ಬೀಜಿಂಗ್: ಕೋವಿಡ್ ಸಾಂಕ್ರಾಮಿಕತೆಯಿಂದ ತತ್ತರಿಸುತ್ತಿರುವ ಚೀನಾದಲ್ಲಿ ಜನವರಿ ಕೊನೆ ಹೊತ್ತಿಗೆ ಪ್ರತಿ ದಿನ ಸುಮಾರು 25,000 ಜನರು ರೋಗಕ್ಕೆ ಬಲಿಯಾಗಬಹುದು ಎಂಬ ಭೀತಿ ಉಂಟಾಗಿದೆ. ಏಪ್ರಿಲ್ ವೇಳೆಗೆ ದೇಶದಲ್ಲಿ 17 ಲಕ್ಷ ಜನರು ಸಾಯುವ ಆತಂಕ ಸೃಷ್ಟಿಯಾಗಿದೆ. ಕರೊನಾ ನಿಯಂತ್ರಣ ನಿಯಮಗಳಿಲ್ಲದೆ ಮೊದಲ ಚಾಂದ್ರಮಾನ ಹೊಸ ವರ್ಷದ ಹಬ್ಬದ ಆಚರಣೆ ನಡೆಯಲಿದ್ದು ಆಗ ಸಾಂಕ್ರಾಮಿಕತೆ ಭಾರಿ ಪ್ರಮಾಣದಲ್ಲಿ ಸ್ಪೋಟಗೊಳ್ಳಬಹುದು ಎಂಬ ಭಯ ಕಾಡತೊಡಗಿದೆ.
140 ಕೋಟಿ ಜನಸಂಖ್ಯೆಯ ದೇಶದಲ್ಲಿ ವಾರ್ಷಿಕ ರಜೆಯ ಎರಡನೇ ದಿನವಾದ ಜನವರಿ 23ರಂದು ವೈರಸ್ನಿಂದ ಸಾಯುವವರ ಸಂಖ್ಯೆ ಉತ್ತುಂಗಕ್ಕೆ ತಲುಪಬಹುದು ಎಂದು ಲಂಡನ್ ಮೂಲದ ಸಂಶೋಧನಾ ಸಂಸ್ಥೆ ಏರ್ಫಿನಿಟಿ ಹೇಳಿದೆಯೆಂದು ಬ್ಲೂಮ್ಗ್ ವರದಿ ಮಾಡಿದೆ. ಚೀನಾದಲ್ಲಿ ಸದ್ಯಕ್ಕೆ ದೈನಿಕ 9,000 ಸಾವು ಹಾಗೂ 1.8 ಮಿಲಿಯನ್ ಜನರಿಗೆ ಸೋಂಕು ತಗಲಬಹುದು ಎಂದು ಏರ್ಫಿನಿಟಿ ಅಂದಾಜು ಮಾಡಿದೆ. ಏಪ್ರಿಲ್ ಕೊನೆ ಹೊತ್ತಿಗೆ 1.7 ಮಿಲಿಯನ್ ಜನರು ಮೃತಪಡುವ ಅಂದಾಜಿದೆ ಎಂದೂ ಹೇಳಿದೆ. ಅದು ಈ ತಿಂಗಳ ಆರಂಭದಲ್ಲಿ, ದೈನಿಕ 5,000 ಸಾವಿನ ಅಂದಾಜು ಮಾಡಿತ್ತು.
ಚೀನಾ ಪ್ರಯಾಣಿಕರಿಗೆ ಪರೀಕ್ಷೆ
ಚೀನಾದಿಂದ ಆಗಮಿಸುವ ಪ್ರಯಾಣಿಕರನ್ನು ಕೋವಿಡ್ ಪತ್ತೆ ಪರೀಕ್ಷೆಗೆ ಒಳಪಡಿಸಲು ಇಟಲಿ ಮತ್ತು ಜಪಾನ್ ಮತ್ತಿತರ ದೇಶಗಳು ನಿರ್ಧರಿಸಿವೆ. ಮಿಲಾನ್ಗೆ ಹೊರಟಿದ್ದ ಎರಡು ವಿಮಾನಗಳ ಬಹುತೇಕ ಅರ್ಧದಷ್ಟು ಪ್ರಯಾಣಿಕರಲ್ಲಿ ವೈರಸ್ ಇದ್ದುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಚೀನಾದಿಂದ ಆಗಮಿಸುವ ಎಲ್ಲರ ಪರೀಕ್ಷೆ ನಡೆಸಲು ಇಟಲಿ ಅಧಿಕಾರಿಗಳು ಮುಂದಾಗಿದ್ದಾರೆ. ಈ ಪ್ರಯಾಣಿಕರಲ್ಲಿ ಹೊಸ ಪ್ರಭೇದವೇನಾದರೂ ಇದೆಯೇ ಎನ್ನುವುದನ್ನು ಕೂಡ ಪರೀಕ್ಷಿಸಲಾಗುತ್ತದೆ. ಚೀನಾದಿಂದ ಬರುವ ಪ್ರಯಾಣಿಕರ ಮೇಲೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರುವ ಸಂಭವವಿದೆ. ಚೀನಾದಿಂದ ಆಗಮಿಸುವ ಎಲ್ಲ ಪ್ರಯಾಣಿಕರ ಪರೀಕ್ಷೆ ನಡೆಸುವ ಪ್ರಕ್ರಿಯೆಯನ್ನು ಜಪಾನ್ ಶುಕ್ರವಾರ ಆರಂಭಿಸಿದೆ. ಚೀನಾದಲ್ಲಿ ಮಾತ್ರವಲ್ಲದೆ ಜಪಾನ್ನಲ್ಲೂ ದಾಖಲೆ ಸಂಖ್ಯೆಯ ಪ್ರಕರಣ ಹಾಗೂ ಸಾವುಗಳು ಸಂಭವಿಸುತ್ತಿರುವುದರಿಂದ ಮುನ್ನೆಚ್ಚರಿಕೆಯಾಗಿ ವಿಮಾನ ಪ್ರಯಾಣಿಕರ ಪರೀಕ್ಷೆಗೆ ಜಪಾನ್ ಸರ್ಕಾರ ನಿರ್ಧರಿಸಿದೆ. ಜಪಾನ್ನಲ್ಲಿ ಗುರುವಾರ 420 ಕರೊನಾ ಸಾವುಗಳು ಸಂಭವಿಸಿವೆ.
ಸೋಂಕಿತ ವೈದ್ಯರಿಂದಲೇ ಚಿಕಿತ್ಸೆ
ಚೀನಾದಲ್ಲಿ ಕೋವಿಡ್ ಸಾಂಕ್ರಾಮಿಕತೆ ಉಲ್ಬಣಿಸುತ್ತಿದ್ದು ಸೋಂಕಿನಿಂದ ಬಳಲುತ್ತಿರುವ ವೈದ್ಯರೇ ರೋಗಿಗಳ ಚಿಕಿತ್ಸೆ ನಡೆಸಬೇಕಾದ ಪರಿಸ್ಥಿತಿ ನಿರ್ವಣವಾಗಿದೆ. ಅಲ್ಲದೆ, ಕರೊನಾ ದಿಂದ ಮೃತಪಟ್ಟವರ ಶವಸಂಸ್ಕಾರ ನಡೆಸುವ ಕಾರ್ವಿುಕರು ಕೂಡ ಸೋಂಕಿಗೆ ಒಳಗಾಗುವ ಪ್ರಕರಣಗಳು ಹೆಚ್ಚಾಗುತ್ತಿವೆ.
ಪರಿಷ್ಕೃತ ಮಾರ್ಗಸೂಚಿ ಪ್ರಕಟ
ಚೀನಾ, ಥಾಯ್ಲೆಂಡ್ ಸಹಿತ ಆರು ದೇಶಗಳಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಅನ್ವಯವಾಗುವ ಪರಿಷ್ಕೃತ ಮಾರ್ಗಸೂಚಿಯನ್ನು ಭಾರತದ ನಾಗರಿಕ ವಿಮಾನ ಯಾನ ಸಚಿವಾಲಯ ಶುಕ್ರವಾರ ಪ್ರಕಟಿಸಿದೆ. ಚೀನಾ, ಥಾಯ್ಲೆಂಡ್, ಸಿಂಗಾಪುರ, ಹಾಂಕಾಂಗ್, ಕೊರಿಯಾ ಗಣರಾಜ್ಯ ಮತ್ತು ಜಪಾನ್ನಿಂದ ಆಗಮಿಸುವ ಪ್ರಯಾಣಿಕರು ಆಯಾ ದೇಶದಿಂದ ಹೊರಡುವುದಕ್ಕೂ ಮುನ್ನ ಪಡೆದ ಆರ್ಟಿ-ಪಿಸಿಆರ್ ನೆಗೆಟಿವ್ ಟೆಸ್ಟ್ ವರದಿಯನ್ನು ಸಲ್ಲಿಸುವುದು 2023 ಜನವರಿಯಿಂದ ಕಡ್ಡಾಯವಾಗಲಿದೆ.
