ಲಖನೌ: ಕಳೆದ ಡಿಸೆಂಬರ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿಯುಂಟು ಮಾಡಿ, ಹಿಂಸಾತ್ಮಕ ಪ್ರತಿಭಟನೆಯ ಆರೋಪ ಹೊತ್ತಿರುವ ವ್ಯಕ್ತಿಗಳ ಫೋಟೋ, ವಿಳಾಸ ಮತ್ತು ಹೆಸರಿರುವ ಬೃಹತ್ ಭಿತ್ತಿಫಲಕವನ್ನು ರಾಜಧಾನಿ ಲಖನೌದ ಹೃದಯ ಭಾಗದಲ್ಲಿ ಉತ್ತರ ಪ್ರದೇಶ ಸರ್ಕಾರ ಅಳವಡಿಸಿದೆ.
ಪ್ರತಿಭಟನಾ ವೇಳೆ ಹಾನಿಯುಂಟು ಮಾಡಿದ ಸಾರ್ವಜನಿಕ ಆಸ್ತಿಗೆ ಪರಿಹಾರವನ್ನು ನೀಡುವಂತೆ ಭಿತ್ತಿಫಲಕದಲ್ಲಿರುವ ಆರೋಪಿಗಳನ್ನು ಕೇಳಲಾಗಿದೆ. ಒಂದು ವೇಳೆ ಆರೋಪಿಗಳು ಶೀಘ್ರದಲ್ಲಿ ಪರಿಹಾರ ನೀಡದಿದ್ದರೆ, ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಭಿತ್ತಿಫಲಕದಲ್ಲಿ ಎಚ್ಚರಿಕೆಯ ಸಂದೇಶವನ್ನು ಬರೆಯಲಾಗಿದೆ.
ಈಗಾಗಲೇ ಯುಪಿ ಸರ್ಕಾರ ವೈಯಕ್ತಿಕವಾಗಿ ಆರೋಪಿಗಳಿಗೆ ಆಸ್ತಿ ಮುಟ್ಟುಗೋಲು ನೋಟಿಸ್ ನೀಡಿದ್ದರೂ, ವಿಳಾಸ ಮತ್ತು ಹೆಸರು ಇರುವ ಭಿತ್ತಿಫಲಕವನ್ನು ಸಾರ್ವಜನಿಕ ಪ್ರದೇಶದಲ್ಲಿ ಏಕೆ ಅಳವಡಿಸಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಬ್ಯಾನರ್ನಲ್ಲಿ ಕಾರ್ಯಕರ್ತ ಮತ್ತು ರಾಜಕಾರಣಿ ಸಾದಫ್ ಜಫಾರ್, ವಕೀಲ ಮೊಹಮ್ಮದ್ ಸೋಹೆಬ್, ರಂಗಕರ್ಮಿ ದೀಪಕ್ ಕಬೀರ್ ಮತ್ತು ಮಾಜಿ ಐಎಎಸ್ ಅಧಿಕಾರಿ ಎಸ್.ಆರ್. ದರಪುರಿ ಹೆಸರು ಮತ್ತು ಫೋಟೋವನ್ನು ಅಳವಡಿಸಲಾಗಿದೆ.
ಎಲ್ಲ ಆರೋಪಿಗಳು ಜಾಮೀನು ಪಡೆದು ಈಗಾಗಲೇ ಜೈಲಿನಿಂದ ಹೊರಬಂದಿದ್ದಾರೆ. ಅಲ್ಲದೆ, ಆಸ್ತಿ ಮುಟ್ಟುಗೋಲು ನೋಟಿಸ್ ನೀಡಿರುವ ಯುಪಿ ಸರ್ಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಸಾಕ್ಷ್ಯಾಧಾರ ಕೊರತೆಯಿಂದಲೇ ಅನೇಕರಿಗೆ ನ್ಯಾಯಾಲಯ ಜಾಮೀನು ನೀಡಿರುವುದು ಯುಪಿ ಸರ್ಕಾರಕ್ಕೆ ಒಂದು ರೀತಿಯಲ್ಲಿ ಮುಖಭಂಗವಾಗಿದೆ.
ಯುಪಿ ಸರ್ಕಾರದ ಮೂಲಗಳ ಪ್ರಕಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚನೆ ಮೇರೆಗೆ ಲಖನೌದಲ್ಲಿ ಭಿತ್ತಿಫಲಕ ಅಳವಡಿಸಲಾಗಿದೆ ಎಂದು ತಿಳಿದುಬಂದಿದೆ. ಡಿಸೆಂಬರ್ನಲ್ಲಿ ನಡೆದ ಹಿಂಸಾಚಾರ ಬೆನ್ನಲ್ಲೇ ಸೇಡು ತೀರಿಸಿಕೊಳ್ಳುವುದಾಗಿ ಹೇಳಿಕೆ ನೀಡಿ ಸಿಎಂ ಯೋಗಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ನಾನು ತುಂಬಾ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತೇನೆ. ಇದರ ಮೇಲೆ ನಾನೇ ನಿಗಾವಹಿಸುತ್ತೇನೆ. ಹಿಂಸಾಚಾರದಲ್ಲಿ ಭಾಗಿಯಾಗಿ ಆಸ್ತಿ ಹಾನಿಯುಂಟು ಮಾಡಿದವರ ಆಸ್ತಿಯನ್ನು ನಾವು ಮುಟ್ಟುಗೋಲು ಹಾಕಿಕೊಳ್ಳುತ್ತೇವೆ ಎಂದಿದ್ದರು. (ಏಜೆನ್ಸೀಸ್)