ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ  
ನ್ಯೂಸ್

ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ: ಜೆಡಿಎಸ್‌ನವರೇ ಘೋಷಿಸುತ್ತಾರೆಂದ ಬಿಎಸ್‌ವೈ !

ಬೆಂಗಳೂರು: ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಎನ್‌ಡಿಎ ಅಭ್ಯರ್ಥಿ ಆಯ್ಕೆ ವಿಚಾರ ನಿಚ್ಚಳವಾಗಿಲ್ಲ. ಬಿಜೆಪಿ ಒತ್ತಾಸೆ, ಎಚ್.ಡಿ.ಕುಮಾರಸ್ವಾಮಿ ಜಿಜ್ಞಾಸೆಯಿಂದ ಏರ್ಪಟ್ಟಿರುವ ಗೊಂದಲಕ್ಕೆ ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಹತ್ವದ ತಿರುವು ನೀಡಿದ್ದಾರೆ.

ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಸಂಡೂರು ಹಾಗೂ ಶಿಗ್ಗಾಂವಿಗೆ ಪಕ್ಷದ ಅಭ್ಯರ್ಥಿಗಳ ಹೆಸರು ಪ್ರಕಟವಾಗಿವೆ. ಚನ್ನಪಟ್ಟಣ ಕ್ಷೇತ್ರವನ್ನು ಎನ್‌ಡಿಎ ಮಿತ್ರಪಕ್ಷ ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದೇವೆ, ಅವರೇ ಅಭ್ಯರ್ಥಿ ಹೆಸರು ಘೋಷಿಸುತ್ತಾರೆ ಎಂದರು.

ಮಿತ್ರ ಪಕ್ಷ ಜೆಡಿಎಸ್‌ಗೆ ಚನ್ನಪಟ್ಟಣ ಕ್ಷೇತ್ರ ಬಿಟ್ಟುಕೊಟ್ಟಿರುವುದನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಖಚಿತಪಡಿಸಿದ್ದಾರೆ. ಹೀಗಾಗಿ ಕ್ಷೇತ್ರದ ಅಭ್ಯರ್ಥಿ ಯಾರಾಗಬೇಕು ಎಂದು ಜೆಡಿಎಸ್ ನಾಯಕರು ತೀರ್ಮಾನಿಸುತ್ತಾರೆ ಎಂದು ಹೇಳಿದರು.

ಸ್ಪರ್ಧೆ ಯೋಚನೆಯಿಲ್ಲ

ಜಾ.ದಳದ ಚಿಹ್ನೆಯಡಿ ಬಿಜೆಪಿಯವರು ಸ್ಪರ್ಧೆ ಮಾಡುವ ಯೋಚನೆಯಿಲ್ಲ. ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಬಗ್ಗೆ ಪಕ್ಷದ ವರಿಷ್ಠರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಚುನಾವಣೆ ಬಂದಾಗ ಆಕಾಂಕ್ಷೆ, ಟಿಕೆಟ್‌ಗೆ ಪೈಪೋಟಿ ಎಲ್ಲವೂ ಸ್ವಾಭಾವಿಕ ಎಂದರು.

ವರಿಷ್ಠರು ಏನು ಹೇಳುತ್ತಾರೋ ಅದೇ ಅಂತಿಮ. ಎರಡೂ ಪಕ್ಷಗಳು ಸೇರಿಕೊಂಡು ಮೂರು ಕ್ಷೇತ್ರಗಳನ್ನು ಗೆಲ್ಲುವುದಷ್ಟೇ ನಮ್ಮ ಮುಂದಿರುವ ಗುರಿಯಾಗಿದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.

ಕಮರದ ಆಸೆ

ಚನ್ನಪಟ್ಟಣ ಕ್ಷೇತ್ರದ ಪ್ರಬಲ ಸ್ಪರ್ಧಾಕಾಂಕ್ಷಿ ಸಿ.ಪಿ.ಯೋಗೇಶ್ವರ್ ಆಸೆ ಇನ್ನೂ ಕಮರಿಲ್ಲ. ಜೆಡಿಎಸ್ ನಾಯಕರು ಕೊನೇ ಕ್ಷಣದಲ್ಲಿ ಸ್ಪರ್ಧೆಗೆ ಅವಕಾಶ ನೀಡುವ ಲೆಕ್ಕಾಚಾರದಲ್ಲಿದ್ದಾರೆ.

ಯೋಗೇಶ್ವರ್ ಪರವಾಗಿ ಬಿಜೆಪಿ ರಾಜ್ಯ ನಾಯಕರು ವಕಾಲತ್ತುವಹಿಸಿದ್ದಾರೆ. ಗೆಲ್ಲುವ ಅವಕಾಶ ಬಳಕೆ ಮಾಡಿಕೊಳ್ಳುವುದು ಮುಖ್ಯವೆಂದು ಕುಮಾರಸ್ವಾಮಿ ಮನವೊಲಿಸಲು ಯತ್ನಿಸಿದ್ದಾರೆ.

ಈ ನಡುವೆ ಯೋಗೇಶ್ವರ್ ಎರಡು ರೀತಿಯ ಅಫಿಡವಿಟ್

ಸಿದ್ಧಪಡಿಸಿಟ್ಟುಕೊಂಡಿದ್ದು, ಎನ್‌ಡಿಎ ಸಾಧ್ಯವಾಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಧುಮುಕಲು ತಯಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.