ನವದೆಹಲಿ: ಮಹಾಮಾರಿ ಕರೊನಾ ವೈರಸ್ ಸಾಂಕ್ರಾಮಿಕ ನಡುವೆ ವಿವಿಧ ವಲಯಗಳಿಗೆ ಇನ್ನು ಹೆಚ್ಚಿನ ಪರಿಹಾರ ನೀಡಲು ಸಾಧ್ಯವೇ ಇಲ್ಲ ಎಂದು ಸುಪ್ರೀಂಕೋರ್ಟ್ಗೆ ತಿಳಿಸಿರುವ ಕೇಂದ್ರ ಸರ್ಕಾರ ಆರ್ಥಿಕ ನೀತಿಯಲ್ಲಿ ನ್ಯಾಯಾಲಯವು ಮಧ್ಯಪ್ರವೇಶಿಸಬಾರದು ಎಂದು ಒತ್ತಿ ಹೇಳಿದೆ.
ಇತ್ತೀಚೆಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಮಾಹಿತಿ ನೀಡಿರುವ ಕೇಂದ್ರ ಸರ್ಕಾರ, ನೀತಿಗಳು ಸರ್ಕಾರದ ಸ್ವತ್ತು ಮತ್ತು ನಿರ್ದಿಷ್ಟ ಆರ್ಥಿಕ ಪರಿಹಾರ ವಿಚಾರದಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸಬಾರದು. 2 ಕೋಟಿ ರೂ. ಸಾಲದ ಮೇಲಿ ಚಕ್ರಬಡ್ಡಿ ಮನ್ನಾ ಹೊರತುಪಡಿಸಿ, ಹೆಚ್ಚುವರಿ ಪರಿಹಾರ ನೀಡಿದ್ದೇ ಆದಲ್ಲಿ ರಾಷ್ಟ್ರೀಯ ಆರ್ಥಿಕ ಮತ್ತು ಬ್ಯಾಂಕಿಂಗ್ ವಲಯಗಳ ಮೇಲೆ ಹಾನಿಯಾಗುತ್ತದೆ ಎಂದು ಸಮರ್ಥನೆ ನೀಡಿದೆ.
ಕರೊನಾ ವೈರಸ್ ಲಾಕ್ಡೌನ್ ಸಮಯದಲ್ಲಿ ಹೊರೆಯಾಗದಿರಲೆಂದು ಮಾರ್ಚ್ ತಿಂಗಳಿಂದ ಆಗಸ್ಟ್ವರೆಗಿನ ಆರು ತಿಂಗಳ ಮೊರಟೋರಿಯಂ ಅವಧಿಯಲ್ಲಿ ಸಾಲ ಮರುಪಾವತಿಸದೇ ಇರುವಂಥವರ ಬಡ್ಡಿ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಕೇಂದ್ರ ಸರ್ಕಾರ ಕಳೆದವಾರ ಸುಪ್ರೀಂ ಕೋರ್ಟ್ಗೆ ತಿಳಿಸಿತ್ತು.
ಆದರೆ, ಚಕ್ರಬಡ್ಡಿ ಮನ್ನಾ ಮಾಡುವ ಕುರಿತು ಕಳೆದ ಸೋಮವಾರ ಸುಪ್ರೀಂಕೋರ್ಟ್ ಅಸಮಾಧಾನ ಹೊರಹಾಕಿ, ಬೇರೆ ಏನಾದರೂ ಉತ್ತಮವಾದುದ್ದನ್ನು ಮಾಡಿ ಒಂದು ವಾರದೊಳಗೆ ಅಫಿಡೆವಿಟ್ ಸಲ್ಲಿಸಲು ಹೇಳಿತ್ತು. ಅರ್ಜಿದಾರರು ಉಲ್ಲೇಖಿಸಿರುವ ಅನೇಕ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಕೇಂದ್ರ ಅಫೆಡಿವಿಟ್ ವಿಫಲವಾಗಿದೆ ಎಂದು ಹೇಳಿ ರಿಯಲ್ ಎಸ್ಟೇಟ್ ಮತ್ತು ವಿದ್ಯುತ್ ಉತ್ಪಾದಕರ ಕಳವಳವನ್ನು ಹೊಸ ಅಫಿಡವಿಟ್‌ಗಳಲ್ಲಿ ಪರಿಗಣಿಸಲು ಸರ್ಕಾರವನ್ನು ಕೇಳಲಾಗಿತ್ತು. (ಏಜೆನ್ಸೀಸ್)