ನ್ಯೂಸ್

ಪಂಚರಾಜ್ಯ ಚುನಾವಣೆ ಬಳಿಕ ಸಂಪುಟ ವಿಸ್ತರಣೆ; ಪುನಾರಚನೆಗೆ ಕೊಕ್, ಆಕಾಂಕ್ಷಿಗಳಿಗೆ ಶಾಕ್..

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ತಯಾರಿಗಾಗಿ ಸಚಿವ ಸಂಪುಟ ಪುನಾರಚನೆಯಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳಿಗೆ ಬಿಜೆಪಿ ವರಿಷ್ಠರು ಶಾಕ್ ನೀಡಿದ್ದಾರೆ. ಪಂಚರಾಜ್ಯಗಳ ಚುನಾವಣೆ, ರಾಜ್ಯದ ಬಜೆಟ್ ಅಧಿವೇಶನದ ನಂತರ, ಖಾಲಿಯಿರುವ ನಾಲ್ಕರಲ್ಲಿ ಮೂರು ಸ್ಥಾನಗಳನ್ನು ಭರ್ತಿ ಮಾಡುವ ಮೂಲಕ ಸಂಪುಟ ವಿಸ್ತರಣೆಗಷ್ಟೇ ಆದ್ಯತೆ ಎಂಬ ಸುಳಿವು ಹೊರಹಾಕಿದ್ದಾರೆ.

ಒಂದು ಸ್ಥಾನ ಖಾಲಿ ಉಳಿಸಿಕೊಳ್ಳುವುದು ರಾಜಕೀಯ ತಂತ್ರಗಾರಿಕೆಯಾಗಿದೆ. ಭರ್ತಿ ಮಾಡಲು ಉದ್ದೇಶಿತ ಮೂರು ಸ್ಥಾನಗಳ ಪೈಕಿ ಒಂದಂತೂ ರಮೇಶ್ ಜಾರಕಿಹೊಳಿಗೆ ಪಕ್ಕಾ ಆಗಲಿದೆ. ಆದರೆ ಅದಕ್ಕೂ ಮೊದಲು ನ್ಯಾಯಾಲಯ ಪೂರ್ಣ ಪ್ರಮಾಣದಲ್ಲಿ ಕ್ಲೀನ್​ಚಿಟ್ ನೀಡಬೇಕು. ಏಕೆಂದರೆ ಈಗ ಕೇವಲ ಎಸ್​ಐಟಿ ಮುಚ್ಚಿದ ಲಕೋಟೆಯಲ್ಲಿ ವರದಿ ನೀಡಿದೆ. ಎರಡು ಡಜನ್​ಗೂ ಹೆಚ್ಚು ಆಕಾಂಕ್ಷಿಗಳಿರುವ ಮಿಕ್ಕೆರಡು ಸ್ಥಾನಗಳಿಗೆ ಪೈಪೋಟಿ ಏರ್ಪಡಲಿದ್ದು, ವರಿಷ್ಠರ ತೀರ್ಮಾನವೇ ಅಂತಿಮವಾಗುವುದು ನಿಚ್ಚಳ.

ಆಕಾಂಕ್ಷಿಗಳಿಗೆ ನಿರಾಸೆ: ಸಚಿವ ಸಂಪುಟ ಪುನಾರಚನೆ ಇಲ್ಲ ವಿಸ್ತರಣೆಗೆ ಸೀಮಿತ ಎಂದು ಅಮಿತ್ ಷಾ ಸೂಚ್ಯವಾಗಿ ತಿಳಿಸಿ, ವರಿಷ್ಠರ ಚಿಂತನೆ ಏನೆಂಬುದನ್ನು ಸ್ಪಷ್ಟಪಡಿಸಿದ್ದಾರೆ. ಈ ಕಾರಣಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಸಿಎಂ ಬೊಮ್ಮಾಯಿ ಭೇಟಿಯಾಗದೆ ದೆಹಲಿಯಾತ್ರೆ ಮುಗಿಸಿದ್ದಾರೆ. ಹಾಲಿ ಸಚಿವರ ಕಾರ್ಯಕ್ಷಮತೆ ಮೌಲ್ಯಮಾಪನ, ಹಲವು ಬದಲಾವಣೆ, ಚುನಾವಣಾ ವರ್ಷದ ಬಜೆಟ್ ರೀತಿ ಚುನಾವಣೆ ಸಂಪುಟ ರಚನೆಯಾಗಲಿದೆ ಎಂದು ಆಸೆಯಿಟ್ಟಕೊಂಡವರು ನಿರಾಸೆ ಮಡುವಿಗೆ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೂ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಪಕ್ಷಕ್ಕೆ ಬಲ ತುಂಬಿದರೆ, ರಾಜ್ಯದ ವಿಷಯದಲ್ಲಿ ವರಿಷ್ಠರ ಕಾರ್ಯತಂತ್ರ ಬದಲಾಗಬಹುದು ಎಂಬ ಸಣ್ಣ ಆಸೆಯನ್ನೂ ಕೆಲವರು ಇಟ್ಟುಕೊಂಡಿದ್ದಾರೆ.

ಹೊಸದಾಗಿ ಸಚಿವರಾದವರಿಗೆ ಕನಿಷ್ಠ ಒಂದು ವರ್ಷ ಕಾಲಾವಕಾಶ ಸಿಕ್ಕರೆ, ಸಾಮರ್ಥ್ಯ ಸಾಬೀತು ಹಾಗೂ ಉದ್ದೇಶ ಸಫಲವಾಗುತ್ತದೆ ಎಂಬ ಅಭಿಪ್ರಾಯ ಉಳ್ಳವರ ಲೆಕ್ಕಾಚಾರವನ್ನು ವರಿಷ್ಠರು ಸದ್ಯಕ್ಕಂತೂ ತಲೆಕೆಳಗು ಮಾಡಿದ್ದಾರೆ. ಬಜೆಟ್ ಅಧಿವೇಶನದ ಸನಿಹದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಲು ಬಯಸುವುದಿಲ್ಲ. ಖಾಲಿ ಸ್ಥಾನ ಭರ್ತಿ ಜತೆಗೆ ನಿಗಮ-ಮಂಡಳಿಗಳಲ್ಲಿ ಅವಕಾಶ ಕೊಟ್ಟು ಸಂಭಾವ್ಯ ಅಸಮಾಧಾನ ಸರಿಪಡಿಸುವುದು ವರಿಷ್ಠರ ಆಲೋಚನೆಯಾಗಿದ್ದೀತು ಎಂದು ಮೂಲಗಳು ರ್ತಸಿವೆ.

ಸ್ವಯಂಪ್ರೇರಿತ ಪ್ರಸ್ತಾಪ: ಸಿಎಂ ಬಸವರಾಜ ಬೊಮ್ಮಾಯಿ ಭೇಟಿಯಾಗಿದ್ದ ವೇಳೆ ಅಮಿತ್ ಷಾ ಸ್ವಯಂಪ್ರೇರಿತವಾಗಿ ಈ ವಿಷಯ ಪ್ರಸ್ತಾಪಿಸಿ, ಪಂಚರಾಜ್ಯಗಳ ಚುನಾವಣೆ ನಂತರ ಕರ್ನಾಟಕದ ಬೆಳವಣಿಗೆಗಳ ಬಗ್ಗೆ ಚರ್ಚೆ ಮಾಡೋಣ ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ. ಬಜೆಟ್ ಅಧಿವೇಶನವನ್ನು ಸುಸೂತ್ರವಾಗಿ ನಿರ್ವಹಿಸಿ, ಸರ್ಕಾರ ಹಾಗೂ ಪಕ್ಷಕ್ಕೆ ಒಳ್ಳೆಯ ಹೆಸರು ತರುವಂತಹ ಕಾರ್ಯಕ್ರಮ ರೂಪಿಸಿ ಎಂಬ ಸಲಹೆ ನೀಡಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಬಗ್ಗೆ ಹಾದಿಬೀದೀಲಿ ಚರ್ಚೆ ಬೇಡ. ಅಲ್ಲದೆ, ಈ ಅಜೆಂಡಾದೊಂದಿಗೆ ಯಾರೂ ದೆಹಲಿಗೆ ಬರಬಾರದು. ಯಾರ ಭೇಟಿಗೂ ಅವಕಾಶ ಸಿಗುವುದಿಲ್ಲ ಎಂಬ ಸ್ಪಷ್ಟ ಸೂಚನೆ ನೀಡಿದ್ದಾರೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರಾಚನೆ ವಿಷಯ ಚರ್ಚೆಯಾಗಬೇಕು. ಇದು ಬೀದಿಯಲ್ಲಿ ರ್ಚಚಿಸುವುದಲ್ಲ, ಇಷ್ಟವೂ ಇಲ್ಲವೆಂದು ಈಗಾಗಲೇ ಹೇಳಿರುವೆ. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