ಕುವೆಂಪು ವಿವಿ ಮಟ್ಟದ ಅಂತರಕಾಲೇಜು ಸಾಂಸ್ಕೃತಿಕ ಸ್ಪರ್ಧೆಯನ್ನು ಡಾ. ಕೆ.ಪ್ರಭಾಕರ್ ರಾವ್ ಉದ್ಘಾಟಿಸಿದರು. ಡಾ. ಸೈಯದ್ ಸನಾವುಲ್ಲಾ, ಡಾ. ಟಿ.ಅವಿನಾಶ್, ಡಾ. ಎನ್.ರಾಜೇಶ್ವರಿ, ಲಕ್ಷೀಕಾಂತ್ ಚಿಮಣೂರು, ಡಾ. ಎಚ್.ಪಿ.ಮಂಜುನಾಥ್ ಇತರರಿದ್ದರು.  
ನ್ಯೂಸ್

ಬಂಡವಾಳಶಾಹಿಗಳಿಂದ ದೇಶ ಕಟ್ಟಲಾಗದು

ಅರವಿಂದ ಅಕ್ಲಾಪುರ

ಶಿವಮೊಗ್ಗ: ದೇಶ ಎಂದರೆ ಪ್ರಭುತ್ವ. ಇದು ಬಹು ಸಂಸ್ಕೃತಿಯ ನಾಡು. ಕೇವಲ ಬಂಡವಾಳಶಾಹಿಗಳಿಂದ ಮಾತ್ರ ದೇಶ ಕಟ್ಟಲು ಸಾಧ್ಯವಿಲ್ಲ. ಇಲ್ಲಿ ರೈತರು, ಕಾರ್ಮಿಕರು, ಶ್ರಮಿಕರು, ಕಲಾವಿದರು, ಸಾಹಿತಿಗಳು, ಶಿಲ್ಪಿಗಳು, ವಿಜ್ಞಾನಿಗಳು ಹೀಗೆ ಎಲ್ಲ ವಿಭಾಗಗಳ ಸಾಧನೆಗಳು ಮುಖ್ಯವಾಗುತ್ತವೆ ಎಂದು ಹೊಸನಗರ ಕೊಡಚಾದ್ರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ. ಕೆ.ಪ್ರಭಾಕರ್ ರಾವ್ ಹೇಳಿದರು.

ಸಹ್ಯಾದ್ರಿ ಕಲಾ ಕಾಲೇಜು, ಸಹ್ಯಾದ್ರಿ ಕಲಾ ಪರಿಷತ್, ಐಕ್ಯುಎಸಿ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಕುವೆಂಪು ವಿವಿ ಮಟ್ಟದ ಅಂತರಕಾಲೇಜು ಸಾಂಸ್ಕೃತಿಕ ಸ್ಪರ್ಧೆ ಸಹ್ಯಾದ್ರಿ ಸಿರಿ ಉದ್ಘಾಟಿಸಿ ಮಾತನಾಡಿದ ಅವರು, ಒಂದು ದೇಶ ಎಂದರೆ ಕೇವಲ ಏಕ ಸಂಸ್ಕೃತಿ ಅಲ್ಲ. ಅದು ಬಹುತ್ವದಿಂದ ನಿರ್ಧಾರವಾಗುತ್ತದೆ. ಇಲ್ಲಿ ಅನೇಕ ವೈವಿಧ್ಯತೆಗಳಿವೆ. ಜನಪದ ರೀತಿ-ನೀತಿ, ಕ್ರಿಯಾಶೀಲತೆ, ಕ್ರೀಡೆ ಇದೆ ಎಂದರು.

ಒಂದು ಕಾಲೇಜು ಎಂದರೆ ತರಗತಿಗಳು ಮಾತ್ರವಲ್ಲ. ಇಲ್ಲಿ ಪಠ್ಯೇತರ ಚಟುವಟಿಕೆಗೂ ಹೆಚ್ಚು ಮಹತ್ವವಿರುತ್ತದೆ. ಸಣ್ಣ ಕಾರ್ಯಕ್ರಮಗಳೂ ಜಾತ್ರೆ ರೀತಿಯಲ್ಲಿ ನಡೆಯಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕುವೆಂಪು ವಿವಿ ಸಿಂಡಿಕೇಟ್ ಸದಸ್ಯರಾದ ಲಕ್ಷ್ಮೀಕಾಂತ್ ಚಿಮಣೂರು, ಮುಸಾವೀರ್ ಬಾಷಾ, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಕೆ.ಎನ್.ಮಂಜುನಾಥ್, ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಚಾರ್ಯ ಡಾ. ಟಿ.ಅವಿನಾಶ್, ಕಲಾ ಕಾಲೇಜಿನ ಪ್ರಾಚಾರ್ಯ ಡಾ. ಸೈಯದ್ ಸನಾವುಲ್ಲಾ, ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಡಾ. ಎನ್.ರಾಜೇಶ್ವರಿ, ಐಕ್ಯುಎಸಿ ಸಂಚಾಲಕ ಡಾ. ಎಚ್.ಪಿ.ಮಂಜುನಾಥ್ ಇತರರಿದ್ದರು.