ನ್ಯೂಸ್

ಯುಗಾದಿ ಬಳಿಕ ಸಂಪುಟ ವಿಸ್ತರಣೆ?: ಬೊಮ್ಮಾಯಿ, ಪ್ರಲ್ಹಾದ ಜೋಶಿ ಹೇಳಿಕೆ ಪುಷ್ಠಿ

ಬೆಂಗಳೂರು: ಹಿಂದು ಪಂಚಾಂಗದ ಪ್ರಕಾರ ಯುಗಾದಿಯಿಂದ ಹೊಸ ವರ್ಷ. ಇದೇ ನೆಲೆಯಲ್ಲಿ ರಾಜ್ಯ ಸಚಿವ ಸಂಪುಟಕ್ಕೆ ಪೂರ್ಣ ಬಲ, ಆಡಳಿತದಲ್ಲಿ ಹುರುಪು ಹಾಗೂ ಅಭಿವೃದ್ಧಿಗೆ ಹೊಸ ಆಯಾಮ ನೀಡುವ ನಿರೀಕ್ಷೆ ಗರಿಗೆದರಿದೆ. ಐದು ರಾಜ್ಯಗಳ ಫಲಿತಾಂಶವು ಉತ್ಸಾಹದ ಮಳೆ ಸುರಿಸಿದ್ದು, ರಾಜ್ಯದಲ್ಲಿ ಇದರ ಲಾಭ ಪಡೆದು ಒಳ್ಳೆಯ ‘ಫಸಲು’ ಪಡೆಯುವ ಲೆಕ್ಕಾಚಾರವಿದೆ. ಇದೇ ಕಾರಣಕ್ಕೆ ಸಚಿವ ಸಂಪುಟ ವಿಚಾರ ಮುನ್ನೆಲೆಗೆ ಬಂದಿದೆ. ಸಂಸತ್ ಅಧಿವೇಶನ ಮುಗಿದ ಬಳಿಕ ಸಚಿವ ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆ ಕುರಿತು ಚರ್ಚೆಯಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದು, ವರಿಷ್ಠರು ಬುಲಾವ್ ನೀಡಿದರೆ ದೆಹಲಿಗೆ ತೆರಳಲು ಸಿದ್ಧ ಎಂದು ಸಿಎಂ ಬೊಮ್ಮಾಯಿ ಹೇಳಿರುವುದು ವರಿಷ್ಠರ ಚಿಂತನಾಲಹರಿಗೆ ಪುಷ್ಠಿ ನೀಡಿದೆ.

