Minister M.B. Patil  
ನ್ಯೂಸ್

ತೋಟದಪ್ಪ ಧರ್ಮಸಂಸ್ಥೆಗೆ ಸಿಎ ನಿವೇಶನ: ಸಚಿವ ಎಂ.ಬಿ.ಪಾಟೀಲ ಭರವಸೆ - CA site for Thotadappa Trust

ಗುಬ್ಬಿ ತೋಟದಪ್ಪ ಧರ್ಮ ಸಂಸ್ಥೆ ವತಿಯಿಂದ ಬುಧವಾರ ನಗರದಲ್ಲಿ ಆಯೋಜಿಸಿದ್ದ ‘2026-27ನೇ ಸಾಲಿನ ಹೊಸ ವಿದ್ಯಾರ್ಥಿಗಳ ಪ್ರವೇಶ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೆಂಗಳೂರು: (CA site for Thotadappa Trust) ಗುಬ್ಬಿ ತೋಟದಪ್ಪ ಧರ್ಮಸಂಸ್ಥೆಯು ವಿದ್ಯಾರ್ಥಿಗಳಿಗಾಗಿ ಕೌಶಲಾಭಿವೃದ್ಧಿ, ಕೃತಕ ಬುದ್ಧಿಮತ್ತೆ (ಎಐ), ಮಾಹಿತಿ ತಂತ್ರಜ್ಞಾನ ಮತ್ತು ತಾಂತ್ರಿಕ ಹಾಗೂ ಉದ್ಯೋಗಾಧಾರಿತ ಕೌಶಲಗಳ ತರಬೇತಿಗೆ ಕೇಂದ್ರ ಸ್ಥಾಪಿಸಲು ನಾಗರಿಕ ಸೌಲಭ್ಯದ ನಿವೇಶನ ಮಂಜೂರು ಮಾಡುವುದಾಗಿ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಘೋಷಿಸಿದ್ದಾರೆ.

ಗುಬ್ಬಿ ತೋಟದಪ್ಪ ಧರ್ಮ ಸಂಸ್ಥೆ ವತಿಯಿಂದ ಬುಧವಾರ ನಗರದಲ್ಲಿ ಆಯೋಜಿಸಿದ್ದ ‘2026-27ನೇ ಸಾಲಿನ ಹೊಸ ವಿದ್ಯಾರ್ಥಿಗಳ ಪ್ರವೇಶ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗುಬ್ಬಿ ತೋಟದಪ್ಪನವರು ಮಕ್ಕಳಿಲ್ಲದಿದ್ದರೂ ಇಡೀ ಸಮಾಜವನ್ನೇ ತಮ್ಮ ಕುಟುಂಬವೆಂದು ಭಾವಿಸಿ, ತಮ್ಮ ಸಂಪತ್ತನ್ನು ಸಮಾಜಕ್ಕೆ ಅರ್ಪಿಸಿದರು. ಗುಬ್ಬಿ ತೋಟದಪ್ಪನವರ ಬದುಕು ಮತ್ತು ನಮ್ಮ ಪೂರ್ವಜರಾದ ಶಿರಸಂಗಿ ಲಿಂಗರಾಜರ ಬದುಕಿನಲ್ಲಿ ಹಲವು ಸಾಮ್ಯತೆಗಳಿವೆ. ಅವರುಗಳ ಕೊಡುಗೆ ಇಲ್ಲದಿದ್ದರೆ ಇಂದು ಸಮುದಾಯದ ಹಲವರಿಗೆ ಶಿಕ್ಷಣದ ಅವಕಾಶವೇ ಸಿಗುತ್ತಿರಲಿಲ್ಲ. ಸಮುದಾಯಕ್ಕಾಗಿ ಸೇವೆ ಸಲ್ಲಿಸಿದ ದಕ್ಷಿಣ ಕರ್ನಾಟಕದ ಮಹನೀಯರನ್ನು ಉತ್ತರ ಕರ್ನಾಟಕದ ಜನರಿಗೆ ಪರಿಚಯಿಸುವ, ಹಾಗೆಯೇ ಉತ್ತರ ಕರ್ನಾಟಕ ಮಹನೀಯರನ್ನು ದಕ್ಷಿಣ ಕರ್ನಾಟಕದ ಜನತೆಗೆ ಪರಿಚಯಿಸುವ ಕಾರ್ಯ ನಡೆಯಬೇಕಿದೆ ಎಂದರು.

ನಮ್ಮ ಸಮಾಜದ ಮಹನೀಯರು ಶಿಕ್ಷಣ, ಅನ್ನದಾಸೋಹ ಮತ್ತು ವಸತಿ ಸೌಲಭ್ಯಗಳ ಮೂಲಕ ಲಕ್ಷಾಂತರ ಜನರ ಬದುಕಿಗೆ ಬೆಳಕಾಗಿದ್ದಾರೆ. ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರು ಲಕ್ಷಾಂತರ ಮಕ್ಕಳಿಗೆ ಶಿಕ್ಷಣ, ಆಶ್ರಯ ಮತ್ತು ಅನ್ನ ನೀಡುವ ಮೂಲಕ ಮಾಡಿದ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿಯವರು ಸಾವಿರಾರು ಮಕ್ಕಳಿಗೆ ಶಿಕ್ಷಣ ಮತ್ತು ವಸತಿ ಸೌಲಭ್ಯ ಕಲ್ಪಿಸುತ್ತಿದ್ದಾರೆ. ಇಂತಹ ಮಠಮಾನ್ಯಗಳು ಮತ್ತು ಮಹನೀಯರ ಸೇವಾಕಾರ್ಯವನ್ನು ನಾವು ಮುಂದುವರಿಸಬೇಕು ಎಂದು ಸಚಿವರು ಮಾಹಿತಿ ನೀಡಿದರು.

ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ.ಎಲ್.ರೇವಣ್ಣಸಿದ್ದಯ್ಯ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಕೆ.ವಿ.ನಾಗರಾಜ ಮೂರ್ತಿ, ಮಾಜಿ ಉಪ ಮೇಯರ್ ಬಿ.ಎಸ್. ಪುಟ್ಟರಾಜು ಸೇರಿ ಮತ್ತಿತರರಿದ್ದರು.