ನ್ಯೂಸ್

ರೋಡ್ ರೇಜ್ ನಡೆದರೆ ೧೧೨ ಗೆ ಕರೆ ಮಾಡಿ

ಬೆಂಗಳೂರು: ರಸ್ತೆಗಳಲ್ಲಿ ಅತಿರೇಕದ ಜಗಳ (ರೋಡ್ ರೇಜ್) ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ರೋಡ್ ರೇಜ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ಗಂಭೀರವಾಗಿ ಪರಿಣಿಸಿರುವ ನಗರ ಪೊಲೀಸ್ ಆಯುಕ್ತರು ಈ ರೀತಿಯ ಘಟನೆಗಳು ಏನಾದರೂ ನಡೆದರೆ ಸಾರ್ವಜನಿಕರು ಕೂಡಲೇ ಪೊಲೀಸ್ ಸಹಾಯವಾಣಿಯಾದ ನಮ್ಮ ೧೧೨ ಗೆ ಕರೆ ಮಾಡಿ ಮಾಹಿತಿ ನೀಡಿ, ಘಟನಾ ಸ್ಥಳಕ್ಕೆ ಕೆಲವೇ ನಿಮಿಷಗಳಲ್ಲಿ ನಮ್ಮ ಪೊಲೀಸ್ ಸಿಬ್ಬಂದಿ ಧಾವಿಸಿ ಬಂದು ಕ್ರಮ ಜರುಗಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ನಗರದ ರಸ್ತೆಗಳಲ್ಲಿ ಜಗಳವಾಡುವುದು ಅಪಾಯಕಾರಿಯಾದ ವರ್ತನೆ ಮಾತ್ರವಲ್ಲದೇ ಅದೊಂದು ಕ್ರಿಮಿನಲ್ ಅಪರಾಧವಾಗಿದೆ. ಅದರಲ್ಲಿ ಭಾಗಿಯಾದರೆ ಕಠಿಣ ಕಾನೂನು ಕ್ರಮ ನಿಶ್ಚಿತ. ಇಂತಹ ಪರಿಸ್ಥಿತಿಯಲ್ಲಿ ನೆರವು ಪಡೆಯಲು ನಮ್ಮ ೧೧೨ಗೆ ಕರೆ ಮಾಡಿ ಮಾಹಿತಿ ನೀಡಿ ಎಂದು ಮನವಿ ಮಾಡಿದ್ದಾರೆ.

ಬೆಂಗಳೂರಿನ ರಸ್ತೆಗಳಲ್ಲಿ ಅತಿರೇಕದ ಜಗಳಗಳಿಗಿಲ್ಲ ಅವಕಾಶ. ನಿಮ್ಮ ಆಕ್ರೋಶ ಬದಿಗೊತ್ತಿ, ತಾಳ್ಮೆಯನ್ನು ತಂದುಕೊಳ್ಳಿ. ರಸ್ತೆ ಜಗಳ ಅಪಾಯಕಾರಿಯಷ್ಟೇ ಅಲ್ಲ, ಕ್ರಿಮಿನಲ್ ಅಪರಾಧ ಕೂಡ ಹೌದು. ಅದರಲ್ಲಿ ಭಾಗಿಯಾದರೆ ಕಾನೂನು ಕ್ರಮ ನಿಶ್ಚಿತ. ಇಂತಹ ಪರಿಸ್ಥಿತಿಯಲ್ಲಿ ನೆರವು ಪಡೆಯಲು ನಮ್ಮ ೧೧೨ಗೆ ಕರೆ ಮಾಡಿ.
ಬಿ.ದಯಾನಂದ್, ನಗರ ಪೊಲೀಸ್ ಆಯುಕ್ತ