ಶೀಘ್ರ 10 ಜಿಲ್ಲೆಗಳಲ್ಲಿ ಪ್ರಯೋಗ ಯಶಸ್ವಿಯಾದರೆ ರಾಜ್ಯಾದ್ಯಂತ ಜಾರಿ
| ತಾಳೂರು ಎಸ್.ಎರ್ರಿಸ್ವಾಮಿ ಬಳ್ಳಾರಿ
ಕ್ಯಾನ್ಸರ್ ರೋಗಿಗಳ ಸಂಖ್ಯೆ ದಿನೇದಿನೆ ಹೆಚ್ಚುತ್ತಿರುವ ನಡುವೆಯೇ ಚಿಕಿತ್ಸೆ ಸಮಸ್ಯೆಯೂ ಉಲ್ಬಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಒಂದನೇ ಹಂತದಲ್ಲೇ ಸೂಕ್ತ ಚಿಕಿತ್ಸೆ ನೀಡಿ ರೋಗಿಯನ್ನು ಗುಣಪಡಿಸಬೇಕೆಂಬ ಉದ್ದೇಶದಿಂದ ಎಲ್ಲ ಜಿಲ್ಲಾಸ್ಪತ್ರೆಗಳಲ್ಲೂ ಕ್ಯಾನ್ಸರ್ ಘಟಕ ಆರಂಭಿಸಲು ಸರ್ಕಾರ ಮುಂದಾಗಿದೆ.
ಪ್ರಾಯೋಗಿಕವಾಗಿ 10 ಜಿಲ್ಲೆಗಳಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ತಲೆ ಎತ್ತುವ ಸಾಧ್ಯತೆ ಇದೆ. ಸದ್ಯ ಬೆಂಗಳೂರು, ಮಂಡ್ಯ, ಕಲಬುರಗಿಯಲ್ಲಷ್ಟೇ ಕ್ಯಾನ್ಸರ್ ಆಸ್ಪತ್ರೆಗಳಿವೆ. ದೂರದ ಜಿಲ್ಲೆಗಳ ರೋಗಿಗಳು ಈ ಆಸ್ಪತ್ರೆಗಳಿಗೆ ಬರಲಾಗದ ಸ್ಥಿತಿಯಿದೆ. ಹೀಗಾಗಿಯೇ ಕ್ಯಾನ್ಸರ್ ಘಟಕ ಸ್ಥಾಪಿಸುವ ಪ್ರಕ್ರಿಯೆ ನಡೆದಿದೆ. ವರ್ಷದಿಂದ ವರ್ಷಕ್ಕೆ ಕ್ಯಾನ್ಸರ್ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡುತ್ತಿರುವುದರಿಂದ ಕಲ್ಯಾಣ ಕರ್ನಾಟಕದ ಕಲಬುರಗಿ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಸರ್ಕಾರ ಕ್ರಮವಹಿಸಿದೆ. ಬೆಂಗಳೂರಿನ ಕಿದ್ವಾಯಿಯಲ್ಲೇ ಈ ವರ್ಷ 26 ಸಾವಿರ ಕ್ಯಾನ್ಸರ್ ರೋಗಿಗಳು ಚಿಕಿತ್ಸೆಗಾಗಿ ನೋಂದಾಯಿಸಿದ್ದಾರೆ. ನಿತ್ಯ ಮುನ್ನೂರು ರೋಗಿಗಳು ಕಿಮೊ ಥೆರಪಿ ಹಾಗೂ ಮುನ್ನೂರಕ್ಕೂ ಅಧಿಕ ಮಂದಿ ರೆಡಿಯೋ ಥೆರಪಿ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ.
ಹೇಗಿರುತ್ತದೆ ಚಿಕಿತ್ಸೆ?: ಕಿದ್ವಾಯಿ ಆಸ್ಪತ್ರೆ ನೇತೃತ್ವದಲ್ಲಿ ವೈದ್ಯರಿಗೆ ತರಬೇತಿ ನೀಡಿ, ಜಿಲ್ಲಾಸ್ಪತ್ರೆಗಳಿಗೆ ಅಗತ್ಯ ಸಲಕರಣೆ, ಸೌಲಭ್ಯ ಒದಗಿಸಿ ಘಟಕ ಪ್ರಾರಂಭಿಸಲಾಗುತ್ತದೆ. ಕ್ಯಾನ್ಸರ್ ರೋಗಿಗಳಿಗೆ ಒಂದು ಮತ್ತು ಎರಡನೇ ಹಂತದಲ್ಲೇ ಕಿಮೊಥೆರಪಿ ಚಿಕಿತ್ಸೆ ನೀಡಲಾಗುತ್ತದೆ.
