ಬೆಂಗಳೂರು: ಬಿಜೆಪಿ ಆಡಳಿತಾವಧಿಯಲ್ಲಿ ಕೋವಿಡ್ ಸಾಂಕ್ರಾಮಿಕ ಪಿಡುಗು ನಿಯಂತ್ರಣ ಮತ್ತು ನಿರ್ವಹಣೆಗೆ ಪರಿಕರಗಳ ಖರೀದಿ ಮೊತ್ತವೇ ಏಳು ಸಾವಿರ ಕೋಟಿ ರೂ. ಅಷ್ಟೂ ಮೊತ್ತ ಅಕ್ರಮವೆಂದರೆ ನಂಬಲು ಸಾಧ್ಯವೆ ? ಎಂದು ಮಾಜಿ ಸಚಿವ, ಸಂಸದ ಡಾ.ಕೆ.ಸುಧಾಕರ್ ಪ್ರಶ್ನಿಸಿದರು.
ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರ್ಕಾರ ನೇಮಿಸಿದ ನ್ಯಾ.ಜಾನ್ ಮೈಕೆಲ್ ಡಿ.ಕುನ್ಹಾ ತನಿಖಾ ಸಮಿತಿ ಮಧ್ಯಂತರ ವರದಿ ಕೊಟ್ಟಿದೆ. ಅಂತಿಮ ವರದಿ ಸಲ್ಲಿಸಲು ಆರು ತಿಂಗಳ ಕಾಲಾವಕಾಶ ಕೇಳಿದೆ ಎಂದು ಗೊತ್ತಾಗಿದೆ.
ಮಧ್ಯಂತರ ವರದಿಯನ್ನು ಸರ್ಕಾರ ಅಧಿಕೃತವಾಗಿ ಪ್ರಕಟಿಸಲಿ. ಈ ವರದಿ ಆಧರಿಸಿ ತನ್ನ ಕ್ರಮವೇನು ? ಎಂದು ತಿಳಿಸಲಿ, ನಂತರ ಈ ಬಗ್ಗೆ ಉತ್ತರಿಸುವೆ, ಊಹಾಪೋಹಗಳ ಆಧಾರದಲ್ಲಿ ಪ್ರತಿಕ್ರಿಯೆ ಬೇಡ ಎಂದು ನಿರಾಕರಿಸಿದರು.
ಮಧ್ಯಂತರ ವರದಿಯಲ್ಲಿದೆ ಎನ್ನಲಾದ ಕೆಲವು ಅಂಶಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಇದನ್ನು ಸೋರಿಕೆ ಮಾಡಿದವರು ಯಾರು ?, ಅಧಿಕೃತ ವರದಿಯ ಸಾರಾಂಶಗಳೇ ಎನ್ನುವುದೂ ಗೊತ್ತಿಲ್ಲ ಎಂದರು.
ನ್ಯಾ.ಕುನ್ಹಾ ವರದಿಯನ್ನು ಸರ್ಕಾರ ಶನಿವಾರ ರಾತ್ರಿಯೇ ಪಡೆದಿದೆ. ಎಲ್ಲರೂ ಸೇರಿ ಗುಣಾಕಾರ, ಭಾಗಕಾರ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಇರುವ ಎಲ್ಲರೂ ಸತ್ಯ ಹರಿಶ್ಚಂದ್ರರೆ ?, ಎಲ್ಲ ಇಲಾಖೆಗಳಲ್ಲಿ ಅಕ್ರಮ, ದರೋಡೆಯೇ ನಡೆಯುತ್ತಿದೆ ಎಂದು ಡಾ.ಕೆ.ಸುಧಾಕರ್ ಆರೋಪಿಸಿದರು.
ಕೋವಿಡ್ ತನಿಖೆಯನ್ನು ಸ್ವಾಗತಿಸುವೆ. ಸರ್ಕಾರ ಹೊಸ ಪರಂಪರೆ ಶುರು ಮಾಡಿದೆ. ಕ್ರಿಮಿನಲ್ ದಾವೆ ಹೂಡಲು ಶಿಾರಸು ಮಾಡಿದೆಯಂತೆ. ರಾಜಕೀಯ, ಕಾನೂನು ಸವಾಲು ಎದುರಿಸುವುದಕ್ಕೆ ಉತ್ಸುಕನಾಗಿರುವೆ ಎಂದರು.
ಕೋವಿಡ್ ಕಾಲದಲ್ಲಿ ವೈದ್ಯಕೀಯ ಸಚಿವನಾಗಿ ಅಂತಃಕರಣಪೂರಕವಾಗಿ ಹಗಲಿರುಳು ರೋಗಿಗಳ ಸೇವೆಗೆ ಶ್ರಮಿಸಿರುವೆ. ಸಿಎಂ ಆಗಿದ್ದ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿದ್ದ ಟಾಸ್ಕ್ ೆರ್ಸ್‌ಗೆ ಐವರು ಸಚಿವರು, ಹಿರಿಯ ಅಧಿಕಾರಿಗಳು, ತಜ್ಞರಿದ್ದರು.
