ನ್ಯೂಸ್

ಸಿಎಎ ಕಿಚ್ಚು ಯಾರಿಗೆ ಲಾಭ ಹೆಚ್ಚು?

ಬೆಂಗಳೂರು: ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕಾವು ಶುರುವಾಗಿ ಬರೋಬ್ಬರಿ ಒಂದು ತಿಂಗಳು ಉರುಳಿದೆ. 30 ದಿನಗಳ ಬಳಿಕವೂ ಚರ್ಚೆಯ ಬಿಸಿ ತಣ್ಣಗಾಗಿಲ್ಲ. ಈ ನಡುವೆ, ಎರಡು ಪ್ರಮುಖ ರಾಜಕೀಯ ಪಕ್ಷಗಳು ಈ ವಿಷಯ ಇಟ್ಟುಕೊಂಡು ಗೌಪ್ಯ ಕಾರ್ಯಸೂಚಿಯಡಿ ಸದ್ದಿಲ್ಲದೆ ತಂತಮ್ಮ ಗುರಿ ಸಾಧಿಸಿಕೊಳ್ಳುತ್ತಿವೆ.

ಬಿಜೆಪಿ ವಿಚಾರಕ್ಕೆ ಬಂದರೆ ಸಾಮಾನ್ಯವಾಗಿ ಚುನಾವಣೆ ಸಂದರ್ಭ ಮನೆ ಮನೆ ಅಭಿಯಾನ ನಡೆಸುವ ಪರಿಪಾಠವಿದೆ. ಆದರೀಗ ರಾಜ್ಯದ 30 ಲಕ್ಷ ಮನೆಗಳನ್ನು ಒಂದು ವಾರದ ಅವಧಿಯಲ್ಲೇ ತಲುಪಲು ನಾಯಕರು ಪ್ರಯತ್ನಿಸಿದ್ದಾರೆ. ಕಳೆದ ಮೂರು ದಿನದಲ್ಲಿ 2 ಲಕ್ಷ ಮನೆಗಳಲ್ಲಿ ಸಂಪರ್ಕ ನಡೆಸಿದ್ದು, ಉಳಿದ ಅವಧಿಯಲ್ಲಿ ಮನೆ ಮನೆ ಸಂಪರ್ಕವನ್ನು ತೀವ್ರಗೊಳಿಸಲು ಪಕ್ಷ ನಿರ್ಧರಿಸಿದೆ. ಈ ಮೂಲಕ ಸಂಘಟನೆಗೆ ಚಟುವಟಿಕೆ ನೀಡಿ ಕ್ರಿಯಾಶೀಲವಾಗಿಡುವುದು ಒಂದು ಕಾರ್ಯತಂತ್ರವಾದರೆ, 30 ಲಕ್ಷ ಮನೆಗಳನ್ನು ಸಿಎಎ ವಿಚಾರ ಇಟ್ಟುಕೊಂಡು ಸಂಪರ್ಕ ಬೆಳೆಸುವುದು ಇನ್ನೊಂದು ಗೌಪ್ಯ ಕಾರ್ಯಸೂಚಿ. ಮನವರಿಕೆ ನೆಪದಲ್ಲಿ ಪ್ರತಿ ಮನೆಯಲ್ಲೂ ಬಿಜೆಪಿ ಪರ ಸದಭಿಪ್ರಾಯ ಬೆಳೆಸಿದರೆ ಭವಿಷ್ಯದಲ್ಲಿ ಲಾಭವಾಗಬಹುದೆಂಬ ಆಲೋಚನೆ ಇಲ್ಲಿದೆ. ಈ ಹಿಂದೆ ತ್ರಿವಳಿ ತಲಾಕ್ ಕಾಯ್ದೆ ತಂದಾಗಲೂ ಬಿಜೆಪಿ ಅಭಿಯಾನ ನಡೆಸಿ ಗೊಂದಲಗಳನ್ನು ಪರಿಹಾರ ಮಾಡಿತ್ತು. ಈಗ ಸಿಎಎ ಬಗ್ಗೆ ಮನವರಿಕೆ ಮಾಡಿಕೊಡುವುದರಿಂದ ಬಿಜೆಪಿ ಮತ್ತು ಸಾಮಾನ್ಯ ಜನರ ನಡುವಿನ ಸಂಬಂಧ ಸುಧಾರಣೆಯಾಗುತ್ತದೆ. ಅಂತರ ಕಾಯ್ದುಕೊಳ್ಳುವವರು ಹತ್ತಿರವಾಗಬಹುದು, ಇದು ಈಗ ಸಾಧ್ಯವಾಗದಿದ್ದರೂ ಭವಿಷ್ಯದಲ್ಲಿ ಪಕ್ಷಕ್ಕೆ ಒಳಿತಾಗುತ್ತದೆ ಎಂಬುದು ಬಿಜೆಪಿ ಹಿರಿಯ ನಾಯಕರ ಅಭಿಪ್ರಾಯ. ಮುಂದೆ ಗ್ರಾಮ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆ ಚುನಾವಣೆ ಬರುತ್ತದೆ, ಆ ವೇಳೆ ಪಕ್ಷಕ್ಕಿಂತ ಅಭ್ಯರ್ಥಿ ಮುಖ್ಯಪಾತ್ರ ವಹಿಸುತ್ತಾರೆ. ಆಗ ಪಕ್ಷಕ್ಕೆ ಹೆಚ್ಚು ಅನುಕೂಲಕರವಾಗಬಹುದು, ಎಷ್ಟು ಮತ ಬದಲಾವಣೆ ಆದರೂ ಅದು ಬೋಸನ್ ಎಂದು ಕಮಲ ನಾಯಕರು ಲೆಕ್ಕ ಹಾಕಿದ್ದಾರೆ.

ಒಂದೆರಡು ಕಡೆ ಸಿಎಎ ಜಾಗೃತಿಗೆ ಅಸಹಕಾರ ತೋರಿರಬಹುದು, ಅದು ಪ್ರತಿಪಕ್ಷದ ತಂತ್ರವಷ್ಟೇ. ಉಳಿದೆಲ್ಲ ಕಡೆ ಉತ್ತಮ ಫೀಡ್​ಬ್ಯಾಕ್ ಬರುತ್ತಿದೆ. ಪ್ರತಿ ದಿನವೂ ಎಷ್ಟು ಮನೆ ಸಂಪರ್ಕ ಮಾಡಲಾಗಿದೆ, ಯಾವೆಲ್ಲ ನಾಯಕರು ಎಷ್ಟು ಪ್ರಯತ್ನ ಹಾಕಿದ್ದಾರೆಂದು ಪಕ್ಷ ವರದಿ ತರಿಸಿಕೊಂಡು ಅವಲೋಕಿಸುತ್ತಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದ್ದಾರೆ.

ಕಾಂಗ್ರೆಸ್ ವಿಚಾರಕ್ಕೆ ಬಂದರೆ, ಪೌರತ್ವ ಕಾಯ್ದೆ ವಿರುದ್ಧ ಪಕ್ಷದ ಕಡೆಯಿಂದ ಸಾಂಕೇತಿಕ ಹೋರಾಟ ನಡೆಸಲಾಗಿದೆ. ಇದಕ್ಕಿಂತ ಮುಖ್ಯವಾಗಿ ಇತರ ಸಮುದಾಯ, ಸಂಘಟನೆಗಳ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತಿದೆ. ಕೇಂದ್ರ ಸರ್ಕಾರದ ವಿರುದ್ಧ ಜನ ತಿರುಗಿಬಿದ್ದಾರೆಂಬ ಭಾವನೆ ಮೂಡಿಸುವ ಅನಿವಾರ್ಯತೆ ಕಾಂಗ್ರೆಸ್​ಗಿದೆ. ಪಕ್ಷವೇ ಹೋರಾಟದ ನೇತೃತ್ವ ತೆಗೆದುಕೊಂಡರೆ ರಾಜಕೀಯವಾಗಿ ಲಾಭಕ್ಕಿಂತ ನಷ್ಟ ಹೆಚ್ಚು. ಈ ಕಾರಣಕ್ಕೆ ಹೋರಾಟದ ರೂಪುರೇಷೆ, ಜಾಗೃತಿ ಸಭೆ ಆಯೋಜನೆಯಲ್ಲಿ ಬೆನ್ನೆಲುಬಾಗಿ ನಿಂತಿದೆ. ಬಹುತೇಕ ಕಡೆ ಕಾಂಗ್ರೆಸ್ ನಾಯಕರು ಭಾಷಣಕಾರರಾಗಿ ಕಾಣಿಸಿಕೊಂಡಿದ್ದಾರೆ. ಬೆಲೆ ಏರಿಕೆ, ಆರ್ಥಿಕ ಸ್ಥಿತಿಗತಿ ಬಗ್ಗೆ ಜನರಿಗೆ ಅಸಮಾಧಾನವಿದೆ. ಪೌರತ್ವ ಕಾಯ್ದೆ ಅವರನ್ನು ಇನ್ನಷ್ಟು ಸಿಟ್ಟು ತರಿಸಲು ಕಾರಣವಾಗಿದೆ. ಇದೆಲ್ಲವೂ ಕೇಂದ್ರ ಸರ್ಕಾರದ ವಿರುದ್ಧ ಅಲೆ ಸೃಷ್ಟಿಸಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ.

ಕಾನೂನಾತ್ಮಕವಾಗಿ, ವಿಧಾನಸಭೆಗಳಲ್ಲಿ ಕಾಂಗ್ರೆಸ್ ಹೋರಾಟ ಮುಂದುವರಿಸುತ್ತದೆ. ಜನರೇ ಬೀದಿಗೆ ಬಂದಿದ್ದಾರೆ, ಅವರಿಗೆ ಪಕ್ಷ ಬೆಂಬಲಿಸುತ್ತಿದೆ. | ನಟರಾಜ ಗೌಡ ಕೆಪಿಸಿಸಿ ವಕ್ತಾರ

ಶ್ರೀಕಾಂತ್ ಶೇಷಾದ್ರಿ