ನ್ಯೂಸ್

ಸಿ-295 ಮೇಕ್ ಇನ್ ಇಂಡಿಯಾ: ಟಾಟಾ ಪಾಲುದಾರಿಕೆಯಲ್ಲಿ ಮಿಲಿಟರಿ ವಿಮಾನ ತಯಾರಿ

ಮೋಹನ್​ ಶೆಟ್ಟಿ

ವಡೋದರ: ಭಾರತದಲ್ಲಿ ಸೇನಾ ವಿಮಾನ ‘ಸಿ-295’ ಉತ್ಪಾದಿಸುವ ‘ಟಾಟಾ ಅಡ್ವಾನ್ಸ್ ್ಡ ಸಿಸ್ಟಮ್ ಲಿಮಿಟೆಡ್’ ವಿಮಾನ ಸಂಕೀರ್ಣವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಸ್ಪೇನ್ ಪ್ರಧಾನಿ ಪೆಡ್ರೊ ಸಂಚೆಜ್ ಸೋಮವಾರ ಜೊತೆಯಾಗಿ ಉದ್ಘಾಟಿಸಿದರು. ಗುಜರಾತ್​ನ ವಡೋದರ ನಗರದಲ್ಲಿನ ಇದು ಸೇನಾ ವಿಮಾನ ತಯಾರಿಸುವ ದೇಶದ ಮೊದಲ ಖಾಸಗಿ ಕೇಂದ್ರವಾಗಿದೆ.

ಇದು ಭಾರತ-ಸ್ಪೇನ್​ನ ಬಾಂಧವ್ಯ ವೃದ್ಧಿಸುವುದಷ್ಟೇ ಅಲ್ಲದೆ, ನಮ್ಮ ‘ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದ ವರ್ಲ್ಡ್’ ಅಭಿಯಾನಕ್ಕೂ ಪೂರಕವಾಗಿದೆ. ಇಲ್ಲಿ ಉತ್ಪಾದಿಸಲಾದ ವಿಮಾನ ಭವಿಷ್ಯದಲ್ಲಿ ರಫ್ತು ಕೂಡ ಆಗಲಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಿ-295 ವಿಮಾನ ಉತ್ಪಾದಿಸುವ ಕೇಂದ್ರವು ನವ ಭಾರತದ ನೂತನ ಕಾರ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಯಾವುದೇ ಯೋಜನೆಯನ್ನು ರೂಪಿಸುವುದರಿಂದ ಹಿಡಿದು ಅದನ್ನು ಕಾರ್ಯಗತವಾಗಿಸುವವರೆಗೆ ಭಾರತ ಯಾವ ವೇಗದಲ್ಲಿ ಕಾರ್ಯನಿರ್ವಹಿಸುತ್ತಿದೆ ಎನ್ನುವುದನ್ನೂ ಈ ಕೇಂದ್ರ ಸೂಚಿಸುತ್ತಿದೆ. ಬರೀ 2 ವರ್ಷಗಳ ಹಿಂದೆ ಇದರ ನಿರ್ಮಾಣ ಆರಂಭವಾಗಿದ್ದು, ಇದೀಗ ಉತ್ಪಾದನೆಗೂ ಸಜ್ಜಾಗಿದೆ ಎಂದ ಮೋದಿ, ಯೋಜನೆ-ಕಾರ್ಯನಿರ್ವಹಣೆಯಲ್ಲಿ ಅನಗತ್ಯ ವಿಳಂಬ ತಪ್ಪಿಸಲು ನಾನು ಯಾವಾಗಲೂ ಒತ್ತು ನೀಡುತ್ತ ಬಂದಿದ್ದೇನೆ ಎಂದರು.

ಭಾರತ-ಸ್ಪೇನ್ ಪಾಲುದಾರಿಕೆ

ರಕ್ಷಣಾ ಉತ್ಪಾದನೆಯಲ್ಲಿ ಭಾರತ ಇಂಥ ಸಾಧನೆ ಮಾಡಬಲ್ಲದು ಎಂದು ಆ ಸಮಯದಲ್ಲಿ ಯಾರೂ ಊಹಿಸಿಕೊಂಡಿರಲಿಲ್ಲ. ಏಕೆಂದರೆ, ಆ ದಿನಗಳಲ್ಲಿ ದೇಶ ರಫ್ತು ಜತೆ ಗುರುತಿಸಿಕೊಂಡು ಅದನ್ನೇ ಆದ್ಯತೆ ಆಗಿ ಹೊಂದಿತ್ತು. ಆದರೆ ನಾವು ಹೊಸ ಪಥದಲ್ಲಿ ಚಲಿಸಲು ನಿರ್ಧರಿಸಿ, ಹೊಸ ಗುರಿ ಇರಿಸಿಕೊಂಡೆವು, ಅದರ ಫಲಿತಾಂಶ ಇಂದು ನಿಮ್ಮ ಮುಂದಿದೆ. ಯಾವುದೇ ಕಾರ್ಯದ ಯಶಸ್ಸಿಗೆ ಸರಿಯಾದ ಯೋಜನೆ ಮತ್ತು ಸರಿಯಾದ ಪಾಲುದಾರಿಕೆ ಮುಖ್ಯ ಎಂಬುದಕ್ಕೆ ಈ ರಕ್ಷಣಾ ಉತ್ಪಾದನೆ ಕೇಂದ್ರವೇ ಉದಾಹರಣೆ. ಭಾರತ-ಸ್ಪೇನ್ ಪಾಲುದಾರಿಕೆ ಪ್ರಖರವಾಗಿದ್ದು, ನಿರಂತರ ವಿಕಸನವಾಗುತ್ತಿದೆ ಎಂದೂ ಮೋದಿ ಹೇಳಿದರು. ಈ ಫೈನಲ್ ಅಸೆಂಬ್ಲಿ ಕೇಂದ್ರದಿಂದ ಮೊದಲ ವಿಮಾನ 2026ರ ಸುಮಾರಿಗೆ ಉತ್ಪಾದನೆ ಆಗಲಿದೆ. ಈ ಯೋಜನೆ ನಮ್ಮ ಕೈಗಾರಿಕಾ ಒಪ್ಪಂದಗಳನ್ನು ಬಲಪಡಿಸಲಿದೆ ಎಂದು ಸ್ಪೇನ್ ಪ್ರಧಾನಿ ಪೆಡ್ರೋ ಸಂಚೆಜ್ ಹೇಳಿದರು.

ಭಾರತ-ಸ್ಪೇನ್ ಒಪ್ಪಂದ

ಭಾರತೀಯ ವಾಯುಪಡೆಯ ಹಳೆಯ ಎವಿಆರ್​ಒ-748 ವಿಮಾನಗಳಿಗೆ ಬದಲಿಗೆ 56 ‘ಸಿ-295’ ವಿಮಾನಗಳನ್ನು ಖರೀದಿಸಲು ಭಾರತ 2021 ಸೆಪ್ಟೆಂಬರ್​ನಲ್ಲಿ ಸ್ಪೇನ್ ಜತೆ ಸುಮಾರು 21 ಸಾವಿರ ಕೋಟಿ ರೂ. ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದದಡಿ ಮೊದಲ 16 ವಿಮಾನಗಳನ್ನು 4 ವರ್ಷಗಳ ಒಳಗೆ ಸ್ಪೇನ್​ನಲ್ಲಿ ಅಂತಿಮ ಜೋಡಣೆಗೊಳಿಸಿ ಹಾರಾಟದ ಸ್ಥಿತಿಯಲ್ಲಿ ಭಾರತಕ್ಕೆ ನೀಡಲಾಗುವುದು. ಉಳಿದ 40 ವಿಮಾನಗಳನ್ನು ಈ ಟಾಟಾ ವಿಮಾನ ಸಂಕೀರ್ಣದಲ್ಲಿ ಉತ್ಪಾದಿಸಿ ಅಂತಿಮ ಜೋಡಣೆಗೊಳಿಸಲಾಗುವುದು.

ಟಾಟಾ ಕನಸು

ಇದು ಟಾಟಾ ಸಮೂಹ ಮಾತ್ರವಲ್ಲ, ಭಾರತಕ್ಕೂ ಒಂದು ಐತಿಹಾಸಿಕ ಕ್ಷಣ. ಇದು ಸ್ವದೇಶಿ ವಿಮಾನ ಆಗಿರಲಿದೆ. ಏಕೆಂದರೆ, ಖಾಸಗಿ ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ಭಾರತದಲ್ಲೇ ಭಾಗಗಳನ್ನು ತಯಾರಿಸಿ, ಇಲ್ಲೇ ಜೋಡಣೆ ಮಾಡಲಾಗುತ್ತದೆ. ಇನ್ನೆರಡು ವರ್ಷಗಳಲ್ಲಿ ಮೊದಲ ಸ್ವದೇಶಿ ವಿಮಾನ ಸಿದ್ಧಗೊಳ್ಳಲಿದೆ ಎಂದು ಟಾಟಾ ಸನ್ಸ್ ಛೇರ್ಮನ್ ಎನ್.ಚಂದ್ರಶೇಖರನ್ ತಿಳಿಸಿದರು. ಅದರಲ್ಲೂ ಈ ಯೋಜನೆ ಟಾಟಾ ಸನ್ಸ್ ಛೇರ್ಮನ್ ಆಗಿದ್ದ ರತನ್ ಟಾಟಾ ಅವರ ಕನಸಿನ ಕೂಸಾಗಿದ್ದು, 2012ರಲ್ಲೇ ಈ ಯೋಜನೆ ರೂಪು ತಳೆದಿತ್ತು ಎಂದೂ ಅವರು ಹೇಳಿದರು.

ಏರ್​ಬಸ್ ಸಿ295 ವಿಶೇಷತೆ

  • ಯುದ್ಧದ ಸಮಯದಲ್ಲಿ ಸಾರಿಗೆ, ಕಡಲ ಗಸ್ತು, ಕಣ್ಗಾವಲು ಮತ್ತು ವೈದ್ಯಕೀಯ ತುರ್ತು ಸಂದರ್ಭದಲ್ಲಿ ಸಿಬ್ಬಂದಿ ಸ್ಥಳಾಂತರಿಸುವಿಕೆಗೆ ಸೂಕ್ತವಾಗಿದೆ
  • 71 ಸೇನಾ ಸಿಬ್ಬಂದಿಯನ್ನು ಒಯ್ಯುವ ಸಾಮರ್ಥ್ಯ. ಸಣ್ಣ ವಾಯುನೆಲೆಗಳಲ್ಲೂ ಕಾರ್ಯನಿರ್ವಹಿಸುತ್ತದೆ
  • ಅತ್ಯಾಧುನಿಕ ರೇಡಾರ್​ನೊಂದಿಗೆ ಕಣ್ಗಾವಲು
  • ಶಸ್ತ್ರಾಸ್ತ್ರಗಳೊಂದಿಗೆ ಕಾರ್ಯಾಚರಣೆಗೆ ಸಂಪೂರ್ಣ ಸಜ್ಜುಗೊಳಿಸಲು ಅವಕಾಶ
  • 24 ಸ್ಟ್ರೆಚರ್​ಗಳು, 7 ವೈದ್ಯಕೀಯ ಪರಿಚಾರಕರು ಈ ವಿಮಾನದಲ್ಲಿ ಪ್ರಯಾಣಿಸಬಹುದು
  • 6,000 ಕೆಜಿ ಇಂಧನ ಸಾಮರ್ಥ್ಯ
  • ಕಾಡ್ಗಿಚ್ಚು ಸಂದರ್ಭದಲ್ಲಿ ಬೆಂಕಿ ಆರಿಸಲು ಒಮ್ಮೆಗೆ 7,000 ಲೀಟರ್ ನೀರು ಹೊತ್ತೊಯ್ಯಬಹುದು.