ಕಿತ್ತು ತಿನ್ನುವ ಬಡತನದಲ್ಲಿ ಜನಿಸಿದ ಅವರಿಗೆ ತನ್ನಂತೆ ಯಾರೂ ಸಂಕಷ್ಟದ ಬಾಲ್ಯ ಕಳೆಯಬಾರದೆಂಬ ಬಯಕೆ. ಶಿಕ್ಷಕಿಯಾದ ಅವರಿಗೆ ಬರುವ ಸಂಬಳದಲ್ಲಿ ಬಡ ವಿದ್ಯಾರ್ಥಿಗಳಿಗೆ ನೆರವಾಗಬೇಕೆಂಬ ತುಡಿತ. ಪ್ರತಿಫಲಾಪೇಕ್ಷೆ ಇಲ್ಲದೆ 350ಕ್ಕೂ ಹೆಚ್ಚು ಮಕ್ಕಳಿಗೆ ಮನೆಪಾಠದ ಮೂಲಕ ಮನೆಮಾತಾಗಿರುವವರು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಮಲೆಕುಂಬಳೂರಿನ ‘ಎಸ್. ಷಹಜಾನ್’. ಇವರ ನಿಸ್ವಾರ್ಥ ಸೇವೆಗೆ ‘ಕ್ಯಾಡ್ಬರಿ ಡೈರಿ ಮಿಲ್ಕ್’ ಧನ್ಯವಾದ ಸಲ್ಲಿಸುತ್ತದೆ.
ತರಗತಿಯಲ್ಲಿ ಪಾಠ ಮಾಡಿ ಸೈ ಎನಿಸಿಕೊಳ್ಳುವ ಜತೆಗೆ ಸಮಾಜಮುಖಿ ಕೆಲಸಗಳ ಮೂಲಕ ಆದರ್ಶವಾಗಿದ್ದಾರೆ ಹೊನ್ನಾಳಿ ತಾಲೂಕಿನ ಕೋಣನತಲೆ ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕಿ ಎಸ್. ಷಹಜಾನ್.
2013ರಲ್ಲಿ ಕೊಳೆಗೇರಿಯ ಒಂದು ಮಗುವಿಗೆ ಮನೆಯಲ್ಲೇ ಉಚಿತ ಟ್ಯೂಷನ್ ಮಾಡುವ ಮೂಲಕ ಸಮಾಜಸೇವೆ ಆರಂಭಿಸಿದ ಅವರು, ಇದುವರೆಗೆ ಒಂದರಿಂದ ಏಳನೇ ತರಗತಿವರೆಗಿನ 350 ಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿಫಲಾಪೇಕ್ಷೆ ಇಲ್ಲದೇ ಮನೆಪಾಠ ಮಾಡುತ್ತ ಬಂದಿದ್ದಾರೆ. ಶಾಲಾ ವಾರ್ಷಿಕೋತ್ಸವ ಮಾದರಿಯಲ್ಲಿ ಮನೆ ಪಾಠದ ಮಕ್ಕಳಿಗೆ ವಾರ್ಷಿಕೋತ್ಸವ ಮಾಡುತ್ತಾರೆ. ಪ್ರತಿ ವರ್ಷ ವಿದ್ಯಾರ್ಥಿಗಳನ್ನು ಹೊರ ಸಂಚಾರಕ್ಕೆ ಕರೆದೊಯ್ಯುವ ಅವರು, ಆ ಖರ್ಚು-ವೆಚ್ಚಗಳನ್ನೆಲ್ಲ ತಾವೇ ನಿಭಾಯಿಸುತ್ತಾರೆ. ಜತೆಗೆ, ಪಟ್ಟಣದ ಪೇಟೆ ಸರ್ಕಾರಿ ಶಾಲೆಯ 67 ಮಕ್ಕಳಿಗೆ ಸಮವಸ್ತ್ರಗಳನ್ನು ನೀಡುತ್ತಿದ್ದಾರೆ.
ಗ್ರಾಮಾಂತರ ಪ್ರದೇಶಗಳ ಅನೇಕ ಕುಟುಂಬಗಳು ಉದ್ಯೋಗ ಅರಸಿ ವಿವಿಧ ಜಿಲ್ಲೆಗಳಿಗೆ ಗುಳೆ ಹೋಗುತ್ತವೆ. ಆಗ ಅವರ ಮಕ್ಕಳ ಶಿಕ್ಷಣ ಮೊಟಕುಗೊಳ್ಳುತ್ತದೆ. ಈ ಸಮಸ್ಯೆಯ ಅರಿವಿದ್ದ ಷಹಜಾನ್, ಅಂತಹ ಮಕ್ಕಳಿಗೆ ಆಸರೆಯಾಗಿದ್ದಾರೆ. ತಾಲೂಕಿನ ಹನುಮಸಾಗರ ತಾಂಡಾದ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ವೇಳೆ ಅಲ್ಲಿನ ಜನರು ಕೆಲಸಕ್ಕಾಗಿ ವಲಸೆ ಹೋದಾಗ ಅವರ ಮಕ್ಕಳನ್ನು ಮನೆಯಲ್ಲಿಯೇ ಇರಿಸಿಕೊಂಡು, ಊಟ, ವಸತಿ, ವಿದ್ಯಾಭ್ಯಾಸಕ್ಕೆ ಬೇಕಾದ ಪರಿಕರಗಳನ್ನು ಕೊಡಿಸಿದ್ದಾರೆ.
ಈ ರೀತಿಯಾಗಿ 4 ರಿಂದ 10 ನೇ ತರಗತಿಯವರೆಗಿನ ಸುಮಾರು 30 ಮಕ್ಕಳು ತಮ್ಮ ಕೈಯಲ್ಲಿ ಬೆಳೆದಿವೆ ಎನ್ನುತ್ತಾರೆ ಷಹಜಾನ್. ‘ಹನುಮಸಾಗರ ತಾಂಡಾ ಶಾಲೆಗೆ ಬರುತ್ತಿದ್ದ ಮಕ್ಕಳಿಗೆ ಸ್ವಚ್ಛತೆಯ ಅರಿವಿರಲಿಲ್ಲ. ಅಂಥ ವಿದ್ಯಾರ್ಥಿಗಳಿಗೆ ಶಾಲೆಯಲ್ಲೇ ಸ್ನಾನ ಮಾಡಿಸಿ, ತಲೆ ಬಾಚಿ, ಬಟ್ಟೆ ತೊಳೆಯುವ ಕೆಲಸವನ್ನೂ ಮಾಡಿರುವೆ’ ಎಂದು ಹೇಳುತ್ತಾರೆ. ಇಂಥ ಸಮಾಜಮುಖಿ ಕಾರ್ಯಗಳಿಂದಾಗಿಯೇ ಶಿಕ್ಷಕಿ ಎಂದು ಕರೆಸಿಕೊಳ್ಳುವುದಕ್ಕಿಂತ ಜನರು ಅವರನ್ನು ಅಭಿಮಾನದಿಂದ ‘ಮಾತಾಜಿ’ ಎಂದು ಕರೆಯುತ್ತಾರೆ.
ರಾಜ್ಯದಲ್ಲಿ ಕರೊನಾ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ಕೊಡಿಸಿ ನೆರವಾಗಿದ್ದಾರೆ. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ವೇಳೆ ಕರೊನಾ ಸೋಂಕು ಹರಡಬಾರದೆಂದು 3 ಸಾವಿರ ಮಾಸ್ಕ್ ತರಿಸಿ ವಿತರಿಸಿದ್ದಲ್ಲದೆ ಕುಟುಂಬದ ಸದಸ್ಯರೆಲ್ಲ ಕುಳಿತು 2 ಸಾವಿರ ಮಾಸ್ಕ್ಗಳನ್ನು ಹೊಲಿದು ವಿದ್ಯಾರ್ಥಿಗಳಿಗೆ ವಿತರಿಸಿದ್ದಾರೆ.
ಷಹಜಾನ್ ಸಮಾಜ ಸೇವೆಗೆ ಇಡೀ ಕುಟುಂಬವೇ ಸಾಥ್ ನೀಡಿದೆ. ಶಿಕ್ಷಕರಾಗಿರುವ ಅವರ ಪತಿ ಷರೀಫ್ ಎಫ್. ಬಿಲ್ಲಳಿ, ಮಕ್ಕಳಾದ ಶಮಾ ಹಾಗೂ ಸೀಮಾ ಅವರಲ್ಲೂ ಸಮಾಜಸೇವೆ ಸಹಜವಾಗಿ ಬಂದಿದೆ. ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಪ್ರತಿನಿಧಿಯಾಗಿ ಸ್ಕೌಟ್ ವಿದ್ಯಾರ್ಥಿಗಳಿಗೆ ಪ್ರೇರಕರಾಗಿದ್ದಾರೆ. ಸಂಸ್ಥೆಯನ್ನು ಸೇರಬಯಸುವ ಮಕ್ಕಳಿಗೆ ತಾವೇ ಸಮವಸ್ತ್ರ ಹಾಗೂ ಶುಲ್ಕ ನೀಡಿ ತರಬೇತಿ ಕಾರ್ಯಕ್ರಮಗಳಿಗೆ ಕಳುಹಿಸಿಕೊಡುವುದಲ್ಲದೇ, ತಾಲೂಕಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಪ್ರತಿವರ್ಷ 10 ಸಾವಿರ ರೂ. ನೀಡುತ್ತ ಬಂದಿದ್ದಾರೆ.
ಷಹಜಾನ್ ಅವರ ಸೇವೆಯನ್ನು ಕೆಲವು ಸಂಘ ಸಂಸ್ಥೆಗಳು ಗುರುತಿಸಿ ಅವರನ್ನು ಗೌರವಿಸಿವೆ. ಮಾನವ ಸದ್ಭಾವನ ಪ್ರಶಸ್ತಿ, ಸಿಂಧೂರ ತಿಲಕ ಪ್ರಶಸ್ತಿ, ಆದರ್ಶ ದಂಪತಿ ಪ್ರಶಸ್ತಿ, ಸಾವಿತ್ರಿಬಾ ಪುಲೆ ಪ್ರಶಸ್ತಿ, ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಅವರಿಗೆ, ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಸಲ್ಲಿಸಿದ ಸೇವೆಗಾಗಿ 2014 ರಲ್ಲಿ ರಾಜ್ಯಮಟ್ಟದ ಪ್ರಶಸ್ತಿಯನ್ನು ರಾಜ್ಯಪಾಲರು ನೀಡಿದ್ದಾರೆ.