ಚಂಡೀಗಢ: ಇಬ್ಬರು ಮಹಿಳೆಯರನ್ನು ಹತ್ಯೆ ಮಾಡಿರುವುದಾಗಿ ಖಾಸಗಿ ಟಿವಿ ಕಾರ್ಯಕ್ರಮದಲ್ಲಿ ಹೇಳಿಕೊಂಡ ಕ್ಯಾಬ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಚಂಡೀಗಢದ ನ್ಯೂಸ್ ಚಾನೆಲ್ನ ಸ್ಟುಡಿಯೋದಲ್ಲಿ ನೇರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಣಿಂದರ್ ಸಿಂಗ್ (31)ನನ್ನು ಪೊಲೀಸರು ಬಂಧಿಸಿದ್ದಾರೆ.
ಟಿವಿಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದಾಗಲೇ ಪೊಲೀಸರು ಸ್ಟುಡಿಯೋಗೆ ತೆರಳಿ ಆರೋಪಿಯನ್ನು ಬಂಧಿಸಿದರು.
10 ವರ್ಷಗಳ ಅವಧಿಯಲ್ಲಿ ಆತ ಇಬ್ಬರು ಮಹಿಳೆಯರನ್ನು ಹತ್ಯೆ ಮಾಡಿರುವುದಾಗಿ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದ.
2019ರ ಡಿ.31ರಂದು ಚಂಡೀಗಢದ ಹೋಟೆಲ್ನಲ್ಲಿ ಲಿವ್ ಇನ್ ರಿಲೇಷನ್ಷಿಪ್ನಲ್ಲಿದ್ದ 27 ವರ್ಷದ ನರ್ಸ್ ಸರಬ್ಜಿತ್ ಕೌರ್ ಎಂಬ ಮಹಿಳೆಯನ್ನು ಆತ ಕೊಲೆ ಮಾಡಿದ್ದ. ಸರಬ್ಜಿತ್ ಕೌರ್, ನನ್ನ ಅತ್ತಿಗೆಯ ಸಹೋದರನ ಜತೆ ಅನೈತಿಕ ಸಂಬಂಧ ಹೊಂದಿದ್ದಳು. ಹೀಗಾಗಿ ನಾನು ಆಕೆಯನ್ನು ಕೊಲೆ ಮಾಡಿದೆ ಎಂದು ಸುದ್ದಿವಾಹಿನಿಗೆ ತಿಳಿಸಿದ್ದ.
2010ರಲ್ಲಿ ಕರ್ನಾಲ್ನಲ್ಲಿ ರೇಣು ಎಂಬ ಮಹಿಳೆಯನ್ನು ಕೊಲೆ ಮಾಡಿದೆ. ಈಕೆ ಕೂಡ ಉತ್ತರ ಪ್ರದೇಶದ ವ್ಯಕ್ತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು ಎಂದು ಟಿವಿಗೆ ಮಾಹಿತಿ ನೀಡಿದ್ದಾನೆ.
2010 ರಲ್ಲಿ ಮಹಿಳೆಯನ್ನು ಕೊಂದಿದ್ದಕ್ಕಾಗಿ ಹರಿಯಾಣ ಪೊಲೀಸರು ಆತನನ್ನು ಬಂಧಿಸಿದ್ದರು. ಕೋರ್ಟ್ನಲ್ಲಿ ಜಾಮೀನು ಪಡೆದು ಆತ ಹೊರ ಬಂದು ಮತ್ತೊಂದು ಕೊಲೆ ಎಸಗಿದ್ದಾನೆ. (ಏಜೆನ್ಸೀಸ್)