ಕೊತ್ತೂರು ಜಿ.ಮಂಜುನಾಥ್​ 
ನ್ಯೂಸ್

ಅನರ್ಹರ ಬಿಪಿಎಲ್​ ಕಾರ್ಡ್​ ರದ್ದು ಸರಿ

ಕೋಲಾರ: ಅನರ್ಹರನ್ನು ಗುರುತಿಸಿ ಬಿಪಿಎಲ್​ ಕಾರ್ಡ್​ ರದ್ದು ಮಾಡಲು ಸರ್ಕಾರ ಕ್ರಮವಹಿಸಿರುವುದು ಸರಿಯಿದೆ. ಇದರಿಂದ ಸೌಲಭ್ಯ ವಂಚಿತರಿಗೆ ನ್ಯಾಯ ಕಲ್ಪಿಸುವ ಕೆಲಸ ಮಾಡುತ್ತಿದೆ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್​ ಹೇಳಿದರು.

ನಗರದಲ್ಲಿ ಸೋಮವಾರ ನಡೆದ ಸಹಕಾರ ಸಪ್ತಾಹ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಬಿಪಿಎಲ್​ ಕಾರ್ಡ್​ಗಳ ಬಗ್ಗೆ ಧ್ವನಿ ಎತ್ತಿದ್ದೇನೆ. ಜತೆಗೆ ಶಿಕ್ಷಕರೊಬ್ಬರು ಅಂತ್ಯೋದಯ ಕಾರ್ಡ್​ ಪಡೆದುಕೊಂಡಿದ್ದನ್ನು ಅಧಿಕಾರಿಗಳ ಗಮನಕ್ಕೆ ತಂದು ರದ್ದು ಮಾಡಿಸಿದ್ದೇನೆ. ಜಿಲ್ಲೆಯಲ್ಲೂ 6,000 ಮಂದಿ ಅನರ್ಹರು ಬಿಪಿಎಲ್​ ಪಡೆದುಕೊಂಡಿರುವವರನ್ನು ಗುರುತಿಸಿದ್ದು, ಶ್ರೀದಲ್ಲೇ ರದ್ದುಗೊಳ್ಳಲಿದೆ ಎಂದು ಹೇಳಿದರು.

ತೆರಿಗೆ ಪಾವತಿ ಮಾಡುವವರಿಗೆ, ಕಾರು ಇಟ್ಟುಕೊಂಡು 20-30 ಸಾವಿರ ಪೆಟ್ರೋಲ್​ ಸುರಿದು ಓಡಾಡುವವರಿಗೆ, ಸಾವಿರಾರು ರೂ. ಪಾವತಿ ವಿದ್ಯುತ್​ ಶುಲ್ಕ ಪಾವತಿ ಮಾಡುವವರಿಗೆ, 10-20 ಎಕರೆ ಜಮೀನು ಇರುವವರಿಗೆ ಬಿಪಿಎಲ್​ ಯಾಕೆಬೇಕು?. ಸಮಾಜದಲ್ಲಿ ಜಮೀನು ಇಲ್ಲದೆ, ನಿರ್ಗತಿಕರಿಗೆ ಕೊಡುವುದು ಬಿಪಿಎಲ್​ ಕೊಡುವುದು ನ್ಯಾಯವಲ್ಲವೇ ಎಂದು ಪ್ರಶ್ನಿಸಿದರು.

ಅರ್ಹರಲ್ಲದವರು ಬಿಪಿಎಲ್​, ಅಂತ್ಯೋದಯ ಪಡೆದುಕೊಂಡಿರುವ ಬಗ್ಗೆ ದೂರುಗಳು ಬಂದಿವೆ. ಅದನ್ನು ಅಧಿಕಾರಿಗಳು ಪರಿಶೀಲನೆ ಮಾಡಿ ಅನರ್ಹರನ್ನು ಗುರುತಿಸುತ್ತಿದ್ದಾರೆ. ಕಾರ್ಡ್​ ರದ್ದುಗೊಳ್ಳುವುದರಿಂದ ಇತರೆ ಸೌಕರ್ಯಗಳು ಕೈ ತಪ್ಪುತ್ತವೆ ಎಂದರೆ ಅದಕ್ಕೆ ಬೇರೆ ದಾರಿಯಿದ್ದು ಪಡೆದುಕೊಳ್ಳಲು ಮುಂದಾಗಲಿ. ಸಹಕಾರ ಸಂದಲ್ಲಿ ಶೇರುದಾರರಾಗಿ ಯಶಸ್ವಿನಿಗೆ 500 ಪಾವತಿ ಮಾಡಿದರೆ ವಿಮೆ ಸಿಗುತ್ತದಲ್ಲ, ಅದರಲ್ಲೂ ಎಸ್ಸಿ, ಎಸ್ಟಿ ಉಚಿತ ಎಂದು ತಿಳಿಸಿದರು.

* ಪ್ರತಿಕ್ರಿಯಿಸಲು ಇಷ್ಟವಿಲ್ಲ

ಬಿಪಿಎಲ್​ ಕಾರ್ಡ್​ ಕುರಿತು ಕುಮಾರಸ್ವಾಮಿ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು ದೊಡ್ಡವರು, ಅವರ ಬಗ್ಗೆ ಗೌರವ ಇದೆ, ಈ ಬಗ್ಗೆ ಮಾತನಾಡುವ ಬಗ್ಗೆ ನನಗೆ ಇಷ್ಟವಿಲ್ಲ. ಅದು ರಾಜಕೀಯವಾಗಿ ಆದರೆ ಬೇರೆ ಎಂದರು.

ನಮ್ಮ ವಿರೋಧಿಗಳು, ಸ್ನೇಹಿತರು ಒಳ್ಳೆ ಕೆಲಸ ಮಾಡಿದರು ಒಪ್ಪಿಕೊಳ್ಳುತ್ತೇನೆ, ಕಾಜಿಕಲ್ಲಹಳ್ಳಿಯಲ್ಲಿ ಮಹಿಳೆಯೊಬ್ಬರಿಗೆ ಏನು ಇಲ್ಲ. ಅಂತಹ ವ್ಯಕ್ತಿಗಳಿಗೆ ಅನ್ಯಾಯವಾಗುತ್ತಿದ್ದು, ಇತಂಹದ್ದು ಯಾರು ಕಣ್ಣಿಗೂ ಕಾಣುತ್ತಿಲ್ಲವೆ ಎಂದು ಪ್ರಶ್ನಿಸಿದರು.

* ಕೋಲಾರಮ್ಮ ಆಣೆಗೂ ಚರ್ಚೆಯಾಗಿಲ್ಲ

ಉಪ ಚುನಾವಣೆ ಸಂಬಂಧ ಪ್ರತಿಕ್ರಿಯಿಸಿ, ಚನ್ನಪಟ್ಟಣ ಚುನಾವಣೆಗೆ ನಾನು ಹೋಗಿದ್ದೇ, ಆರಂಭದಲ್ಲಿ ಒಳ್ಳೆಯ ವಾತಾವರಣ ಇತ್ತು, ಕೊನೆಯಲ್ಲಿ ವ್ಯತ್ಯಾಸಗಳಾಗಿವೆ. ಕುಮಾರಸ್ವಾಮಿ ಅವರ ವಿರುದ್ಧ ಜಮೀರ್​ ಅಹಮದ್​ ಬಳಕೆ ಮಾಡಿರುವುದು ತಪು$್ಪ ಎಂದು ತಿಳಿಸಿದರು.

ಉಪ ಚುನಾವಣೆಯ ಮತದಾನದ ಎಣಿಕೆಯು ನ.23ರಂದು ನಡೆಯಲಿದೆ. ಇದರ ನಂತರ ಸರ್ಕಾರ ಬದಲಾವಣೆ, ಸಿಎಂ ಬದಲಾವಣೆ ಎಲ್ಲಾ ಊಹಾಪೋಹ. ಸಿಎಂ ಸಿದ್ದರಾಮಯ್ಯ ಅವರ ಖುರ್ಚಿ ಗಟ್ಟಿಯಾಗಿದ್ದು, ಕೋಲಾರಮ್ಮ ಸಾಯಾಗಿ ಬದಲಾವಣೆ ಕುರಿತು ಚರ್ಚೆಯಾಗಿಲ್ಲ ಎಂದರು.

* ವೈಯಕ್ತಿಕ ಹೇಳಿಕೆ

ಎಸ್​.ಎನ್​.ನಾರಾಯಣಸ್ವಾಮಿ ಅವರು ವೈಯಕ್ತಿಕವಾಗಿ ಏನು ಹೇಳಿಕೊಂಡಿದ್ದಾರೋ ಗೊತ್ತಿಲ್ಲ, ಅವರಿಗೆ ಸ್ಪಂದಿಸುತ್ತಿಲ್ಲ ಎಂಬುದು ಗೊತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ನಮಗೆ ಸ್ಪಂದಿಸುತ್ತಿದ್ದಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳ ವರ್ಗಾವಣೆಯಲ್ಲಿ ಕೈ ಹಾಕಿಲ್ಲ. ಕೆಲಸ ಮಾಡುವ ತಾಲೂಕು ಮಟ್ಟದ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿಕೊಳ್ಳಲಾಗಿದೆ ಎಂದರು.