ಕೆನಾರಾ ಇಂಡಸ್ಟ್ರೀಯಲ್ ಟೆಕ್ ಎಕ್ಸ್‌ಪೋ-2026ರಲ್ಲಿ ಕೆನರಾ ಇಂಜಿನಿಯರಿಂಗ್ ಕಾಲೇಜಿನ ಇಂಕ್ಯುಬೇಷನ್ ಕೇಂದ್ರವಾದ ಕೆನರಾ ಇನೋವೇಷನ್ ಫೌಂಡೇಶನ್ (ಸಿಐಎಫ್) ವತಿಯಿಂದ ವಿದ್ಯಾರ್ಥಿಗಳಿಂದ ರೂಪುಗೊಂಡ ಹಲವಾರು ಸ್ಟಾರ್ಟ್‌ಅಪ್‌ಗಳು ಪ್ರದರ್ಶನಕ್ಕಿಡಲಾಗಿದ್ದು, ವೀಕ್ಷಕರ ಗಮನಸೆಳೆದವು. 
ನ್ಯೂಸ್

ಕೆನರಾ ಇಂಡಸ್ಟ್ರೀಯಲ್ ಟೆಕ್ ಎಕ್ಸ್‌ಪೋದಲ್ಲಿ ಗಮನಸೆಳೆದ ಕೆನರಾ ಇಂಜಿನಿಯರಿಂಗ್ ಸ್ಟಾರ್ಟ್‌ಅಪ್‌ಗಳು

ಮಂಗಳೂರು: ಮಂಗಳೂರಿನ ಕರಾವಳಿ ಪ್ರದರ್ಶನ ಮೈದಾನದಲ್ಲಿ ಮೇ 1ರಿಂದ 3ರವರೆಗೆ ನಡೆದ ಕೆನಾರಾ ಇಂಡಸ್ಟ್ರೀಯಲ್ ಟೆಕ್ ಎಕ್ಸ್‌ಪೋ-2026ರಲ್ಲಿ ಕೆನರಾ ಇಂಜಿನಿಯರಿಂಗ್ ಕಾಲೇಜಿನ ಇಂಕ್ಯುಬೇಷನ್ ಕೇಂದ್ರವಾದ ಕೆನರಾ ಇನೋವೇಷನ್ ಫೌಂಡೇಶನ್ (ಸಿಐಎಫ್) ವತಿಯಿಂದ ವಿದ್ಯಾರ್ಥಿಗಳಿಂದ ರೂಪುಗೊಂಡ ಹಲವಾರು ಸ್ಟಾರ್ಟ್‌ಅಪ್‌ಗಳು ಪ್ರದರ್ಶನಕ್ಕಿಡಲಾಗಿದ್ದು, ವೀಕ್ಷಕರ ಗಮನಸೆಳೆದವು. ಕೃಷಿ, ಆರೋಗ್ಯ, ತಂತ್ರಜ್ಞಾನ ಹಾಗೂ ಪರಿಸರ ಸ್ನೇಹಿ ಕ್ಷೇತ್ರಗಳಲ್ಲಿ ಅಭಿವೃದ್ಧಿಪಡಿಸಲಾದ ಯೋಜನೆಗಳು ವಿಶೇಷ ಮೆಚ್ಚುಗೆ ಪಡೆದವು.
ಕೃಷಿ ಕ್ಷೇತ್ರಕ್ಕೆ ನವೀನ ಪರಿಹಾರಗಳನ್ನು ಒದಗಿಸುವ ವಿದ್ಯಾರ್ಥಿಗಳ ಅಗ್ರಿಟೆಕ್ ಸ್ಟಾರ್ಟ್‌ಅಪ್ ಸಮೃದ್ಧಿ ಆರ್ಗ್ಯಾನಿಕ್ಸ್ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು. ಕೆನರಾ ಹೈಸ್ಕೂಲ್ ಅಸೋಸಿಯೇಷನ್‌ನ ಗೌರವ ಕಾರ್ಯದರ್ಶಿ ಎಂ. ರಂಗನಾಥ ಭಟ್ ಹಾಗೂ ಆಡಳಿತ ಮಂಡಳಿ ಸದಸ್ಯರಾದ ಬಸ್ತಿ ಪುರುಷೋತ್ತಮ ಶೆಣೈ ಅವರು ಪ್ರದರ್ಶನಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಪ್ರಯತ್ನವನ್ನು ಪ್ರಶಂಸಿಸಿ ಪ್ರೋತ್ಸಾಹಿಸಿದರು. ಕೆನರಾ ಎಂಜಿನಿಯರಿಂಗ್ ಕಾಲೇಜಿನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಡೀನ್ ಡಾ. ಉದಯ ಕುಮಾರ್ ಕೆ. ಶೆಣೈ ಅವರು ಸಿಐಎಫ್ ಇಂಕ್ಯುಬೇಷನ್ ಕೇಂದ್ರದಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಸ್ಟಾರ್ಟ್‌ಅಪ್ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಕೆನರಾ ಹೈ ಸ್ಕೂಲ್ ಅಸೋಸಿಯೇಷನ್‌ನ ದೂರದೃಷ್ಟಿಯ ಫಲವಾಗಿ ಸ್ಥಾಪಿತವಾದ ಈ ಕೇಂದ್ರವು ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಮತ್ತು ನವೀನ ಚಿಂತನೆಗಳನ್ನು ಬೆಳೆಸುವ ಮಹತ್ವದ ವೇದಿಕೆಯಾಗುತ್ತಿದೆ ಎಂದರು.
ಕೆನರಾ ಇನೋವೇಷನ್ ಫೌಂಡೇಶನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ್ ಕುಮಾರ್ ಎ. ಅವರು ವಿದ್ಯಾರ್ಥಿಗಳ ಆಲೋಚನೆಗಳನ್ನು ಯಶಸ್ವಿ ಸ್ಟಾರ್ಟ್‌ಅಪ್‌ಗಳಾಗಿ ರೂಪಿಸುವ ದಿಸೆಯಲ್ಲಿ ಮಾರ್ಗದರ್ಶನ ನೀಡಿ, ಅವುಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಮೂರು ದಿನಗಳ ಕಾಲ ನಡೆದ ಈ ಕಾರ್ಯಕ್ರಮವನ್ನು ಕೆನರಾ ಇಂಜಿನಿಯರಿಂಗ್ ಕಾಲೇಜಿನ ಪರವಾಗಿ, ಕಾಲೇಜಿನ ಎಂಟ್ರಪ್ರಿನರ್‌ಶಿಪ್ ಡೆವಲಪ್ಮೆಂಟ್ ಸೆಲ್ ಸದಸ್ಯ ಸೂರಜ್ ಪ್ರಸಾದ್ ಎಂ.ಎಚ್. ಅವರು ಸಂಯೋಜಿಸಿದರು. ಈ ಪ್ರದರ್ಶನವು ವಿದ್ಯಾರ್ಥಿಗಳ ಶಿಕ್ಷಣ ಮತ್ತು ಕೈಗಾರಿಕಾ ಕ್ಷೇತ್ರಗಳ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸಿದ್ದು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ಮುಖೇನ ನವೀನತೆ ಹಾಗೂ ಉದ್ಯಮಶೀಲತೆಗೆ ಹೆಚ್ಚಿನ ಉತ್ತೇಜನ ನೀಡುವ ವೇದಿಕೆಯಾಗಲಿದೆ.