ಬೆಂಗಳೂರು: ಜಲಸಂಪನ್ಮೂಲ ಇಲಾಖೆಯಡಿ ಏತ ನೀರಾವರಿ ಯೋಜನೆಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯ ಕರಡು ನೀತಿ ಹಾಗೂ ಮಾರ್ಗಸೂಚಿಗಳಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಈ ಕರಡು ಅಧಿಸೂಚನೆಯಂತೆ ಏತ ನೀರಾವರಿ ಯೋಜನೆಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಖಾಸಗಿಯವರಿಗೆ ಗುತ್ತಿಗೆ ಕೊಡಲು ಸರ್ಕಾರ ನಿರ್ಧರಿಸಿದೆ.
ನಿರ್ವಹಣಾ ಸಮಸ್ಯೆಗಳು: ಸ್ಥಳೀಯ ಕಾರ್ಯಾಚರಣೆ ಮತ್ತು ನಿರ್ವಹಣಾ ಏಜೆನ್ಸಿಗಳಲ್ಲಿ ವೃತ್ತಿಪರತೆ ಕೊರತೆ, ಅನನುಭವಿ ಸಿಬ್ಬಂದಿ ಕಾರ್ಯಾಚರಣೆ, ಪ್ರಮುಖ ಸ್ಥಾವರ ಹಾಗೂ ಯಂತ್ರೋಪಕರಣಗಳ ನೈಜ ಸಮಯದ ಕಾರ್ಯಕ್ಷಮತೆಯ ಮಾಹಿತಿ ಕೊರತೆ, ಯಂತ್ರಗಳ ಕಾರ್ಯಕ್ಷಮತೆ ಮತ್ತು ವಸ್ತುಸ್ಥಿತಿಯ ನಿರಂತರ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ, ನಿರ್ವಹಣಾ ವೆಚ್ಚದಲ್ಲಿ ಗಮನಾರ್ಹವಾದ ಕಡಿತ, ಸೇವಾ ವಿತರಣೆಯಲ್ಲಿ ಗಮನಾರ್ಹ ಸುಧಾರಣೆ ಮತ್ತು ಏತ ನೀರಾವರಿ ಯೋಜನೆಗಳ ಸುಸ್ಥಿರ ಕಾರ್ಯಾಚರಣೆ ದೃಷ್ಟಿಯಲ್ಲಿಟ್ಟುಕೊಂಡು ಈ ಕರಡು ನೀತಿ ಮತ್ತು ಮಾರ್ಗಸೂಚಿಗಳನ್ನು ಸರ್ಕಾರ ಸಿದ್ಧಪಡಿಸಿದ್ದು, ಅದಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ.
ಸಮಸ್ಯೆ ನಿವಾರಣೆಗೆ ಗುತ್ತಿಗೆ ನಿರ್ಧಾರ: ಸಚಿವ ಸಂಪುಟ ಸಭೆ ಬಳಿಕ ಈ ಕುರಿತು ಮಾಹಿತಿ ನೀಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಏತ ನೀರಾವರಿ ಯೋಜನೆಗಳ ಕಾರ್ಯಕ್ಷಮತೆ ಸಮಸ್ಯೆಗಳನ್ನು ನಿವಾರಿಸುವ ದೃಷ್ಟಿಯಿಂದ ಸಾಮಾನ್ಯ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.
ನೀತಿಯ ಪ್ರಮುಖ ಉದ್ದೇಶ: ಅಚ್ಚುಕಟ್ಟು ಪ್ರದೇಶದಲ್ಲಿ ನಿಗದಿತ ಸ್ಥಳಗಳಲ್ಲಿ ಅಗತ್ಯವಾದ ಪ್ರಶರ್/ ಹೆಡ್ನೊಂದಿಗೆ ಬೆಳೆಗಳಿಗೆ ನೀರಿನ ಅವಶ್ಯಕತೆಯ ಅನುಗುಣವಾಗಿ ನೀರಾವರಿ ವೇಳಾಪಟ್ಟಿಯ ಪ್ರಕಾರ, ನೀರನ್ನೊದಗಿಸುವುದು ಮತ್ತು ಕೆರೆ ತುಂಬುವ ಅವಶ್ಯಕತೆಗಳನ್ನು ಸುಸ್ಥಿರ ಮಿತವ್ಯಯಕಾರಿ ಕಾರ್ಯಾಚರಣೆ ಮೂಲಕ ಪೂರೈಸುವುದು, ವಿಶ್ವಾಸಾರ್ಹ, ಪರಿಣಾಮಕಾರಿ ಮತ್ತು ಮಿತವ್ಯಯಕಾರಿ ಕಾರ್ಯಾಚರಣೆ ಮತ್ತು ನಿರ್ವಹಣೆ ಮತ್ತು ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸುವುದು ಈ ನೀತಿಯ ಉದ್ದೇಶವಾಗಿದೆ.