ನ್ಯೂಸ್

ತಡರಾತ್ರಿ ಮನೆಗೆ ಹಿಂತಿರುಗುತ್ತಿದ್ದ ಯುವತಿಯನ್ನು ರೇಪ್​ ಮಾಡಿದ ಕ್ಯಾಬ್​ ಡ್ರೈವರ್; ಮದ್ಯಪಾನವೇ ಮುಳುವಾಯ್ತಾ?

ಬೆಂಗಳೂರು: ತಡರಾತ್ರಿ ಗೆಳತಿಯ ಮನೆಯಿಂದ ವಾಪಸಾಗುತ್ತಿದ್ದ ಯುವತಿಯೊಬ್ಬಳ ಮೇಲೆ ಊಬರ್​​ ಕ್ಯಾಬ್​ ಡ್ರೈವರ್​ ಲೈಂಗಿಕ ಅತ್ಯಾಚಾರ ನಡೆಸಿರುವ ಹೇಯ ಕೃತ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಈ ಬಗ್ಗೆ ಸಂತ್ರಸ್ತ ಯುವತಿ ನೀಡಿರುವ ದೂರಿನ ಮೇರೆಗೆ ಪೊಲೀಸರು ಆಂಧ್ರ ಮೂಲದ ದೇವರಾಜ್​ ಎಂಬ ಚಾಲಕನನ್ನು ಬಂಧಿಸಿದ್ದಾರೆ.

ಉತ್ತರ ಭಾರತ ಮೂಲದ ಯುವತಿಯು ಸ್ನೇಹಿತರ ಜತೆ ಹೆಚ್.ಎಸ್.ಆರ್.ಲೇಔಟ್​​ಗೆ ಪಾರ್ಟಿಗಾಗಿ ತೆರಳಿದ್ದಳು. ಬೆಳಗಿನ ಜಾವ 3.30-4 ಗಂಟೆ ವೇಳೆಗೆ ಪಾರ್ಟಿ ಮುಗಿಸಿ ಪಾನಮತ್ತಳಾಗಿದ್ದ ಯುವತಿ ಮನೆಗೆ ಹೋಗಲು ಕ್ಯಾಬ್ ಬುಕ್ ಮಾಡಿದ್ದಳು. ಮದ್ಯದ ಪ್ರಭಾವದಿಂದಾಗಿ ಕಾರಿನ ಡೋರ್ ಓಪನ್ ಮಾಡಲು ಕಷ್ಟಪಟ್ಟಿದ್ದ ಆಕೆ, ಮನೆ ಬಳಿ ಬಂದಾಗ ಕ್ಯಾಬಿನಿಂದ ಇಳಿಯಲು ಆಗುತ್ತಿರಲಿಲ್ಲ. ಆಕೆಯ ಈ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡ ಕ್ಯಾಬ್​ ಚಾಲಕ ದೇವರಾಜ್​, ಯುವತಿಯನ್ನು ಕ್ಯಾಬ್​​​​ನಲ್ಲೇ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಆತ್ಯಾಚಾರ ಮಾಡಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಯುವತಿಯು ಜೀವನ್ ಭೀಮಾನಗರ ಠಾಣೆಯಲ್ಲಿ ಬೆಳಿಗ್ಗೆ 11 ಗಂಟೆ ವೇಳೆಗೆ ದೂರು ನೀಡಿದ್ದು, ಅತ್ಯಾಚಾರ ಪ್ರಕರಣ ದಾಖಲಿಸಲಾಯಿತು. ಕಾರಿನ ವಿವರಗಳನ್ನು ಪರಿಶೀಲಿಸಿದ ಪೊಲೀಸರು, ತಕ್ಷಣ ಮೂರು ತಂಡಗಳನ್ನು ರಚಿಸಿ ಆರೋಪಿ ಪತ್ತೆಗೆ ಕಾರ್ಯಪ್ರವೃತ್ತರಾದರು. ಆರೋಪಿ ದೇವರಾಜ್​ನನ್ನು ಬಂಧಿಸಿದ್ದು, ಪ್ರಕರಣದ ತನಿಖೆ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸದ್ಯ, ಬೌರಿಂಗ್ ಆಸ್ಪತ್ರೆಯಲ್ಲಿ ಯುವತಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಹೇಳಿದ್ದಾರೆ.