ಎಲ್ಲೆಲ್ಲಿ ಘಟಕ ಶುರುವಾಗುತ್ತೆ?
ಆರಂಭದಲ್ಲಿ ಬಳ್ಳಾರಿ, ರಾಯಚೂರು, ಕೊಪ್ಪಳ, ಮೈಸೂರು, ಮಂಗಳೂರು, ಬೆಳಗಾವಿ, ಶಿವಮೊಗ್ಗ, ದಾವಣಗೆರೆ, ವಿಜಯಪುರ, ಉತ್ತರ ಕನ್ನಡ ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್ ಘಟಕ ತೆರೆಯಲು ಅಧಿಕಾರಿಗಳಿಗೆ ಅಗತ್ಯ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ. ಅದಕ್ಕೆ ತಕ್ಕಂತೆ ಕ್ಯಾನ್ಸರ್ ಘಟಕ ಪ್ರಾರಂಭಿಸಲು ಕೊಠಡಿ, ವೈದ್ಯರ ಹಾಗೂ ಸಿಬ್ಬಂದಿ ಮಾಹಿತಿ ನೀಡುವಂತೆ ಕೂಡ ಸೂಚಿಸಲಾಗಿದೆ. ಈ ಹತ್ತು ಜಿಲ್ಲೆಗಳ ಕೆಲ ವೈದ್ಯರು ವೈದ್ಯಕೀಯ ಶಿಕ್ಷಣ ಇಲಾಖೆಗೆ ಅಗತ್ಯ ಮಾಹಿತಿ ಒದಗಿಸಿದ್ದು, ಕೆಲವೇ ದಿನಗಳಲ್ಲಿ ಘಟಕ ಆರಂಭವಾಗಲಿದೆ. ಘಟಕಗಳು ಸುಸೂತ್ರವಾಗಿ ನಡೆದರೆ ಎರಡನೇ ಹಂತದಲ್ಲಿ ಉಳಿದ ಜಿಲ್ಲೆಗಳಲ್ಲೂ ಕಾರ್ಯಾರಂಭ ಮಾಡಲಿವೆ.
ಅನುದಾನದ ಕೊರತೆ
ಕೆಲ ವರ್ಷದ ಹಿಂದೆಯೇ ಕೆಲ ಜಿಲ್ಲೆಗಳಲ್ಲಿ ಕ್ಯಾನ್ಸರ್ ಆಸ್ಪತ್ರೆಯ ಹೊಸ ಕಟ್ಟಡ ಕಾಮಗಾರಿ ನಡೆಸಲು ಚಿಂತಿಸಲಾಗಿತ್ತು. ಬಳ್ಳಾರಿ, ಬೆಳಗಾವಿ, ಶಿವಮೊಗ್ಗ ಹಾಗೂ ಮೈಸೂರಿನಲ್ಲಿ ಕಿದ್ವಾಯಿ ಸಂಸ್ಥೆ ಸ್ಥಳ ಪರಿಶೀಲಿಸಿತ್ತು. ಆದರೆ ಈ ಕಾರ್ಯಕ್ಕೆ ಸಾವಿರಾರು ಕೋಟಿ ರೂ. ಬೇಕಾಗುವುದರಿಂದ ಅನುದಾನದ ಕೊರತೆ ಕಾಡಿತ್ತು. ಇದೀಗ ಜಿಲ್ಲಾಸ್ಪತ್ರೆಗಳಲ್ಲಿ ಘಟಕ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಎರಡು ವರ್ಷದ ಹಿಂದೆ ಬಳ್ಳಾರಿಗೆ ಕಿದ್ವಾಯಿ ಸಂಸ್ಥೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದೆ.
ಬಳ್ಳಾರಿ ಬಿಮ್ಸ್ನಲ್ಲಿ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಗರದ ಜಿಲ್ಲಾಸ್ಪತ್ರೆಯಲ್ಲೂ ಕೆಲವೇ ದಿನಗಳಲ್ಲಿ ಕ್ಯಾನ್ಸರ್ ಘಟಕ ತೆರೆದು ಕಿಮೊಥೆರಪಿ ಚಿಕಿತ್ಸೆ ಒದಗಿಸಲಾಗುವುದು. | ಡಾ.ವೈ. ರಮೇಶಬಾಬು ಡಿಎಚ್ಒ, ಬಳ್ಳಾರಿ