ಕೆನಡಾ: ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಭಾರತ ಮತ್ತು ಕೆನಡಾ ನಡುವೆ ಉದ್ವಿಗ್ನತೆಯನ್ನು ಸೃಷ್ಟಿಸಿದೆ. ಎರಡೂ ದೇಶಗಳು ಪರಸ್ಪರರ ಹಿರಿಯ ರಾಜತಾಂತ್ರಿಕರನ್ನು ಹೊರಹಾಕಿವೆ. ಈ ಮೂಲಕ ಕೆನಡಾ ಸರ್ಕಾರ ಮತ್ತೊಮ್ಮೆ ಭಾರತ ರಾಜತಾಂತ್ರಿಕರನ್ನು ಕಿತ್ತು ಹಾಕಿದೆ. ಇದೀಗ ಭಾರತದ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಯಾಣಿಸದಂತೆ ಕೆನಡಾದ ನಾಗರಿಕರಿಗೆ ಸಲಹೆ ನೀಡಿದೆ.
ಭಯೋತ್ಪಾದನೆ, ಅಶಾಂತಿ ಮತ್ತು ಅಪಹರಣದ ಅಪಾಯ ಹಾಗೂ ಭದ್ರತಾ ಕಾರಣಗಳಿಗಾಗಿ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಕ್ಕೆ ಪ್ರಯಾಣ ತಪ್ಪಿಸಿ ಎಂದು ತಿಳಿಸಲಾಗಿದೆ.
ಏನಿದು ಪ್ರಕರಣ?
ಖಲಿಸ್ತಾನ್ ಟೈಗರ್ ಫೋರ್ಸ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಸರ್ಕಾರಿ ಏಜೆಂಟರ ಕೈವಾಡವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟುಡ್ರೋ ಸಂಸತ್ತಿನಲ್ಲಿ ಆರೋಪಿಸಿದರು. ಆದರೆ, ಭಾರತ ಈ ಆರೋಪಗಳನ್ನು 'ಆಧಾರರಹಿತ ಮತ್ತು ಭ್ರಮೆ' ಎಂದು ಟೀಕಿಸಿದೆ.
ನಿಜ್ಜರ್ ಯಾರು?
45 ವರ್ಷದ ಹರ್ದೀಪ್ ಸಿಂಗ್ ನಿಜ್ಜರ್ ನಿಷೇಧಿತ ಕೆಟಿಎಫ್ (ಖಲಿಸ್ತಾನ್ ಟೈಗರ್ ಫೋರ್ಸ್) ಮುಖ್ಯಸ್ಥ ಮತ್ತು ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬರಾಗಿದ್ದರು. ಆತನ ಮೇಲೆ 10 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಲಾಗಿತ್ತು. ಜೂನ್ 18 ರಂದು ಪಶ್ಚಿಮ ಕೆನಡಾದ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿರುವ ಗುರುದ್ವಾರದಲ್ಲಿ ಇಬ್ಬರು ಅಪರಿಚಿತ ಬಂದೂಕುಧಾರಿಗಳಿಂದ ನಿಜ್ಜರ್ ಕೊಲ್ಲಲ್ಪಟ್ಟರು.