ನವದೆಹಲಿ: ಸೋಮವಾರ(ನ. 10) ಸಂಜೆ 6.30ರ ಸುಮಾರಿಗೆ ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟದ ಸ್ಥಳಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದಕ್ಕೂ ಮೊದಲು ಎಲ್ಎನ್ಜೆಪಿ ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಪರಾಮರ್ಶಿಸಿದ್ದರು.
ಇನ್ನೂ ಘಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅಮಿತ್ ಶಾ, ಘಟನೆಯನ್ನು ಎಲ್ಲಾ ಕೋನಗಳಿಂದಲೂ ತನಿಖೆ ಮಾಡಲಾಗುವುದು. ಸಂಜೆ 7 ಗಂಟೆಗೆ ಸ್ಫೋಟ ಸಂಭವಿಸಿದೆ. ಕೆಂಪು ಕೋಟೆ ಬಳಿಯ ಸುಭಾಷ್ ಮಾರ್ಗ್ ಟ್ರಾಫಿಕ್ ಸಿಗ್ನಲ್‌ನಲ್ಲಿ ಹುಂಡೈ ಐ20 ಕಾರು ಸ್ಫೋಟಗೊಂಡಿದೆ. ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪಾದಚಾರಿಗಳು ಗಾಯಗೊಂಡಿದ್ದಾರೆ ಮತ್ತು ಕೆಲವು ವಾಹನಗಳು ಹಾನಿಗೊಳಗಾಗಿವೆ.
ಸ್ಫೋಟವಾದ 10 ನಿಮಿಷಗಳಲ್ಲಿ ದೆಹಲಿ ಅಪರಾಧ ವಿಭಾಗ ಮತ್ತು ದೆಹಲಿ ವಿಶೇಷ ಶಾಖೆಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಎನ್‌ಎಸ್‌ಜಿ, ಎನ್‌ಐಎ ತಂಡಗಳು ಹಾಗೂ ಎಫ್‌ಎಸ್‌ಎಲ್ ತಂಡಗಳು ತನಿಖೆ ನಡೆಸುತ್ತಿವೆ. ಹತ್ತಿರದ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲು ಆದೇಶಿಸಿದ್ದೇವೆ. ನಾನು ದೆಹಲಿ ಪೊಲೀಸರು ಮತ್ತು ವಿಶೇಷ ಶಾಖೆಯ ಉಸ್ತುವಾರಿಯೊಂದಿಗೆ ಮಾತನಾಡಿದ್ದೇನೆ. ಇಬ್ಬರೂ ಸ್ಥಳದಲ್ಲಿದ್ದಾರೆ. ಎಲ್ಲಾ ಅಂಶಗಳನ್ನು ಪರಿಗಣಿಸಿ ಸಂಪೂರ್ಣ ತನಿಖೆ ನಡೆಸುತ್ತೇವೆ. ನಾವು ಸಾರ್ವಜನಿಕರಿಗೆ ವಿವರಗಳನ್ನು ತಿಳಿಸುತ್ತೇವೆ ಎಂದು ಹೇಳಿದ್ದಾರೆ.
ನಾವು ಎಲ್ಲಾ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದೇವೆ. ಘಟನೆಗೆ ಕಾರಣವೇನೆಂದು ಈಗ ಹೇಳುವುದು ತುಂಬಾ ಕಷ್ಟ. ಸ್ಫೋಟ ಸ್ಥಳದಿಂದ ವಶಪಡಿಸಿಕೊಂಡ ಮಾದರಿಗಳನ್ನು FSL ಮತ್ತು NSG ವಿಶ್ಲೇಷಿಸುವವರೆಗೆ, ಅದರ ಬಗ್ಗೆ ಏನನ್ನೂ ಹೇಳುವುದು ಕಷ್ಟ. ಆದಾಗ್ಯೂ, ನಾವು ಯಾವುದೇ ಕೋನವನ್ನು ಮುಚ್ಚಿಡುವುದಿಲ್ಲ. ಎಲ್ಲಾ ಆಯಾಮದಿಂದಲೂ ಮಾಡುತ್ತೇವೆ. ನಾಳೆ ಬೆಳಿಗ್ಗೆ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳ ತಂಡದೊಂದಿಗೆ ಸಭೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಸ್ಫೋಟದಲ್ಲಿ ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ ಇನ್ನು ಹೆಚ್ಚಳವಾಗುವ ಸಾಧ್ಯತೆ ಇದೆ. ಇನ್ನೂ ಹಲವರಿಗೆ ತೀವ್ರ ನಿಗಾ ಘಟನದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಫೋಟಕ್ಕೆ ಇನ್ನೂ ಕಾರಣ ತಿಳಿದು ಬಂದಿಲ್ಲ. ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1ರ ಬಳಿ ಸ್ಫೋಟ ಸಂಭವಿಸಿದೆ. ನಂತರ ಪಕ್ಕದಲ್ಲಿದ್ದ 7 ರಿಂದ 8 ವಾಹನಗಳು ಸಹ ಬೆಂಕಿಗೆ ಆಹುತಿಯಾಗಿವೆ. ಸುಮಾರು 20 ಅಗ್ನಿಶಾಮಕದಳ ವಾಹನಗಳು ಧಾವಿಸಿ ಬೆಂಕಿಯನ್ನು ನಂದಿಸಿವೆ. (ಏಜೆನ್ಸೀಸ್)