ಕಸರತ್ತುಗಳು ಮುಗಿಯುವಷ್ಟರಲ್ಲಿ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಉಳಿಯಲಿದೆ. ಹೊಸ ಸಚಿವರು ಬಂದು ತಿಳಿದುಕೊಳ್ಳಲು ಅರ್ಧ ವರ್ಷ ಮುಗಿದುಹೋಗುತ್ತದೆ. ಅಲ್ಲದೆ, ಅನಗತ್ಯವಾಗಿ ವಿವಾದ, ಅಸಮಾಧಾನ ಭುಗಿಲೇಳುವುದನ್ನು ತಪ್ಪಿಸಲೆಂದು ಪುನಾರಚನೆ ಬದಲು ಖಾಲಿ ನಾಲ್ಕು ಸ್ಥಾನಗಳನ್ನು ತುಂಬಿ ವಿಸ್ತರಣೆಗೆ ಆದ್ಯತೆ ನೀಡಲಿದ್ದಾರೆ ಎಂಬ ತರ್ಕಗಳಿವೆ. ಉತ್ತರ ಭಾರತದ ಪ್ರಯೋಗಗಳನ್ನೆಲ್ಲ ರಾಜ್ಯದಲ್ಲಿ ಜಾರಿಗೊಳಿಸುವ ಲಕ್ಷಣಗಳಿಲ್ಲ. ರಾಜಕೀಯ ಕೆಮಿಸ್ಟ್ರಿ, ಸಾಮಾಜಿಕ ಸಮೀಕರಣ ವಿಭಿನ್ನವಾಗಿರುವುದು ಈ ತರ್ಕದ ಮೂಲ. ಹೊಸ ಯೋಜನೆ, ಕಾರ್ಯಕ್ರಮಗಳ ಘೋಷಣೆ, ಆಡಳಿತ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ತಂದರೂ ಕಣ್ಣಿಗೆ ಕಾಣುವಂತಹ ಚುರುಕುತನ ಕಾಣುತ್ತಿಲ್ಲ. ಜನಾಭಿಪ್ರಾಯ ರೂಪುಗೊಳಿಸುವ ನಿಟ್ಟಿನಲ್ಲಿ ಸಚಿವ-ಶಾಸಕರ ಪ್ರಯತ್ನಗಳು ನಿರೀಕ್ಷೆಯಂತಿಲ್ಲ ಎಂಬ ಮಾಹಿತಿಯನ್ನು ವರಿಷ್ಠರು ತರಿಸಿಕೊಂಡಿದ್ದು, ವೇಗ ಹೆಚ್ಚಿಸುವತ್ತ ಚಿತ್ತ ನೆಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಲೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಫಲ ಜನರಿಗೆ ಮುಟ್ಟಿಸುವುದು, ಸಂಘಟನಾ ಬಲ ಸಮರ್ಪಕ ಬಳಕೆ. ಈ ಮೂರು ಅಂಶಗಳ ಆಧಾರದಲ್ಲಿ ಪ್ರತಿಪಕ್ಷ ಸವಾಲು ಮತ್ತು ಆಡಳಿತ ವಿರೋಧಿ ಅಲೆ ಹಿಮ್ಮೆಟ್ಟಿಸುವ ಕಾರ್ಯತಂತ್ರ ಹೆಣೆಯಬೇಕು ಎನ್ನುವುದು ಪಕ್ಷದ ‘ಚಿಂತಕರು, ಹಿರಿತಲೆ’ಗಳ ಸಲಹೆಯಾಗಿದೆ ಎಂದು ಮೂಲಗಳು ಹೇಳಿವೆ.

ಬೊಮ್ಮಾಯಿ-ಪಿಯೂಷ್ ಮಾತುಕತೆ ರಹಸ್ಯ

ಕೇಂದ್ರ ಸಚಿವ ಪಿಯೂಷ್ ಗೋಯಲ್ ದಿಢೀರ್ ಆಗಮಿಸಿ, ಬಸವರಾಜ ಬೊಮ್ಮಾಯಿ ಜತೆ ಮಾತುಕತೆ ನಡೆಸಿದ್ದು, ಭಾನುವಾರವೇ ದೆಹಲಿಗೆ ಮರಳಿರುವುದು ಕುತೂಹಲ ಹುಟ್ಟುಹಾಕಿದೆ. ಆಡಳಿತ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಕೆಲವೊಂದು ಟಿಪ್ಸ್ ನೀಡುವ ಜತೆಗೆ ಈ ವಿಷಯದಲ್ಲಿ ವರಿಷ್ಠರ ‘ಸಲಹೆ-ಸೂಚನೆ’ಗಳನ್ನು ಬೊಮ್ಮಾಯಿಗೆ ವರ್ಗಾಯಿಸಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಗೆ ‘ಅಭಿವೃದ್ಧಿ’ ಪ್ರಧಾನ ಕಾರ್ಯಸೂಚಿಯನ್ನಾಗಿ ಬಳಸಲು ಬೇಕಾದ ಭೂಮಿಕೆ ತಯಾರಿ, ಜನಪ್ರಿಯತೆ ಗಳಿಕೆಗೆ ಮಾಗೋಪಾಯ, ವ್ಯೂಹಾತ್ಮಕ ತಂತ್ರಗಾರಿಕೆ ಬಗ್ಗೆ ಗಂಭೀರ ಚರ್ಚೆಯಾಯಿತು ಎನ್ನಲಾಗಿದೆ. ರಾಜ್ಯದ ಅಭಿವೃದ್ಧಿ ಯೋಜನೆಗಳ ಕುರಿತು ಮಾತುಕತೆಯಾಯಿತು ಎಂದು ಬೊಮ್ಮಾಯಿ ಮಾಧ್ಯಮಗಳಿಗೆ ಚುಟುಕು ಪ್ರತಿಕ್ರಿಯೆ ನೀಡಿದರು. ಬೆಂಗಳೂರಿನಲ್ಲಿ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಜನರ ಒಳಿತು, ಏಳಿಗೆಗೆ ಕೈಗೊಳ್ಳಬೇಕಾದ ಉಪಕ್ರಮ, ಚಾಲ್ತಿ ಅಭಿವೃದ್ಧಿ ಕುರಿತು ರ್ಚಚಿಸಿದೆ ಎಂದು ಗೋಯಲ್ ‘ಕೂ’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ವರಿಷ್ಠರ ‘ಸಂದೇಶ’ ತರಲಿರುವ ಉಸ್ತುವಾರಿ

