ನ್ಯೂಸ್

‘ಸಂಘ’ದ ಮುಕುಂದ್‌ಗೆ ಸಿ.ಟಿ.ರವಿ ಮುಲಾಕತ್ ಕುತೂಹಲ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕರ ಆಯ್ಕೆ ಬಗ್ಗೆ ಪಕ್ಷದ ಕಾರ್ಯಕರ್ತರು ಕಾತರದ ಕಣ್ಣು ನೆಟ್ಟಿದ್ದರೆ, ಮುಖಂಡರ ಮಧ್ಯೆ ಚರ್ಚೆಯ ಕಾವೇರಿದೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಸಿ.ಟಿ.ರವಿ ಹಠಾತ್ ಬಿಡುಗಡೆಯಾಗಿ ತರ್ಕಗಳ ಬಿಸಿ ಹೆಚ್ಚಿಸಿದ್ದಾರೆ.

ಈ ನಡುವೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹಸರಕಾರ್ಯವಾಹ ಸಿ.ಆರ್.ಮುಕುಂದ ಹಾಗೂ ಸಿ.ಟಿ.ರವಿ ಮುಲಾಕತ್ ಕುತೂಹಲ ಕೆರಳಿಸಿದೆ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿ ‘ಕೇಶವ ಕೃಪಾ’ಕ್ಕೆ ಭಾನುವಾರ ಬೆಳಗ್ಗೆ ಧಾವಿಸಿದ ಸಿ.ಟಿ.ರವಿ ಸುಮಾರು ಹೊತ್ತು ಮಾತುಕತೆ ನಡೆಸಿ, ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕೀ ಬಾತ್’ ಆಲಿಸಲು ಪಕ್ಷದ ಕಾರ್ಯಕರ್ತರೊಬ್ಬರ ಮನೆಗೆ ತೆರಳಿದ್ದಾರೆ.

ರಾಜ್ಯ ರಾಜಕೀಯ ವ್ಯವಹಾರ ನೋಡಿಕೊಳ್ಳುವ ಹೊಣೆ ಮುಕುಂದ ಅವರ ಹೆಗಲ ಮೇಲಿರುವ ಕಾರಣಕ್ಕೆ ಈ ಭೇಟಿ ಮಹತ್ವ ಪಡೆದುಕೊಂಡಿದೆ.

ಮುಖ್ಯಮಂತ್ರಿ ಬದಲಾವಣೆ, ಪಕ್ಷದ ರಾಜ್ಯ ಸಂಘಟನೆ ಪುನರ್ ರಚನೆ ಸಂದರ್ಭದಲ್ಲಿ ಮುಕುಂದ ನೀಡಿದ ಅಭಿಪ್ರಾಯಗಳಿಗೆ ವರಿಷ್ಠರು ವಿಶೇಷ ಮನ್ನಣೆ ನೀಡಿದ್ದಾರೆ.

ರಾಜ್ಯಕ್ಕೆ ಸಂಬಂಧಿಸಿದ ಯಾವುದೇ ರಾಜಕೀಯ ತೀರ್ಮಾನಗಳಿಗೆ ಮುನ್ನವೂ ಅಭಿಪ್ರಾಯ ಪಡೆಯುವ ಕ್ರಮವಿದೆ ಎಂದು ಪಕ್ಷದ ಮೂಲಗಳು ಹೇಳುತ್ತವೆ.

ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಒಕ್ಕಲಿಗ, ಲಿಂಗಾಯತ, ಹಿಂದುಳಿದ, ದಲಿತ ಸಮೀಕರಣ, ಆದ್ಯತೆಯ ಲೆಕ್ಕಾಚಾರಗಳಲ್ಲಿ ಕೇಳಿ ಬರುತ್ತಿರುವ ಹೆಸರುಗಳ ಪೈಕಿ ಸಿ.ಟಿ.ರವಿ ಹೆಸರೂ ಸೇರಿದೆ.

ಯಾವುದೇ ಹೆಸರು ಚರ್ಚೆಯಲ್ಲಿದ್ದರೂ ವಿಪಕ್ಷ ನಾಯಕನ ಆಯ್ಕೆ ಹಾಗೂ ಪಕ್ಷದ ರಾಜ್ಯ ಸಮಿತಿಗೆ ನೂತನ ಸಾರಥಿ ನೇಮಕ ಸದ್ಯಕ್ಕೆ ನೆರವೇರುವ ಲಕ್ಷಣಗಳಿಲ್ಲ.

ಒಂದು ವಾರದಮಟ್ಟಿಗೆ ವಿದೇಶ ಪ್ರವಾಸದಲ್ಲಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಹಿಂತಿರುಗಲಿದ್ದು, ನಂತರವಷ್ಟೇ ಮಹತ್ವದ ಬೆಳವಣಿಗೆಗಳಾಗಲಿವೆ ಎಂದು ಮೂಲಗಳು ಹೇಳಿವೆ.