ಊಟ ಮಾಡುವಾಗ ಸದ್ದು ಮಾಡಿದ್ರೆ ವಿಪರೀತ ಸಿಟ್ಟು ಬರುತ್ತಾ? 
ನ್ಯೂಸ್

'ಸುರ್ರ್' ಅಂತ ಕಾಫಿ ಕುಡಿಯೋವವರನ್ನು ಕಂಡರೆ ಆಗಲ್ವಾ?: ಮಿಸೋಫೋನಿಯಾ ಬಗ್ಗೆ ಗೊತ್ತಿರಲಿ! | Eating sounds irritation

Coffee slurping annoyance: ಪಕ್ಕದಲ್ಲಿರೋರು ಕಾಫಿನ 'ಸುರ್‌ರ್‌' ಅಂತ ಶಬ್ದ ಮಾಡಿ ಕುಡೀತಿರೋದನ್ನು ಅಥವಾ ಬಾಯಿ ಚಪ್ಪರಿಸಿ ಊಟ ಮಾಡೋದನ್ನು ಕೇಳಿಸಿಕೊಂಡು ನಿಮಗೆ ಸಿಟ್ಟು ನೆತ್ತಿಗೇರುತ್ತಾ? ಆ ಕಿರಿಕಿರಿ ಸದ್ದು ತಡೆಯೋಕೆ ಆಗಲ್ವಾ? ಚಿಂತೆ ಮಾಡಬೇಡಿ, ಇದು ಕೇವಲ ನಿಮ್ಮ ಅಭಿಪ್ರಾಯ ಅಲ್ಲ, ಇದರ ಹಿಂದೆ ನಮ್ಮ ಮಿದುಳಿನ ರಹಸ್ಯವೊಂದಿದೆ.

ಹೌದು, ಕೆಲವರು ಶಬ್ದ ಮಾಡ್ಕೊಂಡು ತಿಂದರೆ ಅಥವಾ ಕುಡಿದರೆ ಇತರರಿಗೆ ಅದು ತೀವ್ರ ಕಿರಿಕಿರಿ ಉಂಟುಮಾಡುತ್ತದೆ. ಇದನ್ನು ಕೇವಲ ಸಣ್ಣ ಅಸಹನೆ ಅಥವಾ ಸಿಟ್ಟು ಅಂತ ನೋಡೋಕೆ ಆಗಲ್ಲ. ಮನೋವಿಜ್ಞಾನದಲ್ಲಿ ಇದಕ್ಕೆ 'ಮಿಸೋಫೋನಿಯಾ' (Misophonia) ಅಂತ ಕರೀತಾರೆ.

ಮಿಸೋಫೋನಿಯಾ ಅಂದ್ರೆ ಏನು?

ಕೆಲವು ನಿರ್ದಿಷ್ಟ ಶಬ್ದಗಳನ್ನು ಕೇಳಿದಾಗ ವ್ಯಕ್ತಿಗೆ ಅಸಹಜವಾದ ಕಿರಿಕಿರಿ, ಕೋಪ, ಆತಂಕ ಅಥವಾ ಅಸಹ್ಯ ಹುಟ್ಟಿಕೊಳ್ಳುವ ಸ್ಥಿತಿಯನ್ನೇ ಮಿಸೋಫೋನಿಯಾ ಅಂತಾರೆ. ಉದಾಹರಣೆಗೆ:

  • ಯಾರಾದ್ರೂ ಬಾಯಿ ಚಪ್ಪರಿಸಿಕೊಂಡು ಊಟ ಮಾಡೋದು.

  • ಕಾಫಿ ಅಥವಾ ಟೀ ಕುಡಿಯುವಾಗ 'ಸುರ್‌ರ್‌' ಅಂತ ಶಬ್ದ ಮಾಡೋದು.

  • ಪದೇಪದೇ ಬಾಯಿ ಅಥವಾ ಗಂಟಲು ಸರಿಪಡಿಸುವುದು.

  • ಪೆನ್ ಕ್ಲಿಕ್ ಮಾಡೋದು ಅಥವಾ ಜೋರಾಗಿ ಉಸಿರಾಡುವುದು.

ಇಂತಹ ಸದ್ದುಗಳು ಎಲ್ಲರಿಗೂ ಸಾಮಾನ್ಯ ಅನಿಸಿದರೂ, ಮಿಸೋಫೋನಿಯಾ ಇರೋರಿಗೆ ಮಾತ್ರ ತೀವ್ರ ತೊಂದರೆ ಕೊಡುತ್ತೆ.

ಮೆದುಳಿನಲ್ಲಿ ಏನಾಗುತ್ತೆ?