ಹೊಸಪೇಟೆಯಲ್ಲಿ ಮಾ.30 ಮತ್ತು 31ರಂದು ನಡೆಯಲಿರುವ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದೇ ವೇಳೆ ರಾಜಕೀಯ ನಿರ್ಧಾರ, ಸಂಘಟನೆಗೆ ಬಲ ಮತ್ತು ಪಕ್ಷದ ವರ್ಚಸ್ಸು ಹೆಚ್ಚಿಸುವುದಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವರಿಷ್ಠರ ‘ಸಂದೇಶ’ವನ್ನು ಹೊತ್ತು ತರುವ ಸಾಧ್ಯತೆಗಳಿವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಳಗೊಂಡ ಪಕ್ಷದ ರಾಜ್ಯ ನಾಯಕರ ತಂಡಗಳ ಸಂಘಟನಾತ್ಮಕ ಪ್ರವಾಸ, ಜನರ ವಿಶ್ವಾಸಕ್ಕೆ ಗಳಿಸಿಕೊಳ್ಳಬೇಕಾದ ಕಾರ್ಯ ಯೋಜನೆ ಅಂತಿಮಗೊಳ್ಳಲಿದೆ ಎನ್ನುವುದನ್ನು ಮೂಲಗಳು ಖಚಿತಪಡಿಸಿವೆ.

ಒಬಿಸಿ ಜಾಗೃತಿ ಸಮಾವೇಶ

ರಾಯಚೂರು: ಹುಬ್ಬಳ್ಳಿಯಲ್ಲಿ ಏ.17ರಂದು ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಎಲ್ಲ ವಿಧಾನಸಭೆ ಕ್ಷೇತ್ರಗಳ ಕಾರ್ಯಕಾರಿಣಿ ಪದಾಧಿಕಾರಿಗಳು, ಜನಪ್ರತಿನಿಧಿಗಳು ಸೇರಿ 3 ಸಾವಿರ ಜನ ಪಾಲ್ಗೊ ಳ್ಳಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ಮಂತ್ರಾಲಯದಲ್ಲಿ ಭಾನುವಾರ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಜನರಿಗೆ ಕೇಂದ್ರ-ರಾಜ್ಯ ಸರ್ಕಾರ ನೀಡಿರುವ ಯೋಜನೆ, ಸೌಲಭ್ಯಗಳ ಕುರಿತು ತಿಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿಲು ರಾಜ್ಯ ಕಾರ್ಯ ಕಾರಿಣಿಯಲ್ಲಿ ತೀರ್ವನಿಸಲಾಯಿತು ಎಂದರು.

