ನ್ಯೂಸ್

ಬಕ್ರೀದ್​ಗಾಗಿ ನೀಡಲಾಗಿರುವ ಸಡಿಲಿಕೆ ಹಿಂಪಡೆಯದಿದ್ದರೆ ಕೋರ್ಟ್​ಗೆ ಹೋಗುತ್ತೇವೆ; ಕೇರಳ ಸರ್ಕಾರಕ್ಕೆ ಐಎಂಎ ಎಚ್ಚರಿಕೆ

ನವದೆಹಲಿ: ಕೇರಳದಲ್ಲಿ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಭಾರೀ ಏರಿಕೆ ಕಾಣುತ್ತಿದ್ದರೂ ಅದನ್ನು ಲೆಕ್ಕಿಸದೆ, ಬಕ್ರೀದ್ ಆಚರಣೆಗಾಗಿ ಲಾಕ್​ಡೌನ್ ಸಡಿಲಿಕೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಅಸಮಾಧಾನ ವ್ಯಕ್ತಪಡಿಸಿದೆ. ಸಡಿಲಿಕೆಯನ್ನು ಹಿಂಪಡೆಯದೇ ಇದ್ದರೆ ರಾಜ್ಯ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದೆ.

ದೇಶದಲ್ಲಿ ಕರೊನಾ ಮೂರನೇ ಅಲೆ ಭೀತಿ ಇದೆ. ಹೀಗಿರುವಾಗ ಲಾಕ್​ಡೌನ್ ನಿಯಮಗಳನ್ನು ಸಡಿಲಿಸುವುದು ಸೂಕ್ತವಲ್ಲ. ಕೇರಳ ಬಕ್ರೀದ್ ಆಚರಣೆಗಾಗಿ ಸಡಿಲಿಕೆ ನೀಡಿದೆ. ಒಂದು ವೇಳೆ ಆ ಸಡಿಲಿಕೆಯನ್ನು ತಕ್ಷಣ ಹಿಂಪಡೆಯದೇ ಹೋದರೆ ನಾವು ಸುಪ್ರೀಂ ಕೋರ್ಟ್​ಗೆ ತೆರಳಬೇಕಾಗುತ್ತದೆ ಎಂದು ತಿಳಿಸಲಾಗಿದೆ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿದೆ. ಸಾರ್ವಜನಿಕ ಕಾರ್ಯಕ್ರಮಗಳು ನಡೆಸದಂತೆ ಹಾಗೂ ಜನರು ಗುಂಪುಗೂಡದಂತೆ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಸಿದ್ದಾರೆ. ಈಗಾಗಲೇ ಅನೇಕ ರಾಜ್ಯಗಳು ಅನೇಕ ಧಾರ್ಮಿಕ ಯಾತ್ರೆಗಳನ್ನು ರದ್ದು ಮಾಡಿವೆ. ಆದರೆ ಕೇರಳ ಈ ರೀತಿ ಸಡಿಲಿಕೆ ಮಾಡಿರುವುದು ನಮಗೆ ನೋವುಂಟು ಮಾಡಿದೆ ಎಂದು ಐಎಂಎ ಹೇಳಿದೆ.

ಜಮ್ಮು ಕಾಶ್ಮೀರ, ಉತ್ತರ ಪ್ರದೇಶ, ಉತ್ತರಾಂಚಲ್​ನಂತಹ ಅನೇಕ ರಾಜ್ಯಗಳು ತಮ್ಮ ಸಾಂಪ್ರದಾಯಿಕ ಹಾಗೂ ಜನಪ್ರಿಯ ಧಾರ್ಮಿಕ ಕಾರ್ಯಕ್ರಮಗಳನ್ನು ರಚನಾತ್ಮಕ ಪ್ರಜ್ಞೆಯೊಂದಿಗೆ ರದ್ದು ಮಾಡಿವೆ. ಆದರೆ ವಿದ್ಯಾವಂತರ ರಾಜ್ಯವಾದ ಕೇರಳ ಈ ರೀತಿ ನಿರ್ಧಾರ ತೆಗೆದುಕೊಂಡಿರುವುದ ದುರಾದೃಷ್ಟಕರ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. (ಏಜೆನ್ಸೀಸ್)