ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ ದೇಶದ ಕ್ಯಾನ್ಸರ್ ರೋಗಿಗಳ ಸಂಖ್ಯೆಯಲ್ಲಿ ಶೇ. 12 ಏರಿಕೆ ಕಂಡುಬರಲಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಎಚ್ಚರಿಸಿದೆ.
2020ರಲ್ಲಿ 1.39 ಮಿಲಿಯನ್ ಜನರು ಕ್ಯಾನ್ಸರ್ನಿಂದ ಬಳಲುತ್ತಿದ್ದು, 2025ರ ವೇಳೆಗೆ ಆ ಸಂಖ್ಯೆ 1.5 ಮಿಲಿಯನ್ಗೆ ಏರಿಕೆಯಾಗಲಿದೆ ಎಂದು ತಿಳಿಸಲಾಗಿದೆ. 2020ರಲ್ಲಿ 6,79,421 ಪುರುಷರು ಮತ್ತು 7,63,575 ಮಹಿಳೆಯರಲ್ಲಿ ಕ್ಯಾನ್ಸರ್ ಪತ್ತೆಯಾಗಿದೆ. 2025ರಲ್ಲಿ 7,12,758 ಪುರುಷರು ಮತ್ತು 8,06,218 ಮಹಿಳೆಯರಲ್ಲಿ ಕ್ಯಾನ್ಸರ್ ಪತ್ತೆಯಾಗುವ ಸಾಧ್ಯತೆಯಿದೆ. ಅದರಲ್ಲಿ ಶೇ. 14.8 ರೋಗಿಗಳು ಸ್ತನ ಕ್ಯಾನ್ಸರ್ನಿಂದ ಬಳಲಲಿದ್ದಾರೆ. ಗರ್ಭಕೋಶ ಕ್ಯಾನ್ಸರ್ನಿಂದ ಶೇ. 5.4 ರೋಗಿಗಳು ಮತ್ತು ಜೀರ್ಣಾಂಗವ್ಯೂಹದ ಕ್ಯಾನ್ಸರ್ನಿಂದ ಶೇ. 19.7 ರೋಗಿಗಳು ಬಳಲಲಿದ್ದಾರೆ.
ಈ ವರ್ಷದ ವರದಿಯ ಪ್ರಕಾರ ಇದುವರೆಗಿನ ಕ್ಯಾನ್ಸರ್ ಪ್ರಕರಣಗಳಲ್ಲಿ, ತಂಬಾಕು ಸೇವನೆಯಿಂದ ಕ್ಯಾನ್ಸರ್ ಕಾಣಿಸಿಕೊಂಡಿರುವ ಪಾಲು ಶೇ. 27.1ರಷ್ಟಿದೆ. ಪುರುಷರಲ್ಲಿ ಶ್ವಾಸಕೋಶ, ಬಾಯಿ, ಹೊಟ್ಟೆ ಕ್ಯಾನ್ಸರ್ಗಳು ಹೆಚ್ಚಾಗಿವೆ. ಮಹಿಳೆಯರಲ್ಲಿ ಸ್ತನ, ಗರ್ಭಕೋಶ ಕ್ಯಾನ್ಸರ್ಗಳು ಹೆಚ್ಚಾಗಿವೆ. ಸರ್ಜರಿ, ಕಿಮೋಥೆರಪಿ ಮತ್ತು ರೇಡಿಯೇಷನ್ ಥೆರಪಿಗಳ ಮೂಲಕ ಕ್ಯಾನ್ಸರ್ನ್ನು ಗುಣಪಡಿಸಬಹುದಾಗಿದೆ ಎಂದು ಐಸಿಎಂಆರ್ ತಿಳಿಸಿದೆ.