ವಿಜಯಪುರದ ಪರೀಕ್ಷಾ ಕೇಂದ್ರದ ಹೊರಗೆ ನಿಂತ ಅಭ್ಯರ್ಥಿಗಳು. 
ನ್ಯೂಸ್

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು, ಪರೀಕ್ಷೆ ಬರೆಯದೆ ಹೊರನಡೆದ ಅಭ್ಯರ್ಥಿಗಳು

ವಿಜಯಪುರ: ಪ್ರತೀ ಪರೀಕ್ಷೆಯಲ್ಲೂ ಒಂದಿಲ್ಲಾ ಒಂದು ಲೋಪ-ದೋಷ ಮಾಡುತ್ತಲೇ ಇರುವ ಕೆಪಿಎಸ್‌ಸಿ ಇದೀಗ ಮತ್ತೊಂದು ಎಡವಟ್ಟು ಮಾಡಿದ್ದು, ಭಾನುವಾರ ನಡೆದ ಕೆಎಎಸ್ ಪೂರ್ವಭಾವಿ ಪರೀಕ್ಷೆಯಲ್ಲಿ ಒಎಂಆರ್ ಸಂಖ್ಯೆ ಅದಲು ಬದಲು ಮಾಡಿ ಗೊಂದಲ ಸೃಷ್ಠಿಸಿತು.

ವಿಜಯಪುರ ಜಿಲ್ಲೆಯ ಒಟ್ಟು 32 ಪರೀಕ್ಷಾ ಕೇಂದ್ರದಲ್ಲಿ 12,741 ವಿದ್ಯಾರ್ಥಿಗಳು ಭಾನುವಾರ ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಜಿಲ್ಲೆಯ ನಾಲ್ಕು ಪರೀಕ್ಷಾ ಕೇಂದ್ರದಲ್ಲಿ ಯಡವಟ್ಟು ಉಂಟಾಯಿತು. ನಗರದ ಸಿಕ್ಯಾಬ್ ಸಂಸ್ಥೆಯ ಎರಡು ಪರೀಕ್ಷಾ ಕೇಂದ್ರ, ಮರಾಠಾ ವಿದ್ಯಾಲಯ ಪರೀಕ್ಷಾ ಕೇಂದ್ರ ಹಾಗೂ ವಿಕಾಸ ವಿದ್ಯಾಲಯದ ಪರೀಕ್ಷಾ ಕೇಂದ್ರದಲ್ಲಿ ಯಡವಟ್ಟು ಉಂಟಾಗಿದೆ. ವಿದ್ಯಾರ್ಥಿಗಳ ಒಎಂಆರ್ ಸೀಟು ಹಾಗೂ ನೋಂದಣಿ ಸಂಖ್ಯೆ ಅದಲು ಬದಲಾಗಿ ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕಾರ ಹಾಕಿ ಹೊರ ನಡೆದರು.

ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ ರಿಷಿ ಆನಂದ ಹಾಗೂ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಪರೀಕ್ಷಾರ್ಥಿಗಳ ಮೊನವೊಲಿಸಿ ಪರೀಕ್ಷೆಗೆ ಹಾಜರಾಗುವಂತೆ ಮನವಿ ಮಾಡಿದರು.

ವಿಕಾಸ ಪ್ರೌಢ ಶಾಲೆಯಲ್ಲಿ 240 ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಗೊಂದಲದ ಹಿನ್ನೆಲೆ 10 ರಿಂದ 15 ವಿದ್ಯಾರ್ಥಿಗಳು ಪರೀಕ್ಷೆ ಬರೆಯದೇ ಹೊರ ನಡೆದರು. ಆಗ ಕೆಪಿಎಸ್‌ಸಿ ಸದಸ್ಯ ಎಂ.ಬಿ. ಹೆಗ್ಗಣ್ಣನವರ ಭೇಟಿ ನೀಡಿ ಪರೀಕ್ಷಾರ್ಥಿಗಳ ಮನವೊಲಿಸಿದರು.

ಆದರೆ, ಕೆಲವು ಪರೀಕ್ಷಾರ್ಥಿಗಳು ಮಾತ್ರ ಪರೀಕ್ಷೆ ಬರೆಯದೇ ಹೊರನಡೆದರು. ಪ್ರವೇಶ ಪತ್ರದಲ್ಲಿರುವ ನಂಬರ್ ಹಾಗೂ ಒಎಂಆರ್ ಸೀಟ್‌ನಲ್ಲಿರುವ ನಂಬರ್‌ನಲ್ಲಿ ವ್ಯತ್ಯಾಸ ಬಂದಿದೆ. ಸಿರೀಸ್ ಕೂಡ ತಪ್ಪಾಗಿದೆ. ಇನ್ನೊಂದು ಅವಕಾಶ ಮಾಡಿಕೊಡುವುದಾಗಿ ಹೇಳುತ್ತಿದ್ದಾರೆ. ಆದರೆ, ಪ್ರಶ್ನೆ ಪತ್ರಿಕೆ ಈಗಾಗಲೇ ಹೊರ ಬಂದಿದೆ. ಕೆಪಿಎಸ್‌ಸಿಯಿಂದಲೇ ಈ ತಪ್ಪಾಗಿದೆ. ಮರು ಪರೀಕ್ಷೆ ನಡೆಸಬೇಕು. ಇಲ್ಲವೇ ಪರೀಕ್ಷೆ ಸುವ್ಯವಸ್ಥಿತವಾಗಿ ನಡೆಸಲು ಯಾವುದಾದರೂ ಏಜೆನ್ಸಿಗೆ ಜವಾಬ್ದಾರಿ ವಹಿಸುವುದು ಸೂಕ್ತ ಎಂದು ಪರೀಕ್ಷಾರ್ಥಿಗಳು ಆಕ್ರೋಶ ಹೊರಹಾಕಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಿಪಂ ಸಿಇಒ ರಿಷಿ ಆನಂದ ಅವರು, ಒಎಂಆರ್ ಸೀಟ್‌ನಲ್ಲಿರುವ ರೋಲ್‌ನಂಬರ್ ಹಾಗೂ ಅಭ್ಯರ್ಥಿಯ ರೋಲ್‌ನಂಬರ್‌ನಲ್ಲಿ ವ್ಯತ್ಯಾಸ ಕಂಡು ಬಂದಿದೆ. ಕೂಡಲೇ ಕೆಪಿಎಸ್‌ಸಿ ಜೊತೆ ಸಂಪರ್ಕಿಸಲಾಗಿದ್ದು, ಕೆಪಿಎಸ್‌ಸಿ ಸೂಚನೆ ಪ್ರಕಾರ ಪರೀಕ್ಷಾ ಕೇಂದ್ರಗಳಿಗೆ ನಿರ್ದೇಶನ ನೀಡಲಾಗಿದೆ. ಪ್ರಶ್ನೆ ಪತ್ರಿಕೆಯಲ್ಲಿ ಅಭ್ಯರ್ಥಿ ರೋಲ್ ನಂಬರ್ ನಮೂದಸಲಾಗುವುದು. ಯಾವುದೂ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗಿದೆ. ಪರೀಕ್ಷೆ ಬರೆಯಲು ತಡವಾದ ಅಭ್ಯರ್ಥಿಗಳಿಗೆ ಹೆಚ್ಚುವರಿ ಸಮಯ ನೀಡಲು ತಿಳಿಸಲಾಗಿದೆ. ಅಭ್ಯರ್ಥಿಗಳ ಭವಿಷ್ಯ ಮುಖ್ಯ ಎಂದರು.