ಶಿವಮೊಗ್ಗದ ಎಸ್‌ಬಿಐ ನಿವೃತ್ತ ನೌಕರರ ಸಂಘದಲ್ಲಿ ಏರ್ಪಡಿಸಿದ್ದ ಆಯುಷ್ಮಾನ್ ನೋಂದಣಿ ಹಾಗೂ ವಿತರಣಾ ಕಾರ್ಯಕ್ರಮವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. ಡಾ. ಧನಂಜಯ ಸರ್ಜಿ, ಕೆ.ಟಿ.ಶ್ರೀನಿವಾಸ ರಾವ್, ಕೆ.ಜಿ.ಕೃಷ್ಣಾನಂದ, ಶ್ರೀನಿವಾಸ್ ಪುರಾಣಿಕ್ ಇತರರಿದ್ದರು.  
ನ್ಯೂಸ್

ಆಯುಷ್ಮಾನ್‌ಗೆ ರಾಜ್ಯದ ಪಾಲು ನೀಡಲಿ: ಬಿವೈಆರ್ ಒತ್ತಾಯ

ಶಿವಮೊಗ್ಗ: ಆದಾಯದ ಬಹುಪಾಲು ಆರೋಗ್ಯ ರಕ್ಷಣೆಗಾಗಿ ಖರ್ಚಾಗುತ್ತಿರುವ ಈ ಸಂದರ್ಭದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್ ಭಾರತ್ ಯೋಜನೆ ಒಂದು ಮಹತ್ವದ್ದಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಹೇಳಿದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ಮೈಸೂರು ಬ್ಯಾಂಕ್ ನಿವೃತ್ತ ನೌಕರರ ಸಂಘದಿಂದ ಏರ್ಪಡಿಸಿದ್ದ ಆಯುಷ್ಮಾನ್ ಕಾರ್ಡ್ ಉಚಿತ ನೋಂದಣಿ ಹಾಗೂ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸುಮಾರು 800 ಕಾಯಿಲೆಗಳಿಗೆ ಆಯುಷ್ಮಾನ್ ಭಾರತ್ ಕಾರ್ಡ್‌ನಿಂದ 5 ಲಕ್ಷ ರೂ.ವರೆಗೆ ಚಿಕಿತ್ಸೆ ಲಭ್ಯವಾಗುತ್ತದೆ. ಇದರಿಂದ ಹಿರಿಯ ನಾಗರಿಕರಿಗೆ ತುರ್ತು ಸಂದರ್ಭದಲ್ಲಿ ಉಪಯೋಗವಾಗಲಿದೆ ಎಂದು ತಿಳಿಸಿದರು.

ಈ ಯೋಜನೆಗೆ ತನ್ನ ಪಾಲನ್ನು ರಾಜ್ಯ ಸರ್ಕಾರ ನೀಡುತ್ತಿಲ್ಲ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಮಾತನಾಡಿ, ಯೋಜನೆಯ ಸಮಗ್ರ ಜಾರಿಗೆ ಒತ್ತಾಯಿಸಲಾಗಿದೆ. ಮುಂಬರುವ ಬಜೆಟ್‌ನಲ್ಲಿ ಈ ಯೋಜನೆಗೆ ರಾಜ್ಯ ಸರ್ಕಾರ ತನ್ನ ಪಾಲನ್ನು ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಉದ್ಯಮಿ ಎನ್.ಗೋಪಿನಾಥ್ ಅವರನ್ನು ಸನ್ಮಾನಿಸಲಾಯಿತು. ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿ ಡಾ. ಧನಂಜಯ ಸರ್ಜಿ, ಮೈಸೂರು ಬ್ಯಾಂಕ್ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ.ಟಿ.ಶ್ರೀನಿವಾಸ ರಾವ್, ಪ್ರಮುಖರಾದ ಶ್ರೀನಿವಾಸ್ ಪುರಾಣಿಕ್, ಎಸ್. ಶಿವಮೂರ್ತಿ, ಕೆ.ಜಿ.ಕೃಷ್ಣಾನಂದ್, ಗುರುಮೂರ್ತಿ ಜೋಯ್ಸ, ಎಂ.ಪಿ.ವೀರಭದ್ರಪ್ಪ, ಎಚ್.ಎಸ್.ಮಂಜುನಾಥ್ ಇತರರಿದ್ದರು.