ಕೋಲಾರ: ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗಾಗಿ "ಶುಭದಿನ'ಕ್ಕಾಗಿ ಕಾದಿದ್ದ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶುಭಕಾರ್ಯಗಳು ನಿಷಿದ್ಧವಿರುವ ಧನುಮಾರ್ಸದಲ್ಲಿ ಪಟ್ಟಿ ಬಿಡುಗಡೆ ಮಾಡಿ ರಾಜಕೀಯ ವಲಯದಲ್ಲಿ ಎಲ್ಲರ ಕಣ್ಣು ಹುಬ್ಬೇರುವಂತೆ ಮಾಡಿದ್ದಾರೆ.
ಇನ್ನು ರಾಜ್ಯದ ದೇವಮೂಲೆಯಾದ ಕೂಡುಮಲೆಯ ಗಣಪತಿ ಸನ್ನಿಧಿಯಲ್ಲಿ ಪಂಚರತ್ನ ಯಾತ್ರೆಗೆ ಚಾಲನೆ ನೀಡಿದ ನ.1ರಂದು ಮತ್ತು ಪಂಚರತ್ನ ಬೃಹತ್ ಸಮಾವೇಶ ನಡೆದ ನ.18ರಂದು ಮುಳಬಾಗಿಲಿನಲ್ಲಿ ಪಟ್ಟಿ ಬಿಡುಗಡೆಯಾಗದೆ ಬೆಂಗಳೂರಿನಲ್ಲಿ ಸೋಮವಾರ ಬಿಡುಗಡೆಯಾಗಿದೆ. ಪಟ್ಟಿಯಲ್ಲಿ ಜಿಲ್ಲೆಯ ಆರೂ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವ ಮೂಲಕ ಕೋಲಾರ ಜೆಡಿಎಸ್ ಪಾಲಿಗೆ ಪ್ರತಿಷ್ಠಿತ ಜಿಲ್ಲೆ ಎಂಬುದನ್ನು ದಳಪತಿಗಳು ಮತ್ತೊಮ್ಮೆ ಸಾರಿದ್ದಾರೆ.
ಬಿಡುಗಡೆಯಾದ ಪಟ್ಟಿಯಲ್ಲಿ ನಾಲ್ಕೆ$ದು ವರ್ಷದಿಂದ ಆಯಾ ಕ್ಷೇತ್ರದಲ್ಲಿ ಸಕ್ರೀಯವಾಗಿರುವ ಅಭ್ಯರ್ಥಿಗಳು ನಿಟ್ಟುಸಿರು ಬಿಡುವಂತಾಗಿದೆ. ಮೊದಲ ಹಂತದಲ್ಲಿಯೇ ಕೋಲಾರದ ಆರೂ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿರುವುದು ರಾಜಕೀಯ ವಲಯದಲ್ಲಿ ಎಲ್ಲರು ಕಣ್ಣುಹುಬ್ಬೇರಿಸುವಂತೆ ಮಾಡಿದೆ.
ಒಂದು ಕಾಲದಲ್ಲಿ ಜನತಾಪರಿವಾರದ ಭದ್ರಕೋಟೆಯಾಗಿದ್ದ ಕೋಲಾರದಲ್ಲಿ ಪ್ರಸ್ತುತ ಜೆಡಿಎಸ್ ಪ್ರಬಲವಾಗಿದ್ದು, ಅಳೆದೂ ತೂಗಿ ಮೊದಲಿನಿಂದಲೂ ಹೇಳುತ್ತ ಬಂದಿದ್ದವರಿಗೇ ಟಿಕೆಟ್ ನೀಡಲಾಗಿದೆ.
ಕೋಲಾರದಲ್ಲಿ ಸಿಎಂಆರ್ ಶ್ರೀನಾಥ್, ಮಾಲೂರಿನಲ್ಲಿ ಜಿ.ಇ.ರಾಮೇಗೌಡ, ಬಂಗಾರಪೇಟೆಯಲ್ಲಿ ಎಂ.ಮಲ್ಲೇಶ್ ಬಾಬು, ಮುಳಬಾಗಿಲಿನಲ್ಲಿ ಸಮೃದ್ಧಿ ಮಂಜುನಾಥ್ ಮತ್ತು ಕೆಜಿಎಫ್ನಲ್ಲಿ ರಮೇಶ್ ಬಾಬು ಮತ್ತು ಶ್ರೀನಿವಾಸಪುರದಲ್ಲಿ ಜಿ.ಕೆ.ವೆಂಕಟಶಿವಾರೆಡ್ಡಿಗೆ ಟಿಕೆಟ್ ಘೋಷಿಸಲಾಗಿದೆ. ಮುಳಬಾಗಿಲಿನಲ್ಲಿ ಪಕ್ಷದಲ್ಲಿ ಸ್ವಲ್ಪ ಮಟ್ಟಿಗೆ ಭಿನ್ನಾಭಿಪ್ರಾಯವಿದ್ದು, ಕೋಲಾರದಲ್ಲಿ ಟಿಕೆಟ್ಗಾಗಿ ಸ್ಪರ್ಧೆ ಏರ್ಪಟ್ಟಿತ್ತಾದರೂ ಅದನ್ನೆಲ್ಲ ಸರಿಪಡಿಸಿಯೇ ಟಿಕೆಟ್ ಘೋಷಿಸಲಾಗಿದೆ. ಪಂಚರತ್ನ ಯಾತ್ರೆಯ ಹುರುಪಿನಲ್ಲಿ ಅಭ್ಯರ್ಥಿಗಳು ಪಕ್ಷ ಸೇರ್ಪಡೆ, ಪ್ರಚಾರ ಸಭೆಗಳನ್ನು ಆಯೋಜಿಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ಹೋಲಿಸಿದರೆ ಜೆಡಿಎಸ್ ಸದ್ಯಕ್ಕೆ ಎಲ್ಲ ಕ್ಷೇತ್ರಗಳಲ್ಲಿ ಪ್ರಚಾರ, ಸಂಘಟನೆಯಲ್ಲಿ ಮುಂದಿದೆ.
ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೂ ಅಭ್ಯರ್ಥಿ ಬದಲಿಸಲ್ಲ ಎಂದಿದ್ದ ಎಚ್ಡಿಕೆ ಟೊಮ್ಯಾಟೊ ವ್ಯಾಪಾರಿ, ರೈತ ಸಿಎಂಆರ್ ಶ್ರೀನಾಥ್ಗೇ ಟಿಕೆಟ್ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಅವರಿಗೆ ಮಾಜಿ ಸಚಿವ ವರ್ತೂರು ಆರ್.ಪ್ರಕಾಶ್ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದ್ದಾರೆ. ಇಲ್ಲಿ ಸಿದ್ದರಾಮಯ್ಯ ಸ್ಪರ್ಧಿಸದಿದ್ದರೆ ಬ್ಯಾಲಹಳ್ಳಿ ಗೋವಿಂದಗೌಡ, ವಿ.ಆರ್.ಸುದರ್ಶನ್ ಅಥವಾ ಇತರ ಆಕಾಂಕ್ಷಿಗಳು ಕಾಂಗ್ರೆಸ್ನಿಂದ ಸ್ಪರ್ಧಿಸಬಹುದು. "ಕೈ' ಟಿಕೆಟ್ ಘೋಷಣೆಯಾಗದಿರುವುದು ಜೆಡಿಎಸ್ ಪ್ರಚಾರಕ್ಕೆ ಸಹಕಾರಿಯಾಗಿದೆ ಎಂದರೆ ತಪ್ಪಾಗಲಾರದು.
ಮಾಲೂರಿನಲ್ಲಿ ಬಿಜೆಪಿಯಲ್ಲಿ ಹೂಡಿ ವಿಜಯಕುಮಾರ್ ಮತ್ತು ಇತ್ತೀಚೆಗೆ ಪಕ್ಷ ಸೇರ್ಪಡೆಯಾಗಿರುವ ಮಾಜಿ ಶಾಸಕ ಮಂಜುನಾಥಗೌಡರ ನಡುವೆ ಟಿಕೆಟ್ ಫೈಟ್ ಇದ್ದು, ಜೆಡಿಎಸ್ನ ಜಿ.ಇ.ರಾಮೇಗೌಡರಿಗೆ ವರದಾನವಾದರೂ ಆಶ್ಚರ್ಯವಿಲ್ಲ. ಕಾಂಗ್ರೆಸ್ನಿಂದ ಶಾಸಕ ಕೆ.ವೈ.ನಂಜೇಗೌಡರಿಗೆ ಟಿಕೆಟ್ ಸಿಗುವ ಸಾಧ್ಯತೆಯಿದ್ದು ತ್ರಿಕೋನ ಸ್ಪರ್ಧೆ ಏರ್ಪಡುವುದು ಖಚಿತವಾಗಿದೆ. ಬಂಗಾರಪೇಟೆಯಲ್ಲಿ ಬಿಜೆಪಿ ಇನ್ನೂ ಪ್ರಚಾರಕ್ಕೆ ಇಳಿದಿಲ್ಲ, ಇಲ್ಲಿ ಕಾಂಗ್ರೆಸ್ನ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರಿಗೆ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಎದುರಾಳಿ. ಮುಳಬಾಗಿಲಿನಲ್ಲಿ ಬಿಜೆಪಿ, ಕಾಂಗ್ರೆಸ್ ನಿದ್ರಾವಸ್ಥೆಯಲ್ಲಿದ್ದು ಸಮೃದ್ಧಿ ಮಂಜುನಾಥ್ ರಣಕಹಳೆ ಮೊಳಗಿಸಿದ್ದಾಗಿದೆ. ಶ್ರೀನಿವಾಸಪುರದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಸ್ಪರ್ಧೆಗಿಳಿಯಲಿದ್ದಾರೆ. ಇನ್ನು ಅಭ್ಯರ್ಥಿ ಕೊರತೆಯಿದ್ದ ಕೆಜಿಎಫ್ನಲ್ಲೂ ರಮೇಶ್ಬಾಬು ಎಂಬ ಹೊಸ ಮುಖವನ್ನು ಎಚ್ಡಿಕೆ ಪರಿಚಯಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ರ್ಖಗೆ, ಸ್ಟೀರಿಂಗ್ ಸಮಿತಿ ಸದಸ್ಯ ಕೆ.ಎಚ್.ಮುನಿಯಪ್ಪ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೋಲಿಗೆ ಸಿದ್ದರಾಮಯ್ಯ ಮತ್ತು ರಮೇಶ್ ಕುಮಾರ್ ಕಾರಣ ಎಂಬುದನ್ನು ಪ್ರಬಲವಾಗಿ ಪ್ರತಿಪಾದಿಸಿದರೆ ದಲಿತರ ಮತಗಳು ಕೈತಪ್ಪುತ್ತವೆ. ಅದೇ ರೀತಿ ಕೆ.ಎಚ್.ಮುನಿಯಪ್ಪ ಮತ್ತವರ ಬೆಂಬಲಿಗರ "ಒಳೇಟು' ಕೈಗೆ ಹೊಡೆತ ಬೀಳುವುದರಲ್ಲಿ ಅನುಮಾನವೇ ಇಲ್ಲ. ಇದೆಲ್ಲದರ ನಡುವೆ ಬಿಜೆಪಿ ನಾಯಕರಾದ ಡಾ.ಕೆ.ಸುಧಾಕರ್, ಮುನಿರತ್ನ, ಎಸ್.ಮುನಿಸ್ವಾಮಿ ಎಲ್ಲ ಪಟ್ಟುಗಳನ್ನು ಹಾಕುವುದರಿಂದ ಆರೂ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟು ಅನಾಯಾಸವಾಗಿ ಜೆಡಿಎಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ ಎಂಬುದು ದಳಪತಿಗಳ ಪ್ರಬಲ ನಂಬಿಕೆಯಾಗಿದೆ.