ಸಂಶೋಧನೆಗಳ ಪ್ರಕಾರ, ಮಿಸೋಫೋನಿಯಾ ಇರೋವರಲ್ಲಿ ಶಬ್ದಗಳನ್ನು ಗ್ರಹಿಸುವ ಮೆದುಳಿನ ಭಾಗ ಮತ್ತು ಭಾವನೆಗಳನ್ನು ಕಂಟ್ರೋಲ್ ಮಾಡುವ ಭಾಗದ ನಡುವಿನ ಸಂಬಂಧ ಬೇರೆ ತರ ಕೆಲಸ ಮಾಡುತ್ತೆ. ಮುಖ ಮತ್ತು ಬಾಯಿ ಚಲನೆಗಳನ್ನು ಕಂಟ್ರೋಲ್ ಮಾಡುವ ಮೆದುಳಿನ ಭಾಗವೂ ಈ ಸದ್ದುಗಳಿಗೆ ಜೋರಾಗಿ ರಿಯಾಕ್ಟ್ ಮಾಡುತ್ತೆ ಅಂತ ಅಧ್ಯಯನಗಳು ಹೇಳಿವೆ. ಇದರಿಂದ ಸದ್ದು ಕೇಳಿದ ತಕ್ಷಣ ವಿಪರೀತ ಸಿಟ್ಟು ಬರೋದು, ಆ ವ್ಯಕ್ತಿ ಮೇಲೆಯೇ ಅಸಹ್ಯ ಹುಟ್ಟೋದು ಅಥವಾ ಅಲ್ಲಿಂದ ಎದ್ದು ಹೋಗಬೇಕು ಅನ್ನಿಸೋದು ಆಗುತ್ತೆ.

ಎಲ್ಲರಿಗೂ ಇದು ಇರುತ್ತಾ?

ಖಂಡಿತ ಇಲ್ಲ.. ಇಲ್ಲಿ ಎರಡು ವಿಷಯಗಳನ್ನು ಬೇರೆ ಬೇರೆಯಾಗಿ ನೋಡಬೇಕು.

ಮೊನೆಯದು ಸಾಮಾನ್ಯ ಕಿರಿಕಿರಿ: ಯಾರಾದ್ರೂ ಬಾಯಿ ತೆರೆದುಕೊಂಡು ಜೋರಾಗಿ ತಿಂದರೆ ಅಥವಾ ಕಾಫಿ ಕುಡಿಯುವಾಗ ಸದ್ದು ಮಾಡಿದರೆ ಕೆಲವರಿಗೆ ಇಷ್ಟ ಆಗಲ್ಲ. ಇದು ನಮ್ಮ ರೂಢಿಗಳು ಮತ್ತು ಸಾಮಾಜಿಕ ನಡವಳಿಕೆಗೆ ಸಂಬಂಧಿಸಿದ್ದು.

ಎರಡನೆಯದು ಮಿಸೋಫೋನಿಯಾ: ಅದೇ ಸದ್ದು ಕೇಳಿದಾಗ ತಡೆಯಲಾರದಷ್ಟು ಕೋಪ, ಆತಂಕ ಮತ್ತು ಮಾನಸಿಕ ಒತ್ತಡ ಉಂಟಾಗುವುದು. ಇದು ದಿನನಿತ್ಯದ ಬದುಕಿನ ಮೇಲೂ ಪರಿಣಾಮ ಬೀರುತ್ತೆ.

ಇದನ್ನು ಹೇಗೆ ತಡೆಯಬಹುದು?

  • ಕಿರಿಕಿರಿ ಹುಟ್ಟಿಸುವ ಶಬ್ದ ಬರುವ ಜಾಗದಿಂದ ಸ್ವಲ್ಪ ದೂರ ಇರುವುದು ಒಳ್ಳೆಯದು.

  • ಊಟ ಮಾಡುವಾಗ ಹಿನ್ನೆಲೆಯಲ್ಲಿ ಮೆದುಳಿಗೆ ಶಾಂತತೆ ಕೊಡುವ ಮ್ಯೂಸಿಕ್ ಕೇಳಬಹುದು.

  • ಸದ್ದು ಮಾಡಿ ತಿನ್ನುವವರಿಗೆ ಪ್ರೀತಿಯಿಂದಲೇ ಈ ಬಗ್ಗೆ ತಿಳಿಸಿ ಹೇಳಬಹುದು.

ಇತರರಿಗೆ ಇದು ಸಾಮಾನ್ಯ ಸಂಗತಿಯಾಗಿ ಕಂಡರೂ, ಈ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ದೊಡ್ಡ ಮಾನಸಿಕ ಕಿರಿಕಿರಿಯಾಗುತ್ತದೆ. ಆದ್ದರಿಂದ ಇಂತಹ ಸಂದರ್ಭಗಳಲ್ಲಿ ಪರಸ್ಪರ ತಾಳ್ಮೆ ಮತ್ತು ತಿಳಿವಳಿಕೆಯಿಂದ ವರ್ತಿಸುವುದು ಬಹಳ ಮುಖ್ಯ.