗ್ ಆಗುತ್ತಿರಲಿಲ್ಲ ಅಥವಾ ಮತ್ತೊಮೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗುತ್ತಿರಲಿಲ್ಲ. ಆತನ ಹೆಂಡತಿಯೂ ಪೊಲೀಸರ ಸಂಪರ್ಕಕ್ಕೆ ಸಿಕ್ಕಿಲ್ಲ. ಹೀಗಾಗಿ ಇದು ವ್ಯವಸ್ಥಿತ ಪಿತೂರಿಯೋ ಅಥವಾ ಪ್ರೇಮಕುಮಾರ್ ನಾಲೆಯಲ್ಲಿ ಮುಳುಗಿದ್ದಾನೆಯೋ ಎಂಬ ಅನುಮಾನ ಕಾಡುತ್ತಿದೆ. ದೊಡ್ಡಕುಂಚೇವು ಗ್ರಾಮದಲ್ಲಿ ಪೊಲೀಸರು ಸಂಜೆ ವರೆಗೆ ಶೋಧ ಕಾರ್ಯ ನಡೆಸಿದರು.