ನ್ಯೂಸ್

ಭಾರತ, ಚೀನಾ ಜತೆ ಆ ರೀತಿ... ಅಮೆರಿಕಕ್ಕೆ ಬುದ್ಧಿಮಾತು ಹೇಳಿದ ರಷ್ಯಾ ಅಧ್ಯಕ್ಷ ಪುಟಿನ್​! Vladimir Putin

Vladimir Putin : ಸುಂಕ ಮತ್ತು ನಿರ್ಬಂಧಗಳ ಮೂಲಕ ಭಾರತ ಮತ್ತು ಚೀನಾ ಮೇಲೆ ಬಲ ಪ್ರಯೋಗ ಪ್ರಯತ್ನ ಮಾಡಬೇಡಿ. ನೀವು ಭಾರತ ಅಥವಾ ಚೀನಾ ಜೊತೆ ಆ ಮಾರ್ಗದಲ್ಲಿ ಮಾತನಾಡಲು ಸಾಧ್ಯವೇ ಇಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಅಮೆರಿಕಕ್ಕೆ ಬುದ್ಧಿಮಾತು ಹೇಳಿದ್ದಾರೆ.

ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಒಕ್ಕೂಟ (SCO) ಶೃಂಗಸಭೆ ಮತ್ತು ಮಿಲಿಟರಿ ಮೆರವಣಿಗೆಯಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪುಟಿನ್, ಏಷ್ಯಾದ ಎರಡು ದೊಡ್ಡ ಶಕ್ತಿಗಳನ್ನು ದುರ್ಬಲಗೊಳಿಸಲು ಟ್ರಂಪ್ ಆಡಳಿತವು ಆರ್ಥಿಕ ಒತ್ತಡವನ್ನು ಒಂದು ಸಾಧನವಾಗಿ ಬಳಸುತ್ತಿದೆ ಎಂದು ಆರೋಪಿಸಿದರು. ಅಲ್ಲದೆ, ಭಾರತ ಮತ್ತು ಚೀನಾವನ್ನು ತಮ್ಮ "ಪಾಲುದಾರರು" ಎಂದು ಕರೆದ ಪುಟಿನ್, ಅಮೆರಿಕದ ಸುಂಕ ಪದ್ಧತಿಯು "ಈ ದೇಶಗಳ ನಾಯಕತ್ವವನ್ನು ದುರ್ಬಲಗೊಳಿಸುವ" ಪ್ರಯತ್ನವಾಗಿದೆ ಎಂದರು.

ಭಾರತ ಮತ್ತು ಚೀನಾದಂತಹ 1.5 ಶತಕೋಟಿ ಜನಸಂಖ್ಯೆ ಹಾಗೂ ಬಲಿಷ್ಠ ಆರ್ಥಿಕತೆಯನ್ನು ಹೊಂದಿರುವ ದೇಶಗಳು ತುಂಬಾ ಪ್ರಬಲವಾಗಿವೆ. ಆದರೆ, ಅವುಗಳು ತಮ್ಮದೇ ಆದ ದೇಶೀಯ ರಾಜಕೀಯ ಕಾರ್ಯವಿಧಾನಗಳು ಮತ್ತು ಕಾನೂನುಗಳನ್ನು ಹೊಂದಿವೆ. ಯಾರಾದರೂ ನಿಮ್ಮನ್ನು ಶಿಕ್ಷಿಸುವುದಾಗಿ ಹೇಳಿದಾಗ, ಒಂದು ಬಾರಿ ನೀವು ಯೋಚಿಸಿ, ಆ ದೊಡ್ಡ ದೇಶಗಳ ನಾಯಕತ್ವ ಹೇಗೆ ಪ್ರತಿಕ್ರಿಯಿಸಬಹುದು? ಈಗಾಗಲೇ ಇತಿಹಾಸವು ಎರಡೂ ರಾಷ್ಟ್ರಗಳ ರಾಜಕೀಯ ಪ್ರವೃತ್ತಿಗಳ ಮೇಲೆ ಹೆಚ್ಚು ಪ್ರಭಾವ ಬೀರಿದೆ. ಉಭಯ ದೇಶಗಳ ಇತಿಹಾಸದಲ್ಲಿ ವಸಾಹತುಶಾಹಿಯಂತಹ ಕಠಿಣ ಅವಧಿಗಳನ್ನು ಅನುಭವಿಸಿವೆ. ಅಲ್ಲದೆ, ದೀರ್ಘಕಾಲದವರೆಗೆ ಅವರ ಸಾರ್ವಭೌಮತ್ವದ ಮೇಲೆ ತೆರಿಗೆ ಸಹ ವಿಧಿಸಲಾಯಿತು. ಅವರಿಬ್ಬರಲ್ಲಿ ಒಬ್ಬರು ದೌರ್ಬಲ್ಯವನ್ನು ತೋರಿಸಿದರೆ, ಅವರ ರಾಜಕೀಯ ಜೀವನವೇ ಕೊನೆಗೊಳ್ಳುತ್ತದೆ. ಆದ್ದರಿಂದ ಅದು ಅವರ ನಡವಳಿಕೆಯ ಮೇಲೆ ಪ್ರಭಾವ ಬೀರುತ್ತದೆ. ಪ್ರಸ್ತುತ ಅಮೆರಿಕದ ಮಾತನಾಡುತ್ತಿರುವುದನ್ನು ನೋಡಿದರೆ, ಹಳತಾದ ಚಿಂತನೆಯನ್ನು ಪ್ರತಿಧ್ವನಿಸುತ್ತದೆ. ಆದರೆ, ವಸಾಹತುಶಾಹಿ ಯುಗ ಈಗ ಮುಗಿದಿದೆ. ಪಾಲುದಾರರೊಂದಿಗೆ ಮಾತನಾಡುವಾಗ ಈ ಪದಗಳನ್ನು ಬಳಸಬಾರದು ಎಂಬುದನ್ನು ಅಮೆರಿಕ ಅರಿತುಕೊಳ್ಳಬೇಕು ಎಂದು ಪುಟಿನ್​ ಹೇಳಿದರು.

ಏನೇ ಇರಲಿ ಅಂತಿಮವಾಗಿ, ವಿಷಯಗಳು ಬಗೆಹರಿಯುತ್ತವೆ. ಎಲ್ಲವೂ ಅದರದ್ದೇ ಆದ ರೀತಿಯಲ್ಲಿ ನಡೆಯುತ್ತದೆ ಅಂದರೆ, ಸಹಜ ಸ್ಥಿತಿಗೆ ಮರಳುತ್ತದೆ. ಎಂದಿನಂತೆ ಮತ್ತೆ ಸಾಮಾನ್ಯ ರಾಜಕೀಯ ಸಂವಾದವನ್ನು ನಾವು ನೋಡುತ್ತೇವೆ ಎಂದು ಪುಟಿನ್​ ಹೇಳಿದರು. ರಷ್ಯಾದ ಬಳಿ ತೈಲವನ್ನು ಖರೀದಿ ಮಾಡಿದ್ದಕ್ಕಾಗಿ ಭಾರತವು ಅಮೆರಿಕದ ನಿರ್ಬಂಧಗಳನ್ನು ಎದುರಿಸುತ್ತಿರುವಾಗ ಮತ್ತು ಚೀನಾ, ಅಮೆರಿಕದೊಂದಿಗೆ ವ್ಯಾಪಾರ ಯುದ್ಧದಲ್ಲಿ ಸಿಲುಕಿರುವ ಸಮಯದಲ್ಲೇ ಪುಟಿನ್ ಅವರಿಂದ ಈ ಹೇಳಿಕೆಗಳು ಬಂದಿವೆ.

ಇನ್ನು ಸುಂಕದ ಸುಳಿವು ನೀಡಿದ ಅಮೆರಿಕ

ಭಾರತದ ವಿರುದ್ಧ ವಾಗ್ದಾಳಿ ನಡೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾದ ತೈಲ ಖರೀದಿಯನ್ನು ಮುಂದುವರಿಸಿದ್ದಕ್ಕಾಗಿ ಭಾರತದ ಮೇಲೆ ತಮ್ಮ ಆಡಳಿತವು ದ್ವಿತೀಯ ನಿರ್ಬಂಧಗಳನ್ನು ವಿಧಿಸಿದೆ ಮತ್ತು ಹೆಚ್ಚಿನ ಕ್ರಮಗಳನ್ನು ಮುಂದೆ ಬರಬಹುದು ಎಂದು ಎಚ್ಚರಿಸಿದ್ದಾರೆ. ನಾವು ತೆಗೆದುಕೊಂಡ ಕ್ರಮದಿಂದ ಮಾಸ್ಕೋಗೆ ಈಗಾಗಲೇ "ನೂರಾರು ಶತಕೋಟಿ ಡಾಲರ್" ನಷ್ಟವನ್ನುಂಟುಮಾಡಿದೆ ಮತ್ತು "ಎರಡನೇ ಹಂತ" ಮತ್ತು "ಮೂರನೇ ಹಂತ"ದ ನಿರ್ಬಂಧಗಳು ಇನ್ನೂ ಮೇಜಿನ ಮೇಲಿವೆ ಎಂದು ಎಚ್ಚರಿಸಿದರು. ಭಾರತಕ್ಕೆ ನಮ್ಮ ಎಚ್ಚರಿಕೆ ಸ್ಪಷ್ಟವಾಗಿತ್ತು. ಎರಡು ವಾರಗಳ ಹಿಂದೆಯೇ ನಾನು ಹೇಳಿದ್ದೆ, ಭಾರತ ಮತ್ತೊಮ್ಮೆ ಖರೀದಿಸಿದರೆ, ದೊಡ್ಡ ಸಮಸ್ಯೆಗಳಿವೆ ಎಂದು ಹೇಳಿದ್ದೆ. ಅದೀಗ ಸಂಭವಿಸುತ್ತದೆ ಎಂದು ಟ್ರಂಪ್​ ಹೇಳಿದ್ದಾರೆ. (ಏಜೆನ್ಸೀಸ್​)