ನ್ಯೂಸ್

ಬಿಜೆಪಿ ಜೊತೆ ಸೀಟು ಹಂಚಿಕೆಗೆ ಸಿದ್ಧ: ಕಾಂಗ್ರೆಸ್​ ತೊರೆದ ಮಾಜಿ ಸಿಎಂ ಉವಾಚ

ಚಂಡೀಗಡ: ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ಪಂಜಾಬಿನಲ್ಲಿ ಭಾರೀ ರಾಜಕೀಯ ಬದಲಾವಣೆಗಳು ನಡೆಯುತ್ತಿವೆ. ಅಂತಃಕಲಹಗಳ ನಡುವೆ ಕಾಂಗ್ರೆಸ್​, ದಲಿತ ಮುಖಂಡ ಚನ್ನಿ ಅವರನ್ನು ಹೊಸ ಮುಖ್ಯಮಂತ್ರಿಯಾಗಿ ನೇಮಿಸಿದೆ. ಮತ್ತೊಂದೆಡೆ, ಅಸಮಾಧಾನದಿಂದ ಕಾಂಗ್ರೆಸ್​ ತೊರೆದಿರುವ ನಿಕಟಪೂರ್ವ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್​ ಸಿಂಗ್​ ತಮ್ಮದೇ ಹೊಸ ಪಕ್ಷ ಕಟ್ಟಲು ಮುಂದಾಗಿದ್ದಾರೆ.

ಇಂದು ಚಂಡೀಗಡದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಂಗ್​, ತಮ್ಮ ನೂತನ ಪಕ್ಷದ ಹೆಸರು ಮತ್ತು ಚಿಹ್ನೆಗಾಗಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು. ಜೊತೆಗೆ, ಚುನಾವಣೆಯಲ್ಲಿ ತಮ್ಮ ಪಕ್ಷವು ಬಿಜೆಪಿಯೊಂದಿಗೆ ಸೀಟು ಹಂಚಿಕೆ ಮಾಡಿಕೊಳ್ಳಲು ಸಿದ್ಧವಿದೆ. ಆದರೆ, ಅಕಾಲಿ ದಳದೊಂದಿಗೆ ಯಾವುದೇ ಹೊಂದಾಣಿಕೆಗೆ ಸಿದ್ಧವಿಲ್ಲ ಎಂದು ಘೋಷಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಸಮರ್ಥಕರನ್ನು ಹೊಂದಿರುವ ಕ್ಯಾಪ್ಟನ್​ ಸಿಂಗ್​ ಬಿಜೆಪಿ ಕಡೆಗೆ ಒಲವು ತೋರಿರುವುದು ಕಾಂಗ್ರೆಸ್​ನ ಚುನಾವಣಾ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಅವರ ಹೊಸ ಪಕ್ಷವು ಪಂಜಾಬ್​ ರಾಜಕೀಯದ ನಕ್ಷೆ ಬದಲಿಸಬಹುದು ಎಂಬ ನಿರೀಕ್ಷೆ ಇದೆ.

ಡ್ರೋನ್​ ಡೇಂಜರ್​: ರಾಜ್ಯದಲ್ಲಿ ಶಸ್ತ್ರಾಸ್ತ್ರಗಳನ್ನು ಮತ್ತು ಮಾದಕವಸ್ತುಗಳನ್ನು ಸಾಗಿಸಲು ಈ ಹಿಂದೆ ಡ್ರೋನ್​ಗಳನ್ನು ಬಳಸಿದ್ದಾರೆ. ಇದೀಗ ಸ್ಫೋಟಕ ವಸ್ತುಗಳನ್ನು ಕಳುಹಿಸಲು ಕೂಡ ಡ್ರೋನ್​ ಬಳಕೆ ನಡೆಯುತ್ತಿದೆ. ರಾಜ್ಯದ ಭದ್ರತೆಗೆ ಸವಾಲು ಎದುರಾಗಿದ್ದು, ನಾವು, ರಾಜಕಾರಣಿಗಳು ಪಂಜಾಬನ್ನು ರಕ್ಷಿಸಬೇಕಿದೆ ಎಂದು ಅಮರಿಂದರ್ ಸಿಂಗ್ ಹೇಳಿದರು. (ಏಜೆನ್ಸೀಸ್)