ಬೆಂಗಳೂರು: ಅಪ್ರತಿಮ ಗಾಯಕ, ಗಾನ ಗಾರುಡಿಗ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಅಗಲಿಕೆಯ ಬೆನ್ನಿಗೇ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿ ಗೌರವಿಸಬೇಕು ಎಂಬ ಒತ್ತಾಯವೊಂದು ಕೇಳಿಬಂದಿದೆ. ಆ ನಿಟ್ಟಿನಲ್ಲಿ ಅಭಿಯಾನವೊಂದು ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ.
#bharatratnaforspb ಎಂಬ ಹ್ಯಾಷ್ಟ್ಯಾಗ್ನಲ್ಲಿ ಶನಿವಾರವೇ ಅಭಿಯಾನ ಆರಂಭವಾಗಿದ್ದು, ಇನ್ನೂ ಮುಂದುವರಿದಿದೆ. ನೆಟ್ಟಿಗರು ಹಾಗೂ ಎಸ್ಪಿಬಿ ಅವರ ಅಭಿಮಾನಿಗಳು ಅವರಿಗೆ ಭಾರತ ರತ್ನ ಸಿಗಲೇಬೇಕು ಎಂದು ವಿಧವಿಧವಾಗಿ ಆಗ್ರಹಿಸಿದ್ದಾರೆ. ಒಬ್ಬ ನೆಟ್ಟಿಗರಂತೂ "35 ಸಾವಿರ ರನ್ಗಳಿಗೆ ಭಾರತ ರತ್ನ ಸಿಕ್ಕಿದ್ದರೆ 45 ಸಾವಿರ ಹಾಡುಗಳಿಗೆ ಏಕೆ ಸಿಗಬಾರದು?" ಎನ್ನುವ ಮೂಲಕ ಎಸ್ಪಿಬಿಗೆ ಭಾರತ ರತ್ನ ನೀಡುವಂತೆ ಆಗ್ರಹಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂಬುದಾಗಿ ಪುದುಚೆರಿಯ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಆಗ್ರಹಿಸಿದ್ದಾರೆ. ಮತ್ತೊಂದೆಡೆ ಬಹುಭಾಷಾ ನಟ ಅರ್ಜುನ್ ಸರ್ಜಾ ಕೂಡ ಎಸ್ಪಿಬಿ ಅವರಿಗೆ ಭಾರತ ರತ್ನ ಪ್ರಶಸ್ತಿ ಗೌರವ ಲಭಿಸಬೇಕು ಎಂದು ಆಗ್ರಹಿಸಿದ್ದಾರೆ.