ಬೆಂಗಳೂರು:ಹಳೇ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳ ಗುಂಪು ರೌಡಿಯನ್ನು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.
ದೇವರಜೀವನಹಳ್ಳಿ ಮೋದಿ ರಸ್ತೆ ನಿವಾಸಿ ಸೈಯದ್ ಸುಹೇಲ್ ಅಲಿಯಾಸ್ ಪಪ್ಪಾಯಿ ಸುಹೇಲ್ (28) ಮೃತ ರೌಡಿ. ಜೆ.ಸಿ.ನಗರ ಠಾಣೆ ರೌಡಿಶೀಟರ್ ಆಗಿದ್ದ. ಗುರುವಾರ ರಾತ್ರಿ 9.30ರಲ್ಲಿ ಸೈಯದ್ ಸಹೇಲ್ ಮನೆಯಲ್ಲಿ ಇದ್ದ. ಆರೇಳು ಜನರ ಗುಂಪೊಂದು ಮನೆಗೆ ಬಂದು ಸೈಯದ್ ಸುಹೇಲ್‌ನನ್ನು ಹೊರಗೆ ಕರೆದೊಯ್ದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದೆ. ಗಂಭೀರವಾಗಿ ಗಾಯಗೊಂಡಿದ್ದ ಸುಹೇಲ್‌ನನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೈಯದ್ ಸುಹೇಲ್ ವಿರುದ್ಧ ಜೆ.ಸಿ.ನಗರ, ಡಿ.ಜೆ.ಹಳ್ಳಿ ಸೇರಿದಂತೆ ವಿವಿಧ ಠಾಣೆಗಳಲ್ಲಿ ಕೊಲೆ, ಕೊಲೆಗೆ ಯತ್ನ ಸೇರಿದಂತೆ 6 ಅಪರಾಧ ಪ್ರಕರಣಗಳಿವೆ. ಸುಹೇಲ್ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಫೈಜ್ ಎಂಬಾತನೊಂದಿಗೆ ದ್ವೇಷ ಕಟ್ಟಿಕೊಂಡಿದ್ದ ಎನ್ನಲಾಗಿದೆ.
ಫೈಜ್ ಮತ್ತು ಸಹಚರರೇ ಸುಹೇಲ್‌ನನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಡಿ.ಜೆ.ಹಳ್ಳಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.