ಬೆಂಗಳೂರು: ಬಿಜೆಪಿ ಅಬ್ಬರ, ಕಾಂಗ್ರೆಸ್ ಗ್ಯಾರಂಟಿ ನಡುವೆ ಜೆಡಿಎಸ್ ದಿನೇದಿನೆ ದುರ್ಬಲಗೊಳ್ಳುತ್ತಿದೆ. ಸಂಘಟನೆ ಬಹುತೇಕ ಸಡಿಲಗೊಂಡಿದೆ. ಈ ಹಿನ್ನೆಲೆಯಲ್ಲಿ ಮೇನಲ್ಲಿ ನಿಖಿಲ್ ಕುಮಾರಸ್ವಾಮಿಗೆ ರಾಜ್ಯಾಧ್ಯಕ್ಷ ಪಟ್ಟ(By May, Nikhil Kumaraswamy became the state president of JDS) ಕಟ್ಟುವುದು ನಿಶ್ಚಿತವಾಗಿದೆ.
ಸದಸ್ಯತ್ವ ಅಭಿಯಾನ, ದ್ವೈವಾರ್ಷಿಕ ಚುನಾವಣೆ ಪ್ರಕ್ರಿಯೆ, ಹಲವು ತಾಲೂಕು, ಜಿಲ್ಲೆ ಅಧ್ಯಕ್ಷರನ್ನು ಬದಲಿಸುವ ಹಾಗೂ ವಿವಿಧ ಘಟಕಗಳನ್ನು ಮರು ರಚಿಸುವ ಪ್ರಕ್ರಿಯೆ ಮೇ ವೇಳೆಗೆ ಪೂರ್ಣಗೊಳ್ಳಲಿದ್ದು, ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಸಾರಥ್ಯ ವಹಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕೈಗಾರಿಕೆಗಳ ಪುನಶ್ಚೇತನ ವಿಚಾರದಲ್ಲಿ ವಿಶೇಷ ಆಸಕ್ತಿ ವಹಿಸಿದರೂ ಬೆಂಗಳೂರು, ಮಂಡ್ಯ, ಮೈಸೂರಿಗೇ ಅವರ ಕಾರ್ಯಚಟುವಟಿಕೆಯ ಚಕ್ರ ತಿರುಗುತ್ತಿದೆ. ಹಾಗಾಗಿ ಪಕ್ಷ ಸಂಘಟನೆ ಕೆಲಸಕ್ಕೆ ಹ್ಯಾಂಡ್ ಗೇರ್ ಹಾಕಿದಂತಾಗಿದೆ.
ಬಿಬಿಎಂಪಿ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ದಿನಗಣನೆ ಆರಂಭವಾಗಿರುವುದರಿಂದ ಪಕ್ಷಕ್ಕೆ ಪ್ರಾಣವಾಯು ತುಂಬಿ ಚಹರೆ ಬದಲಿಸಲು ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಜ್ಯಾದ್ಯಂತ ಮಿಂಚಿನ ಸಂಚಾರ ಮಾಡುತ್ತಿದ್ದಾರೆ.
ನಿರಂತರವಾಗಿ ಪಕ್ಷ ಸಂಘಟನೆ, ಸರ್ಕಾರದ ವಿರುದ್ಧ ಹೋರಾಟ, ಕೇಂದ್ರ ಸರ್ಕಾರದಿಂದ ರೈತರಿಗೆ ನೆರವು ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ನಿಖಿಲ್ ಕುಮಾರಸ್ವಾಮಿಗೆ ಪಟ್ಟ ಕಟ್ಟುವ ಸುಳಿವು ನೀಡಿದ್ದಾರೆ. ಹೀಗಾಗಿ ಲೋಕಸಭೆ, ವಿಧಾನಸಭೆ ಚುನಾವಣೆಯ ಸರಣಿ ಸೋಲಿನಿಂದ ಎದೆಗುಂದದೆ ನಿರಂತರವಾಗಿ ಜನರ ಒಡನಾಟದಲ್ಲಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಭರ್ಜರಿ ಚಾಲನೆ ನೀಡಿರುವ ನಿಖಿಲ್, ಈಗ ಕಲ್ಯಾಣ ಕರ್ನಾಟಕದತ್ತ ಚಿತ್ತ ಹರಿಸಿದ್ದಾರೆ. ರಾಜ್ಯಾಧ್ಯಕ್ಷರಾಗುವ ಮುನ್ನ ರಾಜ್ಯವನ್ನು ಸುತ್ತಿ ಪಕ್ಷ ಸಂಘಟನೆಗೆ ಭೂಮಿಕೆ ಸಿದ್ಧಪಡಿಸಿಕೊಳ್ಳುವ ಹಾಗೂ ಪಕ್ಷ ಮುನ್ನಡೆಸಿಕೊಂಡು ಹೋಗಲು ಸಮರ್ಥರಿರುವ ಕಾರ್ಯಕರ್ತರನ್ನು ಗುರುತಿಸುವತ್ತ ನಿಖಿಲ್ ನಿಗಾ ಇರಿಸಿದ್ದಾರೆ. ದೇವೇಗೌಡ ಹಾಗೂ ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಹಿರಿಯ, ಕಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ನಡುವೆ ಸೇತುಬಂಧವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪಕ್ಷಕ್ಕೆ ಹೊಸ ಜೀವ ತುಂಬಲು ಹೊಸ ರಕ್ತ ಬೇಕು. ಅದಕ್ಕಾಗಿ ಯುವಕರಿಗೆ ಸಂಘಟನೆಯಲ್ಲಿ ಪ್ರಾಶಸ್ತ್ಯ ನೀಡಲು ನಿಖಿಲ್ ಆಲೋಚಿಸುತ್ತಿದ್ದಾರೆ. ಹೋದಲ್ಲೆಲ್ಲ ಕಿಕ್ಕಿರಿದು ನೆರೆಯುವ ಯುವಕರಲ್ಲಿ ಉತ್ಸಾಹಿ ಹಾಗೂ ನಂಬಿಕಸ್ತರನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ.
ಬಿಬಿಎಂಪಿ ಹಾಗೂ ಜಿಲ್ಲೆ, ತಾಪಂ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ನಿಖಿಲ್ ಪ್ರವಾಸ ಕಾರ್ಯಕ್ರಮ ರೂಪಿಸಿದ್ದಾರೆ.
ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ನಿಖಿಲ್ ಕುಮಾರಸ್ವಾಮಿ ಸತತ ಕೇಂದ್ರ ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದಾರೆ. ಗೃಹ ಸಚಿವ ಅಮಿತ್ ಶಾ ಸೇರಿ ಅನೇಕ ಕೇಂದ್ರ ಸಚಿವರನ್ನು ಭೇಟಿ ಮಾಡುತ್ತಿದ್ದಾರೆ. ರಾಜ್ಯದ ಅಡಕೆ, ತೆಂಗು, ತಂಬಾಕು ಬೆಳೆಗಾರರ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವ ಮೂಲಕ ರೈತ ವರ್ಗದ ಬೆಂಬಲ ಪಡೆಯಲು ಪ್ರಯತ್ನ ನಡೆಸುತ್ತಿದ್ದಾರೆ.