ನ್ಯೂಸ್

ಜಾಗಣತಿಯಲ್ಲಿ ‘ಶಿವಾರ್ಚಕ’ ಎಂದು ನಮೂದಿಸಲು ಕರೆ

ಬೆಂಗಳೂರು: ಜಾತಿ ಗಣತಿ ಆರಂಭವಾಗುತ್ತಿರುವ ಸಂದರ್ಭದಲ್ಲಿ ರಾಜ್ಯ ಶಿವಾರ್ಚಕ ಸಮುದಾಯ ಒಟ್ಟಾಗಿ ಒಂದೇ ಸ್ವರೂಪದಲ್ಲಿ ಮಾಹಿತಿ ದಾಖಲಿಸಬೇಕೆಂದು ರಾಜ್ಯ ಶಿವಾರ್ಚಕ ಕ್ಷೇಮಾಭಿವೃದ್ಧಿ ಟ್ರಸ್ಟ್ ಕರೆ ನೀಡಿದೆ.

ಪತ್ರಿಕಾ ಹೇಳಿಕೆ ನೀಡಿರುವ ಟ್ರಸ್ಟ್ ಅಧ್ಯಕ್ಷ ಎಚ್.ಕುಮಾರಸ್ವಾಮಿ ಹಾಗೂ ಬೆಂಗಳೂರು ಶಿವಾರ್ಚಕ ಕ್ಷೇಮಾಭಿವೃದ್ಧಿ ಟ್ರಸ್ಟ್‌ನ ಪುಟ್ಟಬಸಪ್ಪ, ಸಿ.ಗೋಪಾಲ್, ನಮ್ಮ ಸಮುದಾಯ ರಾಮನಗರ, ಮಂಡ್ಯ, ಹಾಸನ, ಚಾಮರಾಜನಗರ, ಮೈಸೂರು, ಬೆಂಗಳೂರು ಗ್ರಾಮಾಂತರ ಹಾಗೂ ನಗರದಲ್ಲಿ ಚದುರಿದಂತೆ ಇದ್ದು, ಎಲ್ಲರೂ ಜಾತಿ ಕಾಲಂನಲ್ಲಿ ಒಂದೇ ರೀತಿ ನಮೂದಿಸಿ ಒಗ್ಗಟ್ಟು ದಾಖಲಿಸಬೇಕು ಎಂದು ಕೋರಿದ್ದಾರೆ.

ಧರ್ಮ ಕಾಲಂನಲ್ಲಿ ‘ಹಿಂದೂ’, ಜಾತಿ ಕಾಲಂನಲ್ಲಿ ಕ್ರಮ ಸಂಖ್ಯೆ 2- 1320 ‘ ಶಿವಾರ್ಚಕ’ ಎಂದು ನಮೂದು ಮಾಡಬೇಕು. ಉಪಜಾತಿ ಕಲಂನಲ್ಲಿ ಯಾವುದೂ ಇಲ್ಲ ಎಂದು ಬರೆಸಬೇಕು ಎಂದು ವಿನಂತಿಸಿದ್ದಾರೆ.

ಈ ಹಿಂದೆ ಮಾಹಿತಿ ಕೊರತೆ, ಗ್ರಾಮೀಣ ಭಾಗದಲ್ಲಿ ಅರಿವಿಲ್ಲದೇ ಸ್ಥಳೀಯವಾಗಿ ತಮಗನಿಸಿದ್ದು ಬರೆಸಿದ್ದಾರೆ. ಇನ್ನು ಮುಂದಾದರೂ ಈ ಸಮುದಾಯದವರೆಲ್ಲರೂ ಶಿವಾರ್ಚಕ ಎಂದು ನಮೂದಿಸಿದಾಗ ಸಮುದಾಯದ ಸಂಖ್ಯೆ ಸರ್ಕಾರಕ್ಕೂ ಗೊತ್ತಾಗಲಿದೆ. ಇದರಿಂದ ಯೋಜನೆಗಳನ್ನು ಪಡೆದುಕೊಳ್ಳಲು ಅನುಕೂಲವಾಗಲಿದೆ ಎಂದು ಎಸ್.ಕುಮಾರಸ್ವಾಮಿ ವಿವರಿಸಿದ್ದಾರೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಹಿಂದಿನ ಅಧ್ಯಕ್ಷರಾಗಿದ್ದ ಎನ್.ಶಂಕ್ರಪ್ಪ ಅವರಿಗೆ ಸಮುದಾಯದ ನಿಯೋಗವು ಪ್ರವರ್ಗ 3(ಬಿ) ಪಟ್ಟಿಯಲ್ಲಿ ಶಿವಾರ್ಚಕ ಜಾತಿಯನ್ನು ಸೇರಿಸಬೇಕು ಎಂದು ಮನವಿ ಮಾಡಲಾಗಿತ್ತು. ಆ ಪ್ರಕಾರ ಶಿಾರಸು ಕೂಡ ಆಗಿತ್ತು. ಸತತ ಪ್ರಯತ್ನದ ಬಳಿಕ 2012ರಲ್ಲಿ ಹಿಂದುಳಿದ ವರ್ಗಗಳ ಆಯೋಗವು ಅಧಿಕೃತವಾಗಿ ವಿಚಾರಣೆಗೂ ಕರೆದು ವಿಚಾರಣೆ ನಡೆಸಿತ್ತು. ಈ ಪ್ರಯತ್ನದ ಲವಾಗಿ ಹಿಂದುಳಿದ ವರ್ಗಗಳ ಆಯೋಗವು ಸರ್ಕಾರಕ್ಕೆ ಶಿವಾರ್ಚಕ ಜಾತಿಯನ್ನು ಪ್ರವರ್ಗ 3 (ಬಿ) ಪಟ್ಟಿಯಲ್ಲಿ ಸೇರಿಸಬೇಕು ಎಂದು ಸರ್ಕಾರಕ್ಕೆ ಶಿಾರಸು ಮಾಡಿತ್ತು ಎಂದು ಟ್ರಸ್ಟ್ ಅಧ್ಯಕ್ಷ ಪುಟ್ಟಬಸಪ್ಪ ತಿಳಿಸಿದ್ದಾರೆ.

ಕೆಲವೊಂದು ಗ್ರಾಮಗಳಲ್ಲಿ ದೇವಸ್ಥಾನದ ಮುಖ್ಯ ಅರ್ಚಕರಾಗಿ, ಕೆಲವೊಂದು ಕಡೆ ಬ್ರಾಹ್ಮಣ ಪುರೋಹಿತರ ಪರಿಚಾರಕರಾಗಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಸಮುದಾಯದವರು ದೇವಸ್ಥಾನಗಳಲ್ಲಿ ಪೂಜೆ ಮಾಡುವುದು ಮತ್ತು ಕೊಡುಗೆಯಾಗಿ ನೀಡಿರುವ ಜಮೀನುಗಳಲ್ಲಿ ವ್ಯವಸಾಯ ಮೂಲ ಕಸುಬಾಗಿದೆ. ನಮಗೆ ಐದು ಗೋತ್ರಗಳು, ಐದು ಮುದ್ರೆಗಳಿವೆ, ತಲೆಯಲ್ಲಿ ಲಿಂಗ ಕಟ್ಟುವುದು, ಹಣೆಯಲ್ಲಿ ವಿಭೂತಿ, ಕೊರಳಲ್ಲಿ ರುದ್ರಾಕ್ಷಿ ಮಾಲೆ ಧರಿಸುವುದು ಚಹರೆಯಾಗಿರುತ್ತದೆ. ನಮ್ಮ ಆಚಾರ ಬ್ರಾಹ್ಮಣರಂತೆ ಇದ್ದರೂ ನಾವು ಬ್ರಾಹ್ಮಣರಲ್ಲ, ಶಿವನ ಪೂಜೆ ಮಾಡುವುದಿಂದ ನಾವು ಲಿಂಗಾಯತರಲ್ಲ. ಶಿವಾರ್ಚಕರು ತೀರಾ ಹಿಂದುಳಿದಿದ್ದು, ಆರ್ಥಿಕವಾಗಿ ಸಬಲರಾಗಿಲ್ಲ. ಹೀಗಾಗಿ ಸರ್ಕಾರದಿಂದ ಹೆಚ್ಚಿನ ಮಾನ್ಯತೆ ಸಿಗಬೇಕಾಗಿದೆ. ಪ್ರವರ್ಗ 3 (ಬಿ)ಯಲ್ಲಿ ಅವಕಾಶ ಸಿಗಬೇಕೆಂಬುದು ನಮ್ಮ ಆಗ್ರಹ ಎಂದು ಎಸ್.ಕುಮಾರಸ್ವಾಮಿ ವಿವರಿಸಿದ್ದಾರೆ.