ನವದೆಹಲಿ: ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಭಾರತವೇ ಕಾರಣ ಎಂದು ಕೆನಡಾ ಆರೋಪಿಸಿತ್ತು. ಇದರಿಂದ ಭಾರತ-ಕೆನಡಾ ನಡುವಿನ ಸಂಬಂಧ ನಿರ್ಣಾಯಕ ಹಂತ ತಲುಪಿತ್ತು. ಭಾರತದ ಕಠಿಣ ಧೋರಣೆಯ ನಂತರ ಇದೀಗ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮೃದುವಾಗಿದ್ದಾರೆ. ಭಾರತದೊಂದಿಗೆ ಉತ್ತಮ ಬಾಂಧ್ಯವನ್ನು ಬೆಸೆಯಲು ಕೆನಡಾ ಬದ್ಧವಾಗಿದೆ ಎಂದು ಟ್ರೊಡೊ ಹೇಳಿದ್ದಾರೆ.
ಕಳೆದ ಜೂನ್‌ನಲ್ಲಿ ಬ್ರಿಟಿಷ್ ಕೊಲಂಬಿಯಾದಲ್ಲಿ ನಡೆದ ಸಿಖ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರ ಭಾಗಿಯಾಗಿದೆ ಎಂಬ ಆರೋಪಗಳ ಹೊರತಾಗಿಯೂ, ಕೆನಡಾ ಇನ್ನೂ ಭಾರತದೊಂದಿಗೆ ಉತ್ತಮ ಬಾಂಧ್ಯವನ್ನು ಬೆಸೆಯಲು ಬದ್ಧವಾಗಿದೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದಾರೆ. ಮಾಂಟ್ರಿಯಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಟ್ರೊಡೊ ಅವರು ಭಾರತವು ಬೆಳೆಯುತ್ತಿರುವ ಆರ್ಥಿಕ ಶಕ್ತಿ ಮತ್ತು ಪ್ರಮುಖ ಭೂರಾಜಕೀಯ ಶಕ್ತಿಯಾಗಿದೆ. ಕಳೆದ ವರ್ಷ ನಾವು ನಮ್ಮ ಇಂಡೋ-ಪೆಸಿಫಿಕ್ ಕಾರ್ಯತಂತ್ರವನ್ನು ಪ್ರಸ್ತುತಪಡಿಸಿದಂತೆ, ಭಾರತದೊಂದಿಗೆ ನಿಕಟ ಸಂಬಂಧಗಳನ್ನು ನಿರ್ಮಿಸುವ ಬಗ್ಗೆ ತುಂಬಾ ಗಂಭೀರವಾಗಿರುತ್ತೇವೆ ಎಂದು ಸುದ್ದಿಗಾರರೊಂದಿಗೆ ತಿಳಿಸಿದ್ದಾರೆ.
ಏತನ್ಮಧ್ಯೆ, ನಿಜ್ಜರ್ ಸಾವಿನ ಹಿಂದೆ ಭಾರತದ ಕೈವಾಡವಿದೆ ಎಂದು ಆರೋಪಿಸಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರಿಗೆ ಅಮೆರಿಕದಿಂದ ದೊಡ್ಡ ಹೊಡೆತ ಬಿದ್ದಿದೆ. ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಅವರು ಎನ್ ಜೈಶಂಕರ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ನಿಜ್ಜರ್ ಹತ್ಯೆಯ ವಿಷಯವನ್ನು ಪ್ರಸ್ತಾಪಿಸುತ್ತಾರೆ ಎಂದು ಟ್ರೊಡೊ ಭರವಸೆ ವ್ಯಕ್ತಪಡಿಸಿದ್ದರು. ಆದರೆ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರೊಂದಿಗಿನ ಬ್ಲಿಂಕನ್ ಭೇಟಿಗೆ ಸಂಬಂಧಿಸಿದಂತೆ ಅಮೆರಿಕ ನೀಡಿರುವ ಹೇಳಿಕೆಯಲ್ಲಿ ನಿಜ್ಜರ್ ಮತ್ತು ಕೆನಡಾದ ಪ್ರಸ್ತಾಪವಿಲ್ಲ.
ಜೂನ್ 18 ರಂದು, 45 ವರ್ಷದ ಖಲಿಸ್ತಾನಿ ಭಯೋತ್ಪಾದಕ ನಿಜ್ಜರ್ ಅವರನ್ನು ಬ್ರಿಟಿಷ್ ಕೊಲಂಬಿಯಾದಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಕೆಲವು ದಿನಗಳ ಹಿಂದೆ ಸ್ಫೋಟಕ ಆರೋಪಗಳನ್ನು ಮಾಡಿದ್ದರು, ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರರು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದ್ದರು. ಟ್ರುಡೊ ಆರೋಪದ ನಂತರ ಭಾರತ ಮತ್ತು ಕೆನಡಾ ನಡುವೆ ಉದ್ವಿಗ್ನತೆ ಹೆಚ್ಚಿತ್ತು. ಭಾರತವು 2020 ರಲ್ಲಿ ನಿಜ್ಜರ್ ಅವರನ್ನು ಭಯೋತ್ಪಾದಕ ಎಂದು ಘೋಷಿಸಿತ್ತು.
ಆ ನಂತರ ಭಾರತವು ಟ್ರುಡೊ ಅವರ ಆರೋಪಗಳನ್ನು 'ಅನಂಬದ್ಧ' ಮತ್ತು 'ಪ್ರೇರಣೆ' ಎಂದು ತಿರಸ್ಕರಿಸಿತು. ಈ ವಿಷಯದ ಬಗ್ಗೆ ಒಟ್ಟಾವಾ ಭಾರತೀಯ ಅಧಿಕಾರಿಯನ್ನು ಹೊರಹಾಕಿದ್ದಕ್ಕಾಗಿ ಪ್ರತೀಕಾರವಾಗಿ ಕೆನಡಾದ ಹಿರಿಯ ರಾಜತಾಂತ್ರಿಕರನ್ನು ಭಾರತ ಹೊರಹಾಕಿತು.