ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಮಂಗಳೂರು ಶಾಖೆಯ ಸಹಯೋಗದಲ್ಲಿ ಸಿಎ ದಿನಾಚರಣೆ ಸಂಭ್ರಮದಿಂದ ಆಚರಿಸಲಾಯಿತು. 
ನ್ಯೂಸ್

ಐಸಿಎಐ ಮಂಗಳೂರು ಶಾಖೆಯಿಂದ ಸಿಎ ದಿನಾಚರಣೆ ಸಂಭ್ರಮ

ಮಂಗಳೂರು: ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಮಂಗಳೂರು ಶಾಖೆಯ ಸಹಯೋಗದಲ್ಲಿ ಸಿಎ ದಿನಾಚರಣೆ ಸಂಭ್ರಮದಿಂದ ಆಚರಿಸಲಾಯಿತು.
ಸಿಎ ಕಮಲ್ ಗರ್ಗ್ ಸಿಎ ಧ್ವಜವನ್ನು ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಆರ್ಥಿಕ ಶಿಸ್ತು ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳುವಲ್ಲಿ ಚಾರ್ಟರ್ಡ್ ಅಕೌಂಟೆಂಟ್ಸ್ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇವರು ವ್ಯವಹಾರಗಳ ಆರ್ಥಿಕ ಆರೋಗ್ಯದ ಕಾವಲುಗಾರರು. ಸಿಎ ಆಡಿಟ್‌ನಲ್ಲಿ ನಿರಂತರ ಗುಣಮಟ್ಟ ನಿಯಂತ್ರಣ ಅತ್ಯಗತ್ಯ. ಇದು ವ್ಯವಹಾರದ ನಿಖರತೆ, ವಿಶ್ವಾಸಾರ್ಹತೆ ಮತ್ತು ವೃತ್ತಿಪರ ಮಾನದಂಡಗಳನ್ನು ಎತ್ತಿಹಿಡಿಯಲು ಸಹಾಯ ಮಾಡುತ್ತದೆ. ಆಡಿಟಿಂಗ್‌ನಲ್ಲಿ ಸಣ್ಣ ಲೋಪವೂ ದೊಡ್ಡ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು. ಕಾರ್ಪೊರೇಟ್ ವರದಿಗಾರಿಕೆಯ ಪ್ರಮುಖ ಸೂಕ್ಷ್ಮತೆಯೆಂದರೆ, ಇದು ಕೇವಲ ಅಂಕಿ-ಅಂಶಗಳ ಪ್ರಸ್ತುತಿಯಲ್ಲ; ಬದಲಿಗೆ ಹೂಡಿಕೆದಾರರು, ಸರ್ಕಾರ ಮತ್ತು ಸಾರ್ವಜನಿಕರಲ್ಲಿ ನಂಬಿಕೆ ಮೂಡಿಸುವ ಸಾಧನ. ನಿಯಂತ್ರಕ ನಿಯಮಗಳ ಪಾಲನೆ ಮತ್ತು ಪಾರದರ್ಶಕ ವರದಿಗಾರಿಕೆಯು ಕಾರ್ಪೊರೇಟ್ ವಲಯದ ಸುಸ್ಥಿರ ಬೆಳವಣಿಗೆಗೆ ಮತ್ತು ಜಾಗತಿಕ ಮಟ್ಟದಲ್ಲಿ ದೇಶದ ಆರ್ಥಿಕತೆಯ ಮೌಲ್ಯವನ್ನು ಹೆಚ್ಚಿಸಲು ಬಲವಾದ ಬುನಾದಿಯಾಗಿದೆ ಎಂದರು.
ಸಿಎ ಡೇನಿಯಲ್ ಮಾರ್ಷ್ ಪೆರೇರಾ ಸ್ವಾಗತಿಸಿ ಮಾತನಾಡಿ, ದೇಶದ ಆರ್ಥಿಕತೆಯ ಗಟ್ಟಿತನ ಮತ್ತು ಸುಸ್ಥಿರ ಬೆಳವಣಿಗೆಯ ಹಿಂದೆ ಚಾರ್ಟರ್ಡ್ ಅಕೌಂಟೆಂಟ್‌ಗ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ. ವ್ಯವಹಾರಗಳಲ್ಲಿ ನೈತಿಕ ಹಣಕಾಸು ವರದಿಗಾರಿಕೆಯನ್ನು ಖಚಿತಪಡಿಸುವ ಮೂಲಕ ಇವರು ಹೂಡಿಕೆದಾರರಲ್ಲಿ ಮತ್ತು ಸಾರ್ವಜನಿಕರಲ್ಲಿ ನಂಬಿಕೆಯನ್ನು ಮೂಡಿಸುತ್ತಾರೆ. ಸಂಸ್ಥೆಗಳಲ್ಲಿ ಉತ್ತಮ ಆಡಳಿತ ಮತ್ತು ಸಂಪೂರ್ಣ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಮಾರ್ಗದರ್ಶನ ನೀಡುವ ಸಿಎಗಳು, ತೆರಿಗೆ ವಂಚನೆ ಮತ್ತು ಆರ್ಥಿಕ ಅಪರಾಧಗಳಿಗೆ ತಡೆ ಒಡ್ಡುತ್ತಾರೆ. ತಮ್ಮ ವೃತ್ತಿಪರ ನೈಪುಣ್ಯತೆಯ ಮೂಲಕ ಉದ್ಯಮಗಳು ಸರಿಯಾದ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುತ್ತಾರೆ. ಹೀಗೆ, ದೇಶದ ಸಂಪತ್ತಿನ ಸರಿಯಾದ ನಿರ್ವಹಣೆ, ಪಾರದರ್ಶಕತೆ ಮತ್ತು ಆರ್ಥಿಕ ಶಿಸ್ತನ್ನು ಕಾಪಾಡುವ ಮೂಲಕ ಚಾರ್ಟರ್ಡ್ ಅಕೌಂಟೆಂಟ್‌ಗಳು ರಾಷ್ಟ್ರದ ಆರ್ಥಿಕ ಬೆನ್ನೆಲುಬಾಗಿ ನಿಂತಿದ್ದಾರೆ ಎಂದರು.
ಕಾರ್ಪೊರೇಟ್ ಕಾಯ್ದೆಗಳ ಕುರಿತು ವಿಶೇಷ ವಿಚಾರಸಂಕಿರಣವನ್ನು ಆಯೋಜಿಸಲಾಗಿದ್ದು, ಸಿಎ ಅಲೋಕ್ ಗರ್ಗ್ ಅವರು, ಆಡಿಟ್‌ನಲ್ಲಿ ನಿರಂತರ ಗುಣಮಟ್ಟ ನಿಯಂತ್ರಣ ಮತ್ತು ಕಾರ್ಪೊರೇಟ್ ವರದಿಗಾರಿಕೆಯ ಪ್ರಮುಖ ಸೂಕ್ಷ್ಮತೆಗಳು ಎಂಬ ವಿಷಯದ ಕುರಿತು ಮಾತನಾಡಿದರು.
ಮಂಗಳೂರು ಶಾಖೆಯ ಕಾರ್ಯದರ್ಶಿ ಸಿಎ ಬಾಲಸುಬ್ರಹ್ಮಣ್ಯ ಎನ್., ಉಪಾಧ್ಯಕ್ಷೆ ಸಿಎ ಮಮತಾ ರಾವ್, ಕೋಶಾಧಿಕಾರಿ ಸಿಎ ನಿತಿನ್ ಬಾಲಿಗ, ಸಮಿತಿ ಸದಸ್ಯ ಸಿಎ ಬಿ. ಕೃಷ್ಣಾನಂದ ಪೈ ಮತ್ತು ನಿಕಟಪೂರ್ವ ಅಧ್ಯಕ್ಷ ಸಿಎ ಪ್ರಶಾಂತ್ ಪೈ ಉಪಸ್ಥಿತರಿದ್ದರು.
ಸಿಎ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸಿಎ ಗೌರವ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
-----------------
ಸಾಧಕ ವಿದ್ಯಾರ್ಥಿಗಳಿಗೆ ಗೌರವ
ಸಿಎ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಿಎ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತ ವಿತರಿಸಲಾಯಿತು. ಇದೇ ವೇಳೆ ಸಿಎ ಫೈನಲ್ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 28ನೇ ರ‌್ಯಾಂಕ ಪಡೆದ ದೀಪಕ್ ಹೆಗ್ಡೆ ಮತ್ತು 47ನೇ ರ‌್ಯಾಂಕ್ ಪಡೆದ ಆದಿತ್ಯ ಪೆರ್ಗಾಡೆ ಅವರನ್ನು ಸನ್ಮಾನಿಸಲಾಯಿತು. ಐಸಿಎಐ ಮಂಗಳೂರು ಶಾಖೆ ವತಿಯಿಂದ ಬೆಳ್ತಂಗಡಿಯ ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಿಸಲಾಯಿತು.
------------------