ನ್ಯೂಸ್

ಅವರ್ ಬಿಟ್ ಇವರ್ ಬಿಟ್ ಮತ್ತಿನ್ಯಾರು?

ಬೆಂಗಳೂರು: ಮೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಎರಡು ದಿನ ಮಾತ್ರ ಬಾಕಿ ಉಳಿದಿದೆ. ಇಷ್ಟರ ನಡುವೆ ಸಂಡೂರು ಕ್ಷೇತ್ರ ಹೊರತುಪಡಿಸಿ ಶಿಗ್ಗಾಂವಿ ಹಾಗೂ ಚನ್ನಪಟ್ಟಣ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಅವರ್ ಬಿಟ್, ಇವರ್ ಬಿಟ್ ಇವರ್ಯಾರು ಎಂಬ ಸ್ಥಿತಿ ನಿರ್ವಣವಾಗಿದೆ. ಇದೇ ವೇಳೆ ಬೇಕು ಬೇಡಗಳು, ಇಷ್ಟ ನಷ್ಟಗಳ ಲೆಕ್ಕಾಚಾರದ ನಡುವೆ ಮೂರು ಪಕ್ಷಗಳು ಹೈರಾಣಾಗಿರುವುದು ಸ್ಪಷ್ಟವಾಗುತ್ತಿದೆ.

ಚನ್ನಪಟ್ಟಣದಿಂದ ಸ್ಪರ್ಧೆಗೆ ಪಣತೊಟ್ಟಿರುವ ಸಿ.ಪಿ.ಯೋಗೇಶ್ವರ್ ಅವರನ್ನು ಕಾಂಗ್ರೆಸ್ ಸೇರದಂತೆ ತಮ್ಮಲ್ಲೇ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಬಿಜೆಪಿ ಇದ್ದರೆ, ಶಿಗ್ಗಾಂವಿ ಕ್ಷೇತ್ರದಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡದೇ ಇದ್ದರೆ ಎಲ್ಲಿ ಮುನಿಸಿಕೊಂಡಾರೋ ಎಂಬ ಅಳುಕಲ್ಲಿ ಕಾಂಗ್ರೆಸ್ ಸಿಲುಕಿದೆ. ಅಂದಹಾಗೆ, ಬಿಜೆಪಿ ನೆಂಟಸ್ತಿಕೆ ಉಳಿಸಿಕೊಳ್ಳುವುದಕ್ಕಾಗಿ 2018, 2023ರಲ್ಲಿ ಒಲಿದ ಚನ್ನಪಟ್ಟಣವನ್ನು ಬಿಟ್ಟುಕೊಡುವ ಕಠಿಣ ಪರಿಸ್ಥಿತಿಯನ್ನು ಜೆಡಿಎಸ್ ಎದುರಿಸುತ್ತಿದೆ. ಇನ್ನು ಸಂಡೂರು ಕ್ಷೇತ್ರದಿಂದ ಬಳ್ಳಾರಿ ಸಂಸದ ತುಕಾರಾಂ ಪತ್ನಿ ಸ್ಪರ್ಧೆ ಮಾಡಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಮುಂದೇನು?

  1. ತಮ್ಮ ಪಕ್ಷದ ಚಿನ್ಹೆಯಿಂದಲೇ ಸ್ಪರ್ಧಿಸುವಂತೆ ಸಿ.ಪಿ.ಯೋಗೇಶ್ವರ್​ಗೆ ಜೆಡಿಎಸ್ ಮುಕ್ತ ಅವಕಾಶ ನೀಡಿದೆ. ಕಾಂಗ್ರೆಸ್ ಕೂಡ ಅವರ ಬರುವಿಕೆಗೆ ರೆಡ್ ಕಾರ್ಪೆಟ್ ಹಾಸಿದೆ. ಖುದ್ದು ಸಿದ್ದರಾಮಯ್ಯ ಪರೋಕ್ಷ ಆಹ್ವಾನ ನೀಡಿದ್ದಾರೆ. ಹೀಗಾಗಿ ಯೋಗೇಶ್ವರ್ ತೀರ್ವನದ ಮೇಲೆ ಎದುರಾಳಿ ಅಭ್ಯರ್ಥಿ ನಿರ್ಧಾರವಾಗಲಿದೆ. ಸಿ.ಪಿ.ಯೋಗೇಶ್ವರ್ ಬಿಜೆಪಿ ಅಥವಾ ಜೆಡಿಎಸ್​ನಿಂದ, ಇಲ್ಲವೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದರೆ ಕಾಂಗ್ರೆಸ್ ಡಿ.ಕೆ. ಸುರೇಶ್ ಅಥವಾ ರಘುನಂದನ್ ರಾಮಣ್ಣ ಅವರನ್ನು ಕಣಕ್ಕಿಳಿಸಲಿದೆ. ಯೋಗೇಶ್ವರ್ ಕಾಂಗ್ರೆಸ್​ನಿಂದ ಕಣಕ್ಕಿಳಿದರೆ ಜೆಡಿಎಸ್ ನಿಖಿಲ್ ಕುಮಾರಸ್ವಾಮಿ ಅಥವಾ ಜಯಮುತ್ತು ಹೆಸರನ್ನು ಅಂತಿಮಗೊಳಿಸಲಿದೆ.
  2. ಶಿಗ್ಗಾಂವಿಯಲ್ಲಿ ಅಭ್ಯರ್ಥಿ ಆಯ್ಕೆ ಮಾಡಲು ಕಾಂಗ್ರೆಸ್​ಗೆ ಸಮಸ್ಯೆ ಉಂಟಾಗಿದೆ. ಮುಸ್ಲಿಮರಿಗೆ ಟಿಕೆಟ್ ನೀಡಬೇಕೆಂಬ ಒತ್ತಾಯ ಆ ಸಮುದಾಯದ ನಾಯಕರದ್ದು. ಆದರೆ, ಮುಸ್ಲಿಮರಿಗೆ ಟಿಕೆಟ್ ನೀಡಿದರೆ ಮತಗಳ ಧ್ರುವೀಕರಣ ಉಂಟಾಗಿ ಬಿಜೆಪಿಗೆ ಅನುಕೂಲವಾಗಲಿದೆ ಎಂಬ ವಾದ ಇತರ ಮುಖಂಡರದ್ದು. ಹೀಗಾಗಿ ಹೈಕಮಾಂಡ್​ಗೂ ಇಕ್ಕಟ್ಟು ಸೃಷ್ಟಿಯಾಗಿದೆ. 1972, 1978, 1983ರಲ್ಲಿ ಈ ಕ್ಷೇತ್ರದಿಂದ ಮುಸ್ಲಿಂ ಅಭ್ಯರ್ಥಿಗಳು ಕಾಂಗ್ರೆಸ್​ನಿಂದ ಕಣಕ್ಕಿಳಿದು ಗೆಲುವು ಸಾಧಿಸಿದ್ದರು. 1999ರಲ್ಲಿ ಜೆಡಿಎಸ್​ನಿಂದ ಮುಸ್ಲಿಂ ಅಭ್ಯರ್ಥಿ ಗೆಲುವು ದಾಖಲಿಸಿದ್ದರು. 1994ರ ನಂತರ ಈ ಕ್ಷೇತ್ರ ಕಾಂಗ್ರೆಸ್​ನಲ್ಲಿ ಗೆಲುವು ಸಾಧಿಸಿಲ್ಲ. ಹೀಗಾಗಿ ಪಂಚಮಸಾಲಿ ಲಿಂಗಾಯತರಿಗೆ ಅವಕಾಶ ಕೊಡಬೇಕೆಂದು ಒತ್ತಡ ಶುರುವಾಗಿದೆ. ವೈಶಾಲಿ ಕುಲಕರ್ಣಿ, ಸೋಮಣ್ಣ ಬೇವಿನ ಮರದ ಪ್ರಬಲ ಆಕಾಂಕ್ಷಿಗಳು.

ಪ್ರಮುಖ ಬೆಳವಣಿಗೆ

  1. ಮೂರು ಕ್ಷೇತ್ರದಲ್ಲೂ ಗೆಲುವಷ್ಟೇ ಮುಖ್ಯ. ‘ನೋ ಕಾಂಪ್ರಮೈಸ್’ ಎಂದು ಕಾಂಗ್ರೆಸ್ ಹೈಕಮಾಂಡ್​ನಿಂದ ಸ್ಪಷ್ಟ ಸಂದೇಶ.
  2. ಚನ್ನಪಟ್ಟಣದಿಂದ ಸಿ.ಪಿ.ಯೋಗೇಶ್ವರ್​ರನ್ನು ಜೆಡಿಎಸ್ ಚಿನ್ಹೆಯಿಂದಲೇ ಕಣಕ್ಕಿಳಿಸುವಂತೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರಿಂದ ಅರಿಕೆ.
  3. ಬಿಜೆಪಿಯಿಂದಲೇ ಯೋಗೇಶ್ವರ್​ಗೆ ಸ್ಪರ್ಧಿಸಲು ಅವಕಾಶ ಕೊಡಬೇಕೆಂದು ಸಚಿವ ಪ್ರಲ್ಹಾದ ಜೋಶಿಯಿಂದ ಕುಮಾರಸ್ವಾಮಿ ಅವರಿಗೆ ಕೋರಿಕೆ.
  4. ಜೆಡಿಎಸ್ ಕಚೇರಿಯಲ್ಲಿ ಮಹತ್ವದ ಸಭೆ, ಯೋಗೇಶ್ವರ್​ಗೆ ಅವಕಾಶ ಕೊಡಲು ಜೆಡಿಎಸ್ ಕಾರ್ಯಕರ್ತರ ತೀವ್ರ ವಿರೋಧ. ಮೈತ್ರಿ ಮುಖ್ಯವೋ, ನಾವೋ ಎಂದು ದನಿ.
  5. ಶಿಗ್ಗಾಂವಿಯಲ್ಲಿ ಮುಸ್ಲಿಮರಿಗೆ ಸ್ಪರ್ಧಿಸಲು ಅವಕಾಶ ಕೊಡಬೇಕೆಂದು ಸಚಿವ ಜಮೀರ್ ಅಹ್ಮದ್ ರಾಜ್ಯ ಕಾಂಗ್ರೆಸ್ ಉಸ್ತುವಾರಿಗೆ ಒತ್ತಾಯ.
  6. ಯೋಗೇಶ್ವರ್ ಜತೆ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸಮಾಲೋಚನೆ. ಆತುರದ ತೀರ್ಮಾನ ಮಾಡದಿರಿ, ಪಕ್ಷದಿಂದ ಸೂಚನೆ ಬರಬಹುದು ಎಂದು ಮನವೊಲಿಕೆ.

ಸಂಡೂರಿಗೆ ತುಕಾರಾಂ ಪತ್ನಿ ಅಭ್ಯರ್ಥಿ: ಸಂಡೂರು ಕ್ಷೇತ್ರದ ಉಪ ಚá-ನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಸಂಸದ ಈ. ತುಕಾರಾಂ ಪತ್ನಿ ಅನ್ನಪೂರ್ಣ ಅವರಿಗೆ ಟಿಕೆಟ್ ನಿರ್ಧಾರ ಅಗಿದೆ ಎಂದು ಮá-ಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇನ್ನೆರಡು ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಬೇಕಿದೆ. ಕಾಂಗ್ರೆಸ್​ನ ಸಿದ್ಧಾಂತ ಮತ್ತು ಸಂವಿಧಾನದ ಮೌಲ್ಯಗಳನ್ನು ಒಪ್ಪಿ ಬರುವ ಎಲ್ಲರಿಗೂ ಪಕ್ಷಕ್ಕೆ ಸ್ವಾಗತ ಎಂದು ಸಿ.ಪಿ.ಯೋಗೇಶ್ವರ್ ಪಕ್ಷ ಸೇರ್ಪಡೆ ಕುರಿತು ಪ್ರಶ್ನೆಗೆ ಉತ್ತರಿಸಿದರು. ಚನ್ನಪಟ್ಟಣದಲ್ಲಿ ಸೂಕ್ತ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎನ್ನುವ ಚರ್ಚೆ ಆಗಿದೆ. ಮಾಜಿ ಸಂಸದ ಡಿ.ಕೆ.ಸುರೇಶ್ ಕೂಡ ಪ್ರಬಲ ಅಭ್ಯರ್ಥಿ ಆಗಿದ್ದಾರೆ. ನಮ್ಮ ಪಕ್ಷದ ಅಧ್ಯಕ್ಷರು ಅಲ್ಲೇ ಇದ್ದಾರೆ. ಅವರೇ ತೀರ್ಮಾನ ಮಾಡುತ್ತಾರೆ. ಒಂದೆರಡು ದಿನಗಳಲ್ಲಿ ಚನ್ನಪಟ್ಟಣ ಮತ್ತು ಶಿಗ್ಗಾಂವಿ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಎನ್ನುವುದು ಸ್ಪಷ್ಟವಾಗಲಿದೆ ಎಂದು ತಿಳಿಸಿದರು.

ನಾವೂ ಲೆಕ್ಕಾಚಾರ ಹಾಕಬೇಕು: ಬಿಜೆಪಿ ಲೆಕ್ಕಾಚಾರದಂತೆ ನಾವೂ ಲೆಕ್ಕಾಚಾರ ಹಾಕಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಘೂಷಣೆ ಮಾಡá-ತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷರೂ ಅದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕá-ಮಾರ್ ಹೇಳಿದರು. ಟಿಕೆಟ್ ಘೊಷಣೆ 2 ನಿಮಿಷದ ಕೆಲಸ. ಅದಕ್ಕೆ ತಯಾರಿ ಅಗತ್ಯ. ನಾನು, ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ಸುರ್ಜೆವಾಲ ಸೇರಿ ಚರ್ಚೆ ಮಾಡಿದ್ದೇವೆ. ಈಗ ಏನಿದ್ದರೂ ಕೊನೆಯ ಲೆಕ್ಕಾಚಾರ ನಡೆದಿದೆ.

ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಬಳಿ ಅಂತಿಮ ಮಾತá-ಕತೆ ನಡೆಸಿ ಅಭ್ಯರ್ಥಿ ಘೊಷಣೆ ಮಾಡá-ತ್ತೇವೆ. ಯೋಗೇಶ್ವರ್ ಅವರನ್ನು ನಾನು ಸಂಪರ್ಕ ಮಾಡಿಲ್ಲ. ಆದರೆ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಲಾಗá-ವುದು. ನಾಳೆ ಏನೇನು ಅಗುತ್ತೋ ನೋಡೋಣ. ರಾಜಕಾರಣದಲ್ಲಿ ಏನು ಬೇಕಾದರೂ ಅಗá-ತ್ತದೆ ಎಂದರು.

4ನೇ ದಿನ 9 ನಾಮಪತ್ರ ಸಲ್ಲಿಕೆ: ರಾಜ್ಯದ ಮೂರು ವಿಧಾನಸಭೆ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ನಾಲ್ಕನೇ ದಿನವಾದ ಸೋಮವಾರ 9 ನಾಮಪತ್ರ ಸಲ್ಲಿಕೆಯಾಗಿವೆ. ಶಿಗ್ಗಾಂವಿ 4, ಚನ್ನಪಟ್ಟಣದಲ್ಲಿ 5 ನಾಮಪತ್ರ ಸಲ್ಲಿಕೆಯಾಗಿವೆ. ಮಾನ್ಯತೆ ಪಡೆದ ನೋಂದಾಯಿತ ರಾಜಕೀಯ ಪಕ್ಷಗಳಿಂದ 3 ಹಾಗೂ ಪಕ್ಷೇತರರು ಆರು ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಈವರೆಗೆ ಶಿಗ್ಗಾವಿ 10, ಸಂಡೂರು 1, ಚನ್ನಪಟ್ಟಣ 9 ಸೇರಿ ಒಟ್ಟು 20 ನಾಮಪತ್ರ ಸಲ್ಲಿಕೆಯಾಗಿವೆ.

ನೆಲದವರೆಗೂ ಬಗ್ಗಿದ್ದೇನೆ, ಇನ್ನೂ ಬಗ್ಗಲು ಆಗದು: ಚನ್ನಪಟ್ಟಣ ಟಿಕೆಟ್ ವಿಷಯಕ್ಕೆ ನೆಲದವರೆಗೂ ಬಗ್ಗಿದ್ದೇನೆ. ಇನ್ನೂ ಬಗ್ಗಿ ಎಂದರೆ ಎಲ್ಲಿಗೆ ಬಗ್ಗಲಿ? ನನ್ನ ತಾಳ್ಮೆ, ಸಹನೆಗೂ ಮಿತಿ ಇದೆ ಎಂದು ಕೆಲ ಬಿಜೆಪಿ ನಾಯಕರ ವಿರುದ್ಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು. ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಮುಖಂಡರ ಸಭೆಯಲ್ಲಿ ಮಾತನಾಡಿದರು. ಅಭ್ಯರ್ಥಿ ವಿಷಯದಲ್ಲಿ ಕಾರ್ಯಕರ್ತರ ಭಾವನೆಗಳಿಗೆ ವಿರುದ್ಧವಾಗಿ ನಿರ್ಧಾರ ಕೈಗೊಳ್ಳುವ ಪ್ರಶ್ನೆಯೇ ಇಲ್ಲ. ಈ ರಾಜ್ಯದಲ್ಲಿ ನನ್ನಷ್ಟು ಉಪ ಚುನಾವಣೆಗಳನ್ನು ಎದುರಿಸಿದ, ಯಶಸ್ವಿಯಾಗಿ ನಿಭಾಯಿಸಿದ ವ್ಯಕ್ತಿ ಇನ್ನೊಬ್ಬರಿಲ್ಲ. ಚನ್ನಪಟ್ಟಣ ಚುನಾವಣೆ ಎದುರಿಸುವುದಕ್ಕೆ ನನಗೆ ಭಯವೇ? ಸಾಧ್ಯವೇ ಇಲ್ಲ ಎಂದು ಗುಡುಗಿದರು.

ಮೋದಿ, ಷಾ ಸಂಬಂಧ ಮುಖ್ಯ: ನಾನು ಬಗ್ಗಿರುವುದು ಅಧಿಕಾರಕ್ಕಾಗಿ ಅಲ್ಲ. ವೈಯಕ್ತಿಕವಾಗಿ ನಾನು ಮಾಡದಿರುವ ತಪ್ಪಿಗೆ ತಲೆಕೊಟ್ಟಿದ್ದೇನೆ. ಈ ದೇಶದಲ್ಲಿ ಕಾಂಗ್ರೆಸ್ ಅನ್ನು ಮೂಲೋತ್ಪಾಟನೆ ಮಾಡಬೇಕು ಎನ್ನುವ ಪ್ರಧಾನಿ ಮೋದಿ ಸಂಕಲ್ಪಕ್ಕೆ ಹೆಗಲಾಗಿ ನಿಂತಿದ್ದೇನೆ. ನವದೆಹಲಿಯಲ್ಲಿ ಭೇಟಿಯಾಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು, ಯೋಗೇಶ್ವರ್​ಗೆ ರಾಜೀನಾಮೆ ಕೊಟ್ಟು ಜೆಡಿಎಸ್​ನಿಂದ ಚುನಾವಣೆಗೆ ನಿಲ್ಲುವುದಕ್ಕೆ ಹೇಳುತ್ತೇವೆ ಎಂದು ಹೇಳಿದ್ದರು. ನಾನು ಈ ಸಂಬಂಧ ಉಳಿಯಬೇಕು, ಒಂದು ಸ್ಥಾನ ಮುಖ್ಯವಲ್ಲ, ಎನ್​ಡಿಎ ಮೈತ್ರಿ ಗೆಲ್ಲಬೇಕು ಎಂದು ಹೇಳುತ್ತಲೇ ಇದ್ದೇನೆ. ಮೋದಿ, ಅಮಿತ್ ಷಾ, ನಡ್ಡಾ ರಂತಹ ನಾಯಕರ ಜತೆ ಸಂಬಂಧ ಕಡಿದುಕೊಳ್ಳಬೇಕಾ? ಎಂದು ಕಿಡಿಕಾರಿದರು.

ಕಾರ್ಯಕರ್ತರ ಗದ್ದಲ, ಭಾಷಣ ಮೊಟಕು: ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ಟಿಕೆಟ್ ಕೊಡಬೇಕು, ಯಾವುದೇ ಕಾರಣಕ್ಕೂ ಯೋಗೇಶ್ವರ್ ಅವರಿಗೆ ಕೊಡಬಾರದು ಎಂದು ಚನ್ನಪಟ್ಟಣ ಕಾರ್ಯಕರ್ತರ ಸಭೆಯಲ್ಲಿ ಗದ್ದಲ ಎಬ್ಬಿಸಿದರು. ನಿಖಿಲ್ ಭಾಷಣ ಮಾಡುವಾಗಲೂ ಪದೇಪದೆ ಅಡ್ಡಿಪಡಿಸಿ ನಿಖಿಲ್ ಹೆಸರನ್ನು ಘೊಷಣೆ ಮಾಡುವಂತೆ ಒತ್ತಾಯಿಸಿದರು. ಆಕ್ರೋಶದ ಕಾರಣದಿಂದ ಕುಮಾರಸ್ವಾಮಿ ಭಾಷಣ ಮುಂದುವರಿಸಲು ಆಗದೆ ಮೊಟಕು ಮಾಡಿದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಚನ್ನಪಟ್ಟಣ ತಾಲೂಕು ಅಧ್ಯಕ್ಷ ಜಯಮುತ್ತು ಇತರರಿದ್ದರು.

ದುಡುಕಿನಬ ನಿರ್ಧಾರ ಬೇಡ: ಉಪ ಚುನಾವಣೆಯಲ್ಲಿ ಸ್ಪರ್ಧೆ ಬಯಸಿ ಗುರುವಾರ (ಅ.24) ನಾಮಪತ್ರ ಸಲ್ಲಿಸಲಾಗುವುದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಪಿ.ಯೋಗೇಶ್ವರ್ ತಿಳಿಸಿದರು. ನಗರದ ನಿವಾಸದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಇಷ್ಟು ದಿನ ತಾಳ್ಮೆಯಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಇನ್ನೂ ಸ್ವಲ್ಪ ಹೊತ್ತು ಕಾಯೋಣ. ಅಂತಿಮವಾಗಿ ಕಾರ್ಯಕರ್ತರ ನಿರ್ಧಾರಕ್ಕೆ ಬದ್ಧವಾಗಿರುತ್ತೇನೆ ಎಂದು ಘೊಷಿಸಿದರು. ಪ್ರಾರಂಭದಲ್ಲೇ ಗುರುವಾರ ನಾಮಪತ್ರ ಸಲ್ಲಿಸುತ್ತೇನೆ. ಮುಖಂಡರು ಹಾಗೂ ಬೆಂಬಲಿಗರು ಅಭಿಪ್ರಾಯ ತಿಳಿಸಿ ಎಂದ ಅವರು, ಗುರುವಾರ ಬೆಳಗ್ಗೆ 11ಗಂಟೆಗೆ ನಾಮಪತ್ರ ಸಲ್ಲಿಸೋಣ. ಚಿಹ್ನೆ ಬಗ್ಗೆ ಆಮೇಲೆ ಅಂತಿಮ ಮಾಡೋಣ ಎಂದರು.

ಬಳ್ಳಾರಿ ಸಂಸದ ತುಕಾರಾಂ ಅನರ್ಹತೆಗೆ ಒತ್ತಾಯ: ವಾಲ್ಮೀಕಿ ನಿಗಮದಲ್ಲಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ 187 ಕೋಟಿ ಹಣ ಕಾಂಗ್ರೆಸ್ ಸರ್ಕಾರ ಲೂಟಿ ಮಾಡಿದ್ದಲ್ಲದೆ, ಬಳ್ಳಾರಿ, ಇತರ ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ಈ ಹಣ ದುರ್ಬಳಕೆಯಾಗಿದೆ ಎಂದು ಕೇಂದ್ರ ಚುನಾವಣೆ ಆಯೋಗಕ್ಕೆ ಮಂಗಳವಾರ ದೂರು ಸಲ್ಲಿಸಿದೆ. ಹಣ ದುರ್ಬಳಕೆಯಾಗಿರುವ ಹಿನ್ನೆಲೆಯಲ್ಲಿ ಬಳ್ಳಾರಿ ಸಂಸದ ಇ. ತುಕಾರಾಂ ಗೆಲುವು ಅಕ್ರಮ. ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ ನಿಯೋಗ ಒತ್ತಾಯಿಸಿದೆ. ಚುನಾವಣಾ ಆಯುಕ್ತರನ್ನು ಭೇಟಿಯಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ತನಿಖೆ ಆಧಾರದಲ್ಲಿ ಇ.ಡಿ. ಕಳೆದ ತಿಂಗಳು ಪ್ರೆಸ್ ನೋಟ್ ಬಿಡುಗಡೆ ಮಾಡಿದ್ದು, ಚುನಾವಣೆಯಲ್ಲಿ ಹಣ ಬಳಕೆಯಾದ ಬಗ್ಗೆ ಹೇಳಿದೆ. ಈಗಾಗಲೇ ರಾಜ್ಯದ ಸಚಿವ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತುಕಾರಾಂರನ್ನು ಅನರ್ಹಗೊಳಿಸಲು ಇ.ಡಿ. ತನಿಖೆ ಅಂಶಗಳೇ ಪೂರಕ ಎಂದು ಹೇಳಿದ್ದಾರೆ.

ಶಿಗ್ಗಾಂವಿ ಟಿಕೆಟ್ ಮುಸ್ಲಿಮರಿಗೆ ಕೊಡಿ: ಉಪ ಚುನಾವಣೆ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್​ಸಿಂಗ್ ಸುರ್ಜೆವಾಲಾ ಅವರನ್ನು ಭೇಟಿ ಮಾಡಿದ್ದ ಸಚಿವ ಜಮೀರ್ ಅಹಮದ್ ಖಾನ್, ಶಿಗ್ಗಾಂವಿ ಕ್ಷೇತ್ರಕ್ಕೆ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಲು ಒತ್ತಾಯಿಸಿದರು. ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್ ಪರ ನಿಂತಿದ್ದು ಶಿಗ್ಗಾಂವಿ ಟಿಕೆಟ್ ಮುಸ್ಲಿಂ ಸಮುದಾಯಕ್ಕೆ ಬೇಕೇ ಬೇಕು ಎಂದು ಪಟ್ಟು ಹಿಡಿದರು.

ಬಿಜೆಪಿಯ ಹಿರಿಯರು ಹೇಳಿದ್ದಾರೆ. ಹಾಗಾಗಿ, ಇವತ್ತು ಕಾಯುತ್ತೇನೆ. ನಾನು ಕಾಂಗ್ರೆಸ್​ನ ಯಾರನ್ನೂ ಭೇಟಿ ಮಾಡಿಲ್ಲ. ಕಾರ್ಯಕರ್ತರ ಜತೆ ರ್ಚಚಿಸಿದ ಬಳಿಕ ತೀರ್ಮಾನ ಮಾಡುತ್ತೇನೆ. ನಾನು ಹಿಂದೆ ಕಾಂಗ್ರೆಸ್​ನಲ್ಲೇ ಇದ್ದವನು. ಇನ್ನೂ ಯಾವ ನಿರ್ಧಾರಕ್ಕೂ ಬಂದಿಲ್ಲ.

| ಸಿ.ಪಿ.ಯೋಗೇಶ್ವರ್, ಚನ್ನಪಟ್ಟಣ ಟಿಕೆಟ್ ಆಕಾಂಕ್ಷಿ

ಚನ್ನ ಪಟ್ಟಣದಲ್ಲಿ ಯೋಗೇಶ್ವರ್ ಅವರೇ ಸ್ಪರ್ಧೆ ಮಾಡಬೇಕು. ಅವರಿಗೆ ಅವಕಾಶ ಸಿಗಬೇಕು ಎಂದು ಆಶಿಸುವೆ.

| ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ

ಸಿ.ಪಿ. ಯೋಗೇಶ್ವರ್ ಜೇಬಿನಲ್ಲಿ ಐದು ಬಿ ಫಾರಂ ಇಟ್ಟುಕೊಂಡು ತಿರುಗಾಡುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ದೊಡ್ಡ ದೊಡ್ಡ ನಾಯಕರು ಚುನಾವಣೆಯಲ್ಲಿ ಸೋತಿಲ್ಲವೇ? ನಾನು ಎರಡು ಬಾರಿ ಸೋತಿರಬಹುದು. ಆದರೆ ಸತ್ತಿಲ್ಲ. ಹೀಗಾಗಿ ಚುನಾವಣೆಗೆ ಹೆದರಿ ಕೂರುವ ಜಾಯಮಾನ ನನ್ನದಲ್ಲ.

| ನಿಖಿಲ್ ಕುಮಾರಸ್ವಾಮಿ ರಾಜ್ಯಾಧ್ಯಕ್ಷ, ಯುವ ಜನತಾದಳ

ಅಧಿಕಾರದಲ್ಲಿರುವ ಪಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿನಿಧಿಸುವ ಕ್ಷೇತ್ರವನ್ನು ಒಳಗೊಂಡ ರಾಮನಗರ ಜಿಲ್ಲೆ ಚನ್ನಪಟ್ಟಣ ಕ್ಷೇತ್ರಕ್ಕೆ ಮತ್ತೊಂದು ಪಕ್ಷದ ಪ್ರಬಲ ನಾಯಕನಿಗಾಗಿ ಗಾಳ ಹಾಕಿ ಕುಳಿತಿರುವುದು ಕಾಂಗ್ರೆಸ್​ನ ದೌರ್ಬಲ್ಯ ಬಯಲುಗೊಳಿಸಿದೆ. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ನಿರ್ಣಾಯಕರಾಗಿದ್ದು, ಕ್ಷೇತ್ರದಲ್ಲಿ ಎನ್​ಡಿಎ ಅಭ್ಯರ್ಥಿ ಗೆಲ್ಲುವುದಂತೂ ನಿಶ್ಚಿತ.

| ಸಿ.ಟಿ.ರವಿ ವಿಧಾನ ಪರಿಷತ್ ಸದಸ್ಯ

ನಿಗದಿತ ಮೊತ್ತಕ್ಕಿಂತ ಒಂದು ರೂಪಾಯಿ ಹೆಚ್ಚು ಖರ್ಚು ಮಾಡಿದರೂ ಕೂಡ ಅನರ್ಹಗೊಳ್ಳುತ್ತಾರೆ. ಆ ದೃಷ್ಟಿಯಿಂದ ಬಳ್ಳಾರಿಯ ಕಾಂಗ್ರೆಸ್ ಸಂಸದ ತುಕಾರಾಂರನ್ನು ಅನರ್ಹಗೊಳಿಸುವಂತೆ ಕೋರಿದ್ದೇವೆ

| ಆರ್.ಅಶೋಕ್ ವಿಧಾನಸಭೆ ಪ್ರತಿಪಕ್ಷ ನಾಯಕ