ಬಿಜೆಪಿ ಸಂಪರ್ಕಿತರ ಸೇರ್ಪಡೆ ಕಾದು ನೋಡಿ

ಬೆಂಗಳೂರು: ಭಾರತೀಯ ಜನತಾ ಪಕ್ಷದ ಜತೆಗೆ ಸಂಪರ್ಕದಲ್ಲಿ ಇರುವವರ ಸೇರ್ಪಡೆ ಕಾದು ನೋಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿಗೂಢವಾಗಿ ಹೇಳುವ ಮೂಲಕ ಬೇರೆ ಬೇರೆ ಪಕ್ಷದ ಮುಖಂಡರ ಸೇರ್ಪಡೆ ಕಾರ್ಯಕ್ರಮ ವರ್ಷಪೂರ್ತಿ ನಡೆಯಲಿದೆ ಎಂದು ಈ ಹಿಂದೆ ನೀಡಿದ್ದ ಹೇಳಿಕೆಗೆ ಪುಷ್ಟಿ ನೀಡಿದ್ದಾರೆ. ಆರ್​ಟಿ ನಗರದ ತಮ್ಮ ನಿವಾಸದ ಬಳಿ ಭಾನುವಾರ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ರಾಜ್ಯದ ಮೇಲೆ ಪರಿಣಾಮ ಬೀರಲಿದೆ. ಅಲ್ಲದೆ, ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಲಿದೆ ಎಂಬ ಅಭಿಪ್ರಾಯವನ್ನು ಈಗಾಗಲೆ ಹೇಳಿದ್ದೇನಲ್ಲ ಎಂದರು. ‘ಈ ಫಲಿತಾಂಶದ ಬಳಿಕ ಕೆಲವರು ಪಕ್ಷ ತೊರೆಯುವ ಆಲೋಚನೆ ಬದಲಾಯಿಸಿದ್ದಾರಲ್ಲ’ ಎಂಬ ಪ್ರಶ್ನೆಗೆ, ಯಾರೊಬ್ಬರೂ ಪಕ್ಷ ತೊರೆಯುವುದಿಲ್ಲ, ರೆಕ್ಕೆ ಪುಕ್ಕ, ಬಾಲ ಇಲ್ಲದ ವದಂತಿಗಳಗಷ್ಟೇ. ಮನಸ್ಸು ಬದಲಾಯಿಸುವ ಪ್ರಶ್ನೆಯೇ ಉದ್ಭವಿಸದು ಎಂದು ಉತ್ತರಿಸಿದರು.

ಅವಧಿಪೂರ್ವ ಚುನಾವಣೆ ಮಾಧ್ಯಮಗಳ ಸೃಷ್ಟಿ: ವಿಧಾನಸಭೆಗೆ ಅವಧಿಪೂರ್ವ ಚುನಾವಣೆ ಬಗ್ಗೆ ಪಕ್ಷದ ಯಾವುದೇ ಹಂತದಲ್ಲಿ ಚರ್ಚೆಯಾಗಿಲ್ಲ, ಅದೆಲ್ಲ ಊಹಾ ಪೋಹ. ಮಾಧ್ಯಮಗಳೇ ಹುಟ್ಟು ಹಾಕಿದ ಚರ್ಚೆಯೇ ಹೊರತು ನಮ್ಮ ಪಕ್ಷದೊಳಗೆ ಅಂತಹ ವಿಚಾರವೇ ಪ್ರಸ್ತಾಪವಾಗಿಲ್ಲ ಎಂದು ಬೊಮ್ಮಾಯಿ ಅಲ್ಲಗಳೆದರು. ಹೊಸಪೇಟೆಯಲ್ಲಿ ಮಾ.30 ಹಾಗೂ 31ರಂದು ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ರಾಜ್ಯ ಪ್ರವಾಸ ಸೇರಿ ಎಲ್ಲ ವಿಷಯಗಳ ಬಗ್ಗೆ ಚರ್ಚೆಯಾಗಿ ತೀರ್ವನವಾಗಲಿದೆ ಎಂದು ತಿಳಿಸಿದರು.