ಅಪಾಯಕಾರಿ ರೂಪಾಂತರಿ
ಚೀನಾ ಸಹಿತ ಹಲವು ದೇಶಗಳಲ್ಲಿ ಸದ್ಯಕ್ಕೆ ಭಾರಿ ಪ್ರಮಾಣದಲ್ಲಿ ಕೋವಿಡ್-19 ಸಾಂಕ್ರಾಮಿಕತೆ ಹೆಚ್ಚಳಕ್ಕೆ ಕಾರಣವಾಗಿರುವ ಒಮಿಕ್ರಾನ್ನ ಬಿಎಫ್.7 ಪ್ರಭೇದಕ್ಕಿಂತಲೂ ಅಧಿಕ ಅಪಾಯಕಾರಿಯಾದ ಕರೊನಾ ವೈರಸ್ ತಳಿಗಳು ಮುಂದಿನ ದಿನಗಳಲ್ಲಿ ಕಾಡುವ ಸಾಧ್ಯತೆಯಿದೆ ಎಂದು ವೈರಾಣು ತಜ್ಞರು ಎಚ್ಚರಿಸಿದ್ದಾರೆ. ಎಕ್ಸ್ಬಿಬಿ15 ಹೆಸರಿನ ಈ ಹೊಸ ಮರುಸಂಯೋಜಿತ (ರೀಕಾಂಬಿನೆಂಟ್) ಉಪಪ್ರಭೇದವು ಮುಂದೆ ‘ದೊಡ್ಡ ಸಮಸ್ಯೆಯಾಗಿ ಕಾಡಲಿದೆ’ ಎಂದು ವೈರಾಣು ತಜ್ಞ ಎರಿಕ್ ಫೀಗಲ್ ಡಿಂಗ್ ಹೇಳಿದ್ದಾರೆ. ಎಕ್ಸ್ಬಿಬಿ15 ವೈರಾಣು, ಬಿಕ್ಯೂ ಮತ್ತು ಎಕ್ಸ್ಬಿಬಿ ಪ್ರಭೇದಗಳಿಗಿಂತಲೂ ಅಧಿಕ ಪ್ರಮಾಣದಲ್ಲಿ ರೋಗನಿರೋಧಕ ಶಕ್ತಿಯಿಂದ ತಪ್ಪಿಸಿಕೊಳ್ಳುವ ಮತ್ತು ಹೆಚ್ಚಾಗಿ ಹರಡುವ ಸಾಮರ್ಥ್ಯ ಹೊಂದಿದ ಹೊಸ ರೀಕಾಂಬಿನೆಂಟ್ ತಳಿಯಾಗಿದೆ. ‘ಸೂಪರ್ ವೇರಿಯೆಂಟ್’ ಆದ ಈ ಉಪತಳಿ ಸದ್ಯಕ್ಕೆ ಅಮೆರಿಕದಲ್ಲಿ ಶೇಕಡ 40ರಷ್ಟು ಹೆಚ್ಚಾಗಿದೆ. ನ್ಯೂಯಾರ್ಕ್ ಮತ್ತಿತರ ಕಡೆ ಆಸ್ಪತ್ರೆಗೆ ಸೇರುವವರ ಸಂಖ್ಯೆ ಇದರಿಂದಾಗಿ ಏರುತ್ತಿದೆ. ಎಕ್ಸ್ಬಿಬಿ15 ಹಿಂದಿನ ಬಿಕ್ಯೂ1 ತಳಿಗಿಂತಲೂ ಶೇಕಡ 108ರಷ್ಟು ಅಧಿಕವಾಗಿ ಹರಡುತ್ತದೆಂದು ಈವರೆಗಿನ ಅಂಕಿಸಂಖ್ಯೆಯಿಂದ ಗೊತ್ತಾಗಿತ್ತು. ಈಗ ಅದು ಶೇಕಡ 120ರಷ್ಟು ಅಧಿಕ ಎಂಬುದು ಸಾಬೀತಾಗಿದೆ.
ಬಿಗಿ ನಿಯಮ
ಜಪಾನ್ ಶುಕ್ರವಾರ ತನ್ನ ಗಡಿ ನಿಯಮಗಳನ್ನು ಬಿಗಿಗೊಳಿಸಿದೆ. ದೇಶ ದೊಳಗೆ ಬರುವವರಲ್ಲಿ ಕೋವಿಡ್-19 ಇದೆಯೆಂದು ಅನುಮಾನ ಇರುವವರಿಗೆ ಮಾತ್ರ ನಡೆಸಲಾಗುತ್ತಿದ್ದ ಆಂಟಿಜನ್ ಪರೀಕ್ಷೆಯನ್ನು ಚೀನಾ ಮುಖ್ಯಭೂಮಿಯಿಂದ ಬರುವ ಎಲ್ಲ ಜನರಿಗೆ ಕಡ್ಡಾಯಗೊಳಿಸಿದೆ. ಪಾಸಿಟಿವ್ ಆದವರನ್ನು ಕ್ವಾರಂಟೈನ್ಗೆ ಒಳಪಡಿಸಲಾಗುತ್ತದೆ. ಅವರನ್ನು ನಿಯೋಜಿತ ಕೇಂದ್ರಗಳಲ್ಲಿ ಏಳು ದಿನ ಕಾಲ ಇರಿಸಲಾಗುತ್ತದೆ ಹಾಗೂ ಅವರ ಸ್ಯಾಂಪಲ್ಗಳನ್ನು ಜಿನೋಮ್ ವಿಶ್ಲೇಷಣೆಗೆ ಬಳಸಲಾಗುತ್ತದೆ.