ಇದೇ ಸಮಿತಿ ಮುಖೇನ ಪ್ರತಿಯೊಂದು ನಿರ್ಧಾರವಾಗುತ್ತಿದ್ದವು. ನಂತರ ಬಿ.ಶ್ರೀರಾಮುಲು, ಡಾ.ಸಿ.ಎನ್.ಅಶ್ವತ್ಥ ನಾರಾಯಣ ಟಾಸ್ಕ್ ೆರ್ಸ್ ಅಧ್ಯಕ್ಷರಾಗಿದ್ದರು. ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಅಧಿಕಾರಿಗಳು, ತಜ್ಞರನ್ನು ಒಳಗೊಂಡು ಮತ್ತೊಂದು ಸಮಿತಿಯಿತ್ತು.
ಯಡಿಯೂರಪ್ಪ, ಬೊಮ್ಮಾಯಿ ಆಡಳಿತಾವಧಿಯಲ್ಲಿ ಕಾನೂನು, ನಿಯಮಗಳಿಗೆ ಬದ್ಧವಾಗಿಯೇ ಸಮರೋಪಾದಿಯಲ್ಲಿ ರಾಜ್ಯದ ಜನರ ಜೀವ, ಜೀವನ ಉಳಿಸುವ ಕೆಲಸ ಮಾಡಿದ್ದೇವೆ ಎಂದು ಡಾ.ಕೆ.ಸುಧಾಕರ್ ಸಮಜಾಯಿಷಿ ನೀಡಿದರು.
ಜಾಗತಿಕ ಸಾಂಕ್ರಾಮಿಕ ಪಿಡುಗಿನ ಹಾವಳಿಯು ವೈದ್ಯಕೀಯ ತುರ್ತು ಪರಿಸ್ಥಿತಿ ಸೃಷ್ಟಿಸಿತ್ತು. ಈ ಅವಧಿಯಲ್ಲಿ ಔಷಧ, ಮಾತ್ರೆ, ಆಕ್ಸಿಜನ್, ಟೆಸ್ಟ್ ಕಿಟ್‌ಗಳು, ಮಾಸ್ಕ್ ಹೀಗೆ ಪ್ರತಿಯೊಂದರ ಬೆಲೆ, ಬೇಡಿಕೆ ಏರುಮುಖಿಯಾಗಿದ್ದವು.
ಕೋವಿಡ್ ಕಾಲದಲ್ಲಿದ್ದ ಬೆಲೆಗಳನ್ನು ಈಗಿನ ಸ್ಥಿತಿಗೆ ತುಲನೆ ಮಾಡುವುದು ತಾಳಮೇಳ, ತಾತ್ವಿಕ ತಳಹದಿ ಇಲ್ಲದಂತಾಗಲಿದೆ. ಕೋವಿಡ್ ಸೋಂಕು ಅಪ್ಪಳಿಸಿದ ನಂತರ ಆರೋಗ್ಯ ವ್ಯವಸ್ಥೆಯ ಹುಳುಕುಗಳು ಹೊರಬಿದ್ದವು.
ವಸ್ತುಸ್ಥಿತಿ ತಿಳಿದು ತ್ವರಿತವಾಗಿ ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಒತ್ತು ನೀಡಿ, ಉತ್ತಮ ಸೌಲಭ್ಯಗಳನ್ನು ಒದಗಿಸಲಾಗಿದೆ. ಪ್ರಾಥಮಿಕ, ಸಮುದಾಯ, ತಾಲೂಕು, ಜಿಲ್ಲಾ ಆಸ್ಪತ್ರೆಗಳು, ವೈದ್ಯಕೀಯ ಆಸ್ಪತ್ರೆಗಳ ಸೌಲಭ್ಯ ಬಲವರ್ಧನೆಯಾಗಿದೆ.
ಅರ್ಕಾವತಿ ಡಿ-ನೋಟಿಫಿಕೇಷನ್ ಬಗ್ಗೆ ತನಿಖೆ ನಡೆಸಿದ ನ್ಯಾ.ಕೆಂಪಣ್ಣ ಆಯೋಗದ ವರದಿಯ ಎರಡು ಸಂಪುಗಳಲ್ಲಿ ಸಲ್ಲಿಕೆಯಾಗಿದ್ದವು. ಈ ವರದಿ ಮುಂದಿಟ್ಟುಕೊಂಡು ಬಿಜೆಪಿ ಆಡಳಿತ ಕಾಲದಲ್ಲಿ ರಾಜಕೀಯ ದ್ವೇಷವಂತೂ ಸಾಧಿಸಿದ್ದಿಲ್ಲ ಎಂಬ ಮಾತನ್ನೂ ಡಾ.ಕೆ.ಸುಧಾಕರ್ ಸೇರಿಸಿದರು.