ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಗ್ಯಾರಂಟಿ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ದೇವರು ಮನುಷ್ಯನ ಆಯಸ್ಸಿಗೆ ಒಂದಿಷ್ಟು ಗ್ಯಾರಂಟಿ ಕೊಟ್ಟಿರುತ್ತಾನೆ. ಆದರೆ ಕರೊನಾ ಸಂದರ್ಭದಲ್ಲಿ ಆ ಗ್ಯಾರಂಟಿ ಯಾರಿಗೂ ಇರಲಿಲ್ಲ. ಅಂತಹ ಸಮಯದಲ್ಲೂ ಪೌರ ಕಾರ್ಮಿಕರು ಜೀವದ ಹಂಗನ್ನು ತೊರೆದು ಕಾರ್ಯ ನಿರ್ವಹಿಸಿದ್ದಾರೆ. ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಶನಿವಾರ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಆರೋಗ್ಯವನ್ನು ನಿರ್ಲಕ್ಷಿಸಿ, ಸಮಾಜದ ಆರೋಗ್ಯ ಕಾಪಾಡುವ ಕೆಲಸ ಮಾಡುವ ಪೌರ ಕಾರ್ಮಿಕರ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಅವರ ತಮ್ಮ ಮನೆ, ಮಕ್ಕಳನ್ನು ಎಲ್ಲವನ್ನೂ ಮರೆತು ಕೆಲಸದಲ್ಲಿ ತಲ್ಲೀನರಾಗಿರುತ್ತಾರೆ ಎಂದರು.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕೇರಳದ ನ್ಯಾಯಾಧೀಶರೊಬ್ಬರು ಆಗಮಿಸಿದ್ದರು. ಅವರು ಶಿವಮೊಗ್ಗ ಉತ್ತಮವಾಗಿದೆ, ಸ್ವಚ್ಛತೆ ಚೆನ್ನಾಗಿದೆ ಎಂದು ಮಾತಾಡುತ್ತಿದ್ದರು. ಇದಕ್ಕೆ ಪೌರ ಕಾರ್ಮಿಕರ ಶ್ರಮವೇ ಕಾರಣ. ಶಿವಮೊಗ್ಗದಲ್ಲಿ ಸ್ಮಾರ್ಟ್‌ಸಿಟಿ ಪರ ಮತ್ತು ವಿರುದ್ಧವಾಗಿ ಚರ್ಚೆಗಳು ನಡೆಯುತ್ತಿವೆ. ಇದರಲ್ಲಿ ಒಳ್ಳೆಯ ಕೆಲಸ ಕೂಡ ಆಗಿದೆ. ದೇಶದ 100 ಸ್ಮಾರ್ಟ್‌ಸಿಟಿಗಳಲ್ಲಿ ಶಿವಮೊಗ್ಗ ಸ್ಮಾರ್ಟ್ ಸಿಟಿಗೆ ಪ್ರಶಸ್ತಿ ಕೂಡ ಬಂದಿದೆ. ಇದು ಸಣ್ಣ ಮಾತಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಎನ್.ಗೋವಿಂದ ಮಾತನಾಡಿ, ಕೆ.ಎಸ್.ಈಶ್ವರಪ್ಪ ಪೌರ ಕಾರ್ಮಿಕರಿಗೆ 6 ಎಕರೆ ಜಮೀನು ಮಂಜೂರು ಮಾಡಿಸಿದ್ದಾರೆ. ಅದರಲ್ಲಿ ಇನ್ನೂ ಏನೂ ಆಗಿಲ್ಲ. ಪೌರ ಕಾರ್ಮಿಕರಿಗೆ ಗೃಹ ಭಾಗ್ಯ ದೊರೆತಿಲ್ಲ. ಪೌರ ಕಾರ್ಮಿಕರ ಭವನದ ಕೆಲಸವೂ ಮುಂದುವರಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ, ಮೇಯರ್ ಎಸ್.ಶಿವಕುಮಾರ್, ಉಪಮೇಯರ್ ಲಕ್ಷ್ಮೀ ಶಂಕರನಾಯ್ಕ, ಸದಸ್ಯರಾದ ಎಚ್.ಸಿ.ಯೋಗೇಶ್, ಬಿ.ಎ.ರಮೇಶ್ ಹೆಗ್ಡೆ, ಮಂಜುನಾಥ್, ಮೆಹಕ್ ಷರ್ೀ, ರೇಖಾ ರಂಗನಾಥ್, ಸುರೇಖಾ ಮುರಳೀಧರ, ಸುವರ್ಣಾ ಶಂಕರ್, ಪ್ರಭಾಕರ, ಆಯುಕ್ತ ಕೆ.ಮಾಯಣ್ಣ ಗೌಡ ಇದ್ದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಪೌರ ಕಾರ್ಮಿಕರು ಮೆರವಣಿಗೆಯಲ್ಲಿ ಸಾಗಿ ಬಂದರು. ಸಭಾ ಕಾರ್ಯಕ್ರಮದಲ್ಲಿ 90 ಕಾರ್ಮಿಕರಿಗೆ ಕೆಲಸದ ಕಾಯಂ ಆದೇಶಪತ್ರ ವಿತರಿಸಲಾಯಿತು. 10 ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.