- ಯುವಜನತೆಗೆ ಮಾಡಿದ ದ್ರೋಹ
- ಶಾಲಾ ಶಿಕ್ಷಣ ವ್ಯವಸ್ಥೆ ದುರ್ಬಲ
ಮೂಡುಬಿದಿರೆ: ದೇಶಾದ್ಯಂತ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆದಿದ್ದ ನೀಟ್-ಯುಜಿ 2026 ಪರೀಕ್ಷೆ ರದ್ದುಗೊಂಡಿರುವುದು ಆಡಳಿತಾತ್ಮಕ ವೈಫಲ್ಯ ಮಾತ್ರವಲ್ಲ, ಯುವಜನತೆಗೆ ಮಾಡಿದ ದ್ರೋಹವಾಗಿದೆ ಎಂದು ಕೆಪಿಸಿಸಿ ವಕ್ತಾರ ಪದ್ಮಪ್ರಸಾದ್ ಜೈನ್ ಆರೋಪಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2024ರಲ್ಲೇ ನೀಟ್ ಪರೀಕ್ಷೆ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತದೆ, ಶಾಲಾ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಹಾಗೂ ದಾಖಲಾತಿ ವಿಚಾರದಲ್ಲಿ ರಾಜ್ಯಗಳ ಅಧಿಕಾರ ಕಸಿದುಕೊಳ್ಳುತ್ತದೆ ಎಂದು ರಾಜ್ಯ ಸರ್ಕಾರ ಸದನದಲ್ಲಿ ನಿರ್ಣಯ ಕೈಗೊಂಡಿತ್ತು. ಇದೀಗ ಪರೀಕ್ಷೆ ರದ್ದುಗೊಂಡಿರುವುದು ಆ ಕಾಳಜಿ ಸತ್ಯವಾಗಿದ್ದುದನ್ನು ಸಾಬೀತುಪಡಿಸಿದೆ. ಸಿಇಟಿ ವ್ಯವಸ್ಥೆಯೇ ಉತ್ತಮವಾಗಿದ್ದು, ನೀಟ್ ಅಗತ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು.
ಸಿಇಟಿ ಮಾದರಿಯಲ್ಲೇ ಪ್ರವೇಶ ಪರೀಕ್ಷೆಗಳು ನಡೆಯಬೇಕು ಹಾಗೂ ಅಂತಹ ಪರೀಕ್ಷೆಗಳನ್ನು ನಡೆಸುವ ರಾಜ್ಯಗಳ ಅಧಿಕಾರವನ್ನು ಪುನಃಸ್ಥಾಪಿಸಬೇಕು. ಪೇಪರ್ ಲೀಕ್‌ನಿಂದ ತೊಂದರೆಗೊಳಗಾದ ವಿದ್ಯಾರ್ಥಿಗಳು ಮತ್ತು ಪಾಲಕರ ಜತೆ ಕಾಂಗ್ರೆಸ್ ನಿಲ್ಲಲಿದೆ ಎಂದು ಹೇಳಿದರು.
ಚುನಾವಣೆ ಬಳಿಕ ತೈಲ ಬೆಲೆ ಏರಿಕೆಯಾಗಿರುವ ಹಿಂದಿನ ಉದ್ದೇಶವೇನು? ಇದು ವಿದೇಶಾಂಗ ನೀತಿಯ ವೈಫಲ್ಯವಲ್ಲವೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಕಾನೂನು ವಿಭಾಗದ ಅಧ್ಯಕ್ಷ ಮರ್ವಿನ್ ಲೋಬೋ ಹಾಗೂ ಕೆಡಿಪಿ ಸದಸ್ಯ ತುಕ್ರಪ್ಪ ಕೆಂಬಾರೆ ಉಪಸ್ಥಿತರಿದ್